;Resize=(412,232))
ಲಖನೌ: 2026ರ ಐಪಿಎಲ್‌ನಲ್ಲಿ ಪ್ಲೇ-ಆಫ್‌ಗೆ ಪ್ರವೇಶ ಪಡೆಯುವ ಚೆನ್ನೈ ಸೂಪರ್ ಕಿಂಗ್ಸ್‌ನ ಆಸೆಗೆ ಬಲವಾದ ಪೆಟ್ಟು ಬಿದ್ದಿದೆ. ಶುಕ್ರವಾರ ಇಲ್ಲಿ ನಡೆದ ಲಖನೌ ಸೂಪರ್‌ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ 7 ವಿಕೆಟ್ ಸೋಲು ಅನುಭವಿಸಿತು. ಈ ಸೋಲು, ಚೆನ್ನೈನ ನೆಟ್ ರನ್‌ರೇಟ್‌ಗೂ ಬಲವಾದ ಪೆಟ್ಟು ನೀಡಿತು.
ಮೊದಲು ಬ್ಯಾಟ್ ಮಾಡಿದ ಚೆನ್ನೈ 5 ವಿಕೆಟ್‌ಗೆ 187 ರನ್ ಗಳಿಸಿತು. ಸಾಧಾರಣ ಆರಂಭ ಪಡೆದರೂ, ಕಾರ್ತಿಕ್ ಶರ್ಮಾ ಅವರ ಸ್ಫೋಟಕ ಅರ್ಧಶತಕ (42 ಎಸೆತದಲ್ಲಿ 71 ರನ್, 6 ಬೌಂಡರಿ, 5 ಸಿಕ್ಸರ್), ಡೆವಾಲ್ಡ್ ಬ್ರೆವಿಸ್ (25) ಹಾಗೂ ಶಿವಂ ದುಬೆ (32) ಅವರ ಉಪಯುಕ್ತ ರನ್ ಕೊಡುಗೆಗಳ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಲಖನೌ ಪರ ವೇಗಿ ಆಕಾಶ್ ಸಿಂಗ್ 3 ವಿಕೆಟ್ ಕಿತ್ತರು.
ಲಖನೌಗೆ ಮಿಚೆಲ್ ಮಾರ್ಷ್ ಹಾಗೂ ಜೋಶ್ ಇಂಗ್ಲಿಸ್ ಸ್ಫೋಟಕ ಆರಂಭ ನೀಡಿದರು. ಮೊದಲ 6 ಓವರಲ್ಲಿ ವಿಕೆಟ್ ನಷ್ಟವಿಲ್ಲದೆ 81 ರನ್ ಕಲೆಹಾಕಿದರು. ಇವರಿಬ್ಬರ ನಡುವೆ ಮೊದಲ ವಿಕೆಟ್‌ಗೆ 11.4 ಓವರಲ್ಲಿ 135 ರನ್ ಜೊತೆಯಾಟ ಮೂಡಿಬಂತು. ಇಂಗ್ಲಿಸ್ 36 ರನ್ ಗಳಿಸಿ ಔಟಾದರು.
38 ಎಸೆತದಲ್ಲಿ 9 ಬೌಂಡರಿ, 7 ಸಿಕ್ಸರ್‌ನೊಂದಿಗೆ 90 ರನ್ ಚಚ್ಚಿ ಶತಕದ ನಿರೀಕ್ಷೆಯಲ್ಲಿದ್ದ ಮಾರ್ಷ್, ರನೌಟ್ ಆಗಿ ನಿರೀಕ್ಷೆ ಅನುಭವಿಸಿದರು. ಕೊನೆ 24 ಎಸೆತದಲ್ಲಿ ಗೆಲ್ಲಲು 24 ರನ್ ಬೇಕಿತ್ತು. ಅನ್ಶುಲ್ ಕಾಂಬೋಜ್ ಎಸೆದ 17ನೇ ಓವರಲ್ಲಿ ನಿಕೋಲಸ್ ಪೂರಾನ್ ಸತತ 4 ಸಿಕ್ಸರ್ ಸಿಡಿಸಿ, 16.4 ಓವರಲ್ಲೇ ತಂಡವನ್ನು ಗೆಲ್ಲಿಸಿದರು. 17 ಎಸೆತದಲ್ಲಿ ಪೂರಾನ್ ಔಟಾಗದೆ 32 ರನ್ ಗಳಿಸಿದರು.
ಸ್ಕೋರ್: ಚೆನ್ನೈ 20 ಓವರಲ್ಲಿ 187/5 (ಕಾರ್ತಿಕ್ 71, ದುಬೆ 32*, ಆಕಾಶ್ 3-26), ಲಖನೌ 16.4 ಓವರಲ್ಲಿ 188/3 (ಮಾರ್ಷ್ 90, ಇಂಗ್ಲಿಸ್ 36, ಪೂರಾನ್ 32*, ಮುಕೇಶ್ 1-24) ಪಂದ್ಯಶ್ರೇಷ್ಠ: ಮಾರ್ಷ್