ಬೆಂಗಳೂರು :" ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಚುನಾವಣೆ ಮತ್ತೊಂದು ಹೊಸ ತಿರುವು ಪಡೆದಂತೆ ಕಾಣುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಬ್ರಿಜೇಶ್ ಪಟೇಲ್ ಬಣದಿಂದ ನಾಮಪತ್ರ ಸಲ್ಲಿಸಿದ್ದ ಪತ್ರಿಕೋದ್ಯಮಿ ಕೆ.ಎನ್.ಶಾಂತ್‌ಕುಮಾರ್ ಅವರ ನಾಮಪತ್ರ ತಿರಸ್ಕೃತಗೊಂಡಿದೆ ಎನ್ನುವ ಸುದ್ದಿ ಹೊರಬಿದ್ದಿದೆ. ಆದರೆ, ಕೆಎಸ್‌ಸಿಎ ಈ ವಿಚಾರವನ್ನು ಖಚಿತಪಡಿಸಿಲ್ಲ. ಈ ನಡುವೆಯೇ, ಅಧ್ಯಕ್ಷ ಸ್ಥಾನಕ್ಕೆ ಭಾರತದ ಮಾಜಿ ವೇಗಿ, ಕೆಎಸ್‌ಸಿಎ ಮಾಜಿ ಉಪಾಧ್ಯಕ್ಷ ವೆಂಕಟೇಶ್ ಪ್ರಸಾದ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎನ್ನುವ ಸುದ್ದಿ ಸಹ ಹಬ್ಬಿದೆ.
ಹೈಕೋರ್ಟ್ ಆದೇಶದ ಮೇರೆಗೆ ಡಿ.7ರಂದು ಚುನಾವಣೆ ನಿಗದಿಯಾಗಿದೆ. ಪರಿಷ್ಕೃತ ವೇಳಾಪಟ್ಟಿ ಪ್ರಕಾರ, ಸೋಮವಾರ (ನ.24) ನಾಮಪತ್ರ ಪರಿಶೀಲನೆ ನಡೆಯಿತು. ಈ ವೇಳೆ ಶಾಂತ್‌ಕುಮಾರ್ ಅವರು ಕೆಎಸ್‌ಸಿಎ ಸದಸ್ಯತ್ವಕ್ಕೆ ಸಂಬಂಧಿಸಿ ಯಾವುದೋ ಒಂದು ಶುಲ್ಕ ಪಾವತಿಸಿಲ್ಲ ಎನ್ನುವ ಕಾರಣಕ್ಕೆ ಅವರ ನಾಮಪತ್ರವನ್ನು ಅಸಿಂಧುಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಕೆಎಸ್‌ಸಿಎಯಾಗಲಿ, ಬ್ರಿಜೇಶ್ ಬಣ ಅಥವಾ ಶಾಂತ್‌ಕುಮಾರ್ ಅವರಾಗಲಿ ಅಧಿಕೃತ ಹೇಳಿಕೆ ಅಥವಾ ಪ್ರಕಟಣೆ ನೀಡಿಲ್ಲ.
ತಡರಾತ್ರಿ ವರೆಗೂ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿರುವ ಕೆಎಸ್‌ಸಿಎ ಕಚೇರಿಯಲ್ಲಿ ತೀವ್ರ ಚರ್ಚೆ ನಡೆಯಿತು. ಆದರೆ ಚುನಾವಣೆಗೆ ಸ್ಪರ್ಧಿಸಲು ಶಾಂತ್‌ಕುಮಾರ್ ಅವರಿಗೆ ಅವಕಾಶ ನೀಡಲಾಗಿದೆಯೇ ಅಥವಾ ನಾಮಪತ್ರ ತಿರಸ್ಕೃತಗೊಳಿಸಿ ವೆಂಕಟೇಶ್ ಪ್ರಸಾದ್‌ರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆಯೇ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.