ನವದೆಹಲಿ: ಭಾರತದ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20ಯಿಂದ ಈಗಾಗಲೇ ನಿವೃತ್ತಿಯಾಗಿದ್ದಾರೆ. ಹೀಗಾಗಿ ಏಕದಿನ ಕ್ರಿಕೆಟ್‌ನಲ್ಲಿ ಈ ಇಬ್ಬರ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಏಕದಿನದಿಂದಲೂ ಕೊಹ್ಲಿ, ರೋಹಿತ್ ನಿವೃತ್ತಿಯಾಗುವ ಸಮಯ ದೂರವಿಲ್ಲ ಎನ್ನುತ್ತಿವೆ ಕೆಲ ಮಾಧ್ಯಮ ವರದಿಗಳು.
ಆದರೆ ಬಿಸಿಸಿಐ ಮೂಲಗಳ ಪ್ರಕಾರ, ಮಂಡಳಿಯು ಸದ್ಯ 2026ರ ಟಿ20 ವಿಶ್ವಕಪ್ ಮೇಲೆ ಗಮನ ಹರಿಸಿದ್ದು, ಕೊಹ್ಲಿ, ರೋಹಿತ್ ನಿವೃತ್ತಿ ಬಗ್ಗೆ ಸೂಕ್ತ ಸಮಯಕ್ಕೆ ಅವರೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.38 ವರ್ಷದ ರೋಹಿತ್, 36 ವರ್ಷದ ಕೊಹ್ಲಿ 2027ರ ಐಸಿಸಿ ಏಕದಿನ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಏಕದಿನ ಮಾದರಿಯಲ್ಲಿ ಮುಂದುವರಿಯುತ್ತಿದ್ದಾರೆ. ಈ ಮಾದರಿಯಲ್ಲಿ ಇಬ್ಬರೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ವಿಶ್ವಕಪ್‌ವರೆಗೆ ಕೊಹ್ಲಿ, ರೋಹಿತ್ ಲಯ, ಫಿಟ್ನೆಸ್ ಕಾಯ್ದುಕೊಳ್ಳಬಹುದಾಗಿದ್ದರೂ ಬಿಸಿಸಿಐ ತನ್ನ ವಿಶ್ವಕಪ್ ತಂಡದ ಯೋಜನೆಯಲ್ಲಿ ಇವರಿಬ್ಬರನ್ನೂ ಹೊರಗಿಡಬಹುದು ಎಂದು ಹೇಳಲಾಗುತ್ತಿದೆ. ಅಂದರೆ, ಈ ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷ ಇವರಿಬ್ಬರು ನಿವೃತ್ತಿ ಘೋಷಿಸಬೇಕಾದ ಅನಿವಾರ್ಯತೆ ಎದುರಾಗಬಹುದು ಎಂದು ವರದಿಯಾಗಿದೆ.
ಆಸೀಸ್ ಸರಣಿಯೇ ಕೊನೆ?
ಅಕ್ಟೋಬರ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ತಂಡ ಅ.19ರಿಂದ 25ರ ವರೆಗೆ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ವರದಿಗಳ ಪ್ರಕಾರ, ಆಸೀಸ್ ಸರಣಿಯೇ ಕೊಹ್ಲಿ ಹಾಗೂ ರೋಹಿತ್‌ಗೆ ವಿದಾಯದ ಸರಣಿಯಾಗುವ ಸಾಧ್ಯತೆಯಿದೆ. ಇನ್ನು, ಆಸೀಸ್ ಸರಣಿಗೂ ಮುನ್ನ ನಡೆಯಲಿರುವ ಆಸ್ಟ್ರೇಲಿಯಾ ‘ಎ’ ತಂಡದ ವಿರುದ್ಧ ಸರಣಿಯಲ್ಲಿ ಭಾರತ ‘ಎ’ ಪರ ಕೊಹ್ಲಿ, ರೋಹಿತ್ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಅವರು ಆಸೀಸ್ ಸರಣಿ ಬಳಿಕ ಏಕದಿನದಲ್ಲಿ ಮುಂದುವರಿಯಲು ನಿರ್ಧರಿಸಿದರೂ, ಬಿಸಿಸಿಐ ಅವರನ್ನು 2027ರ ಏಕದಿನ ವಿಶ್ವಕಪ್‌ವರೆಗೂ ಮುಂದುವರಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಶುಭ್‌ಮನ್ ಗಿಲ್ ಭವಿಷ್ಯದ ನಾಯಕ?
ಇಂಗ್ಲೆಂಡ್ ಸರಣಿಯ ತಮ್ಮ ಚೊಚ್ಚಲ ನಾಯಕತ್ವದಲ್ಲೇ ಗಮನ ಸೆಳೆದಿರುವ ಯುವ ಕ್ರಿಕೆಟಿಗ ಶುಭ್‌ಮನ್ ಗಿಲ್ ಭಾರತದ ಮೂರೂ ಮಾದರಿ ತಂಡಗಳ ಭವಿಷ್ಯದ ನಾಯಕರಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯಾಕಪ್ ಟಿ20ಯಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಆಡಲಿದೆ. ಆ ಟೂರ್ನಿಗೆ ಗಿಲ್‌ರನ್ನು ಉಪನಾಯಕನನ್ನಾಗಿ ನೇಮಿಸುವ ಸಾಧ್ಯತೆಯಿದೆ. ಅಲ್ಲದೆ, ರೋಹಿತ್ ಶರ್ಮಾ ನಿವೃತ್ತಿ ಬಳಿಕ ಏಕದಿನದ ನಾಯಕತ್ವವನ್ನೂ ಗಿಲ್‌ಗೆ ನೀಡುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.