ಕಿವೀಸ್‌ ಸರಣಿಯಿಂದ ಭಾರತಕ್ಕೆ ಪಾಠ : ಈ ಸಲ ಸ್ಪಿನ್ ಪಿಚ್‌ ಇಲ್ಲ?

Published : Nov 13, 2025, 12:37 PM IST
Cricket

ಸಾರಾಂಶ

ಕಳೆದ ವರ್ಷ ಅಕ್ಟೋಬರ್‌-ನವೆಂಬರ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ತವರಿನ ಟೆಸ್ಟ್‌ ಸರಣಿಯಲ್ಲಿ ಹೀನಾಯವಾಗಿ ಸೋತು, ಭಾರೀ ಮುಖಭಂಗ ಅನುಭವಿಸಿತ್ತು. ತವರಿನ ಪಿಚ್‌ನಲ್ಲಿ, ಅದರಲ್ಲೂ ಸ್ಪಿನ್‌ ಪಿಚ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದ ಭಾರತವನ್ನು ಕಿವೀಸ್‌ ಇನ್ನಿಲ್ಲದಂತೆ ಕಾಡಿತ್ತು

 ಕೋಲ್ಕತಾ: ಕಳೆದ ವರ್ಷ ಅಕ್ಟೋಬರ್‌-ನವೆಂಬರ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ತವರಿನ ಟೆಸ್ಟ್‌ ಸರಣಿಯಲ್ಲಿ ಹೀನಾಯವಾಗಿ ಸೋತು, ಭಾರೀ ಮುಖಭಂಗ ಅನುಭವಿಸಿತ್ತು. ತವರಿನ ಪಿಚ್‌ನಲ್ಲಿ, ಅದರಲ್ಲೂ ಸ್ಪಿನ್‌ ಪಿಚ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದ ಭಾರತವನ್ನು ಕಿವೀಸ್‌ ಇನ್ನಿಲ್ಲದಂತೆ ಕಾಡಿತ್ತು. ಅಂದಿನ ಮುಖಭಂಗದಿಂದ ಪಾಠ ಕಲಿತಂತಿರುವ ಭಾರತ, ಈ ಬಾರಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೆ ಸಂಪೂರ್ಣ ಸ್ಪಿನ್‌ ಸ್ನೇಹಿ ಪಿಚ್‌ ಸಿದ್ಧಪಡಿಸುವ ಸಾಹಸಕ್ಕೆ ಕೈ ಹಾಕುವ ಸಾಧ್ಯತೆ ಕಡಿಮೆ ಎಂದೇ ವಿಶ್ಲೇಷಿಸಲಾಗುತ್ತಿದೆ. 2 ಪಂದ್ಯಗಳ ಸರಣಿ ಶುಕ್ರವಾರ ಆರಂಭಗೊಳ್ಳಲಿದೆ.

ಕಿವೀಸ್‌ ಸರಣಿಯ ಮೊದಲ ಪಂದ್ಯ ಬೆಂಗಳೂರಿನಲ್ಲಿ

ಕಿವೀಸ್‌ ಸರಣಿಯ ಮೊದಲ ಪಂದ್ಯ ಬೆಂಗಳೂರಿನಲ್ಲಿ ನಡೆದಿತ್ತು. ಅದರಲ್ಲಿ ವೇಗಿಗಳೇ ಅಬ್ಬರಿಸಿದ್ದರು. ಹೀಗಾಗಿ ಪುಣೆ, ಮುಂಬೈನ ವಾಂಖೇಡೆ ಟೆಸ್ಟ್‌ಗೆ ಭಾರತ ಸ್ಪಿನ್‌ ಪಿಚ್‌ ಸಿದ್ಧಪಡಿಸಿತ್ತು. ಆದರೆ ಈ ಎರಡು ಪಂದ್ಯಗಳಲ್ಲೂ ನ್ಯೂಜಿಲೆಂಡ್‌ ಸ್ಪಿನ್ನರ್‌ಗಳೇ ಅಧಿಪತ್ಯ ಸಾಧಿಸಿದ್ದರು. ಸ್ಪಿನ್‌ ಪಿಚ್‌ ಮೂಲಕ ಕಿವೀಸ್‌ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಪ್ರಯತ್ನದಲ್ಲಿದ್ದ ಭಾರತ, ತಾನೇ ಕಿವೀಸ್‌ ಸ್ಪಿನ್ನರ್ಸ್‌ ವಿರುದ್ಧ ಒದ್ದಾಡಿತ್ತು. ಪುಣೆ ಟೆಸ್ಟ್‌ನಲ್ಲಿ ಮಿಚೆಲ್‌ ಸ್ಯಾಂಟ್ನರ್‌ 13, ಮುಂಬೈ ಟೆಸ್ಟ್‌ನಲ್ಲಿ ಅಜಾಜ್‌ ಪಟೇಲ್‌ 11 ವಿಕೆಟ್‌ ಪಡೆದಿದ್ದರು. ಒಟ್ಟಾರೆ 3 ಪಂದ್ಯಗಳಲ್ಲಿ ಕಿವೀಸ್‌ ಸ್ಪಿನ್ನರ್‌ಗಳು 37 ವಿಕೆಟ್‌ ಎಗರಿಸಿದ್ದರು. ಅಲ್ಲದೆ, ದ.ಆಫ್ರಿಕಾ ಬ್ಯಾಟರ್‌ಗಳು ಇತ್ತೀಚೆಗೆ ಪಾಕಿಸ್ತಾನ ಸರಣಿಯಲ್ಲಿ ಸ್ಪಿನ್ನರ್‌ಗಳ ವಿರುದ್ಧ ಅಮೋಘ ಆಟವಾಡಿದ್ದರು. ಹೀಗಾಗಿ ದ.ಆಫ್ರಿಕಾ ವಿರುದ್ಧ 2 ಟೆಸ್ಟ್‌ನಲ್ಲೂ ಭಾರತ ಸಂಪೂರ್ಣ ಸ್ಪಿನ್‌ ಸ್ನೇಹಿ ಪಿಚ್‌ ಬದಲು ಸ್ಪರ್ಧಾತ್ಮಕ ಪಿಚ್‌ ಸಿದ್ಧಪಡಿಸಲು ಒಲವು ತೋರಿದೆ ಎಂದು ತಿಳಿದುಬಂದಿದೆ.

ಸರಣಿಯ ಮೊದಲ ಪಂದ್ಯಕ್ಕೆ ಆತಿಥ್ಯ ವಹಿಸಲಿರುವ ಕೋಲ್ಕತಾ

ಸರಣಿಯ ಮೊದಲ ಪಂದ್ಯಕ್ಕೆ ಆತಿಥ್ಯ ವಹಿಸಲಿರುವ ಕೋಲ್ಕತಾದ ಈಡನ್‌ ಗಾರ್ಡನ್‌ನಲ್ಲಿ ಸ್ಪಿನ್‌ ಪಿಚ್‌ಗೆ ಭಾರತ ಬೇಡಿಕೆ ಇಟ್ಟಿಲ್ಲ ಎಂದು ಸ್ವತಃ ಬಂಗಾಳ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ. ಅಲ್ಲದೆ, ಅಲ್ಲಿನ ಪಿಚ್ ಕ್ಯುರೇಟರ್‌ ಸುಜನ್‌ ಮುಖರ್ಜಿ ಪ್ರಕಾರ, ಕೋಚ್‌ ಗೌತಮ್ ಗಂಭೀರ್‌ ಅವರು ಈಗಿರುವ ಸ್ಪರ್ಧಾತ್ಮಕ ಪಿಚ್‌ ಬಗ್ಗೆ ತೃಪ್ತರಾಗಿದ್ದಾರೆ. ಹೀಗಾಗಿ ಮೊದಲ ಪಂದ್ಯದಲ್ಲಿ ಸ್ಪಿನ್‌ ಪಿಚ್‌ ಬದಲು ಸ್ಪರ್ಧಾತ್ಮಕ ಪಿಚ್‌ ಬಳಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಈ ಪಿಚ್‌ನಲ್ಲಿ ಆರಂಭದಲ್ಲಿ ಬ್ಯಾಟರ್‌ಗಳು, ವೇಗಿಗಳು ನೆರವು ಪಡೆದರೆ, 3 ದಿನಗಳ ಬಳಿಕ ಸ್ಪಿನ್ನರ್‌ಗಳು ಪ್ರಾಬಲ್ಯ ಸಾಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇನ್ನು, 2ನೇ ಟೆಸ್ಟ್‌(ನ.22-26) ನಡೆಯಲಿರುವ ಗುವಾಹಟಿಯಲ್ಲೂ ಭಾರತ ಸ್ಪಿನ್‌ ಪಿಚ್‌ ಬದಲು ಸ್ಪರ್ಧಾತ್ಮಕ ಪಿಚ್‌ನಲ್ಲೇ ಆಡುವ ಸಾಧ್ಯತೆ ಇದೆ.

ಸ್ಪಿನ್ನರ್‌ಗಳೇ ದ.ಆಫ್ರಿಕಾ ಬಲ:

ಭಾರತದಲ್ಲಿ ಹೆಚ್ಚಿನ ಪಿಚ್‌ಗಳು ಸ್ಪಿನ್ನರ್‌ಗಳಿಗೆ ನೆರವು ನೀಡುವುದರಿಂದಾಗಿ ದ.ಆಫ್ರಿಕಾ ತಂಡ ಈ ಬಾರಿ ಮೂವರು ಪ್ರಮುಖ ಸ್ಪಿನ್ನರ್‌ಗಳನ್ನು ಭಾರತದ ಸರಣಿಗೆ ಆಯ್ಕೆ ಮಾಡಿದೆ. ಅನುಭವಿ ಕೇಶವ್‌ ಮಹಾರಾಜ್‌, ಸಿಮೋನ್‌ ಹಾರ್ಮರ್‌ ಜೊತೆಗೆ ಸೆನುರಾನ್‌ ಮುತ್ತುಸ್ವಾಮಿ ತಂಡದಲ್ಲಿದ್ದಾರೆ. ಈ ಮೂವರೂ ಇತ್ತೀಚೆಗೆ ಪಾಕಿಸ್ತಾನ ಸರಣಿಯಲ್ಲಿ ಮಾರಕ ದಾಳಿ ಸಂಘಟಿಸಿ, 2 ಟೆಸ್ಟ್‌ನಲ್ಲಿ ಒಟ್ಟು 33 ವಿಕೆಟ್‌ ಪಡೆದಿದ್ದರು. ಈಗ ಭಾರತೀಯ ಬ್ಯಾಟರ್‌ಗಳನ್ನೂ ಕಾಡಲು ಸಜ್ಜಾಗಿದ್ದಾರೆ.

ಕಿವೀಸ್‌ ಸರಣಿಯಿಂದ ಬ್ಯಾಟರ್‌ಗಳಿಗೆ ಪಾಠ

ನ್ಯೂಜಿಲೆಂಡ್‌ ಸರಣಿಯಲ್ಲಿ ಅನುಭವಿಸಿದ ವೈಫಲ್ಯದಿಂದ ಭಾರತ ತಂಡ ಪಾಠ ಕಲಿತಿದೆ ಎಂದು ಸಹಾಯಕ ಕೋಚ್‌ ರ್‍ಯಾನ್‌ ಟೆನ್ ಡೊಶ್ಕಾಟೆ ಹೇಳಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನ್ಯೂಜಿಲೆಂಡ್ ಸರಣಿಯಿಂದ ನಾವು ಪಾಠ ಕಲಿತಿದ್ದೇವೆ ಎಂದು ಭಾವಿಸುತ್ತೇವೆ. ಸ್ಪಿನ್ ವಿರುದ್ಧ ಹೇಗೆ ಆಡಬೇಕೆಂಬುದರ ಬಗ್ಗೆ ನಾವು ಕೆಲವು ಯೋಜನೆ ಹಾಕಿಕೊಂಡಿದ್ದೇವೆ. ಈ 2 ಪಂದ್ಯಗಳಲ್ಲಿ ಇದು ಬಹಳ ಮುಖ್ಯ’ ಎಂದು ಹೇಳಿದರು.

ನಿತೀಶ್‌ ‘ಎ’ ತಂಡಕ್ಕೆ, ಆಡುವ 11ರಲ್ಲಿ ಧ್ರುವ್‌

ಭಾರತ ಟೆಸ್ಟ್‌ ತಂಡಕ್ಕೆ ಆಯ್ಕೆಯಾಗಿದ್ದ ನಿತೀಶ್‌ ಕುಮಾರ್‌ ರೆಡ್ಡಿ ತಂಡದಿಂದ ಬಿಡುಗಡೆಗೊಂಡಿದ್ದು, ದ.ಆಫ್ರಿಕಾ ‘ಎ’ ವಿರುದ್ಧ ಅನಧಿಕೃತ ಏಕದಿನ ಸರಣಿಗಾಗಿ ಭಾರತ ‘ಎ’ ತಂಡ ಸೇರ್ಪಡೆಗೊಂಡಿದ್ದಾರೆ. ಸರಣಿ ಗುರುವಾರ ಆರಂಭಗೊಳ್ಳಲಿದೆ. ಇನ್ನು, ಭಾರತ ಟೆಸ್ಟ್‌ ತಂಡದಲ್ಲಿ ನಿತೀಶ್‌ ಬದಲು ವಿಕೆಟ್‌ ಕೀಪರ್‌ ಧ್ರುವ್‌ ಜುರೆಲ್‌ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸ್ವತಃ ಸಹಾಯಕ ಕೋಚ್‌ ಟೆನ್‌ ಡೊಶ್ಕಾಟೆ ಹೇಳಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಟಿ20 ವಿಶ್ವಕಪ್‌ ಮುನ್ನ ಭಾರತಕ್ಕೆ ಕೊನೆ ಚಾಲೆಂಜ್‌
ಭಾರತಕ್ಕೆ ಬರದಿದ್ದರೆ ವಿಶ್ವಕಪ್‌ನಿಂದ ಹೊರಕ್ಕೆ : ಬಾಂಗ್ಲಾಗೆ ಐಸಿಸಿ ಎಚ್ಚರಿಕೆ