ಕೆಎಸ್‌ಸಿಎ ಆಯೋಜಿಸುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 3ನೇ ಆವೃತ್ತಿ ಚಾಲನೆ : ಎರಡೂವರೆ ವಾರಗಳ ಕಾಲ ನಡೆಯಲಿರುವ ಟೂರ್ನಿ

KannadaprabhaNewsNetwork |  
Published : Aug 15, 2024, 01:49 AM ISTUpdated : Aug 15, 2024, 03:12 AM IST
ಬೆಂಗಳೂರು ತಂಡವನ್ನು ಮುನ್ನಡೆಸಲಿರುವ ತಾರಾ ಆಟಗಾರ ಮಯಾಂಕ್‌ ಅಗರ್‌ವಾಲ್‌.  | Kannada Prabha

ಸಾರಾಂಶ

ಸೆ.1ರ ವರೆಗೂ ನಡೆಯಲಿರುವ ಮಹಾರಾಜ ಟ್ರೋಫಿ. 6 ತಂಡಗಳು ಭಾಗಿ. ಲೀಗ್‌ ಹಂತದಲ್ಲಿ ಪ್ರತಿ ದಿನ 2 ಪಂದ್ಯ. ಫೈನಲ್‌ ಸೇರಿ ಒಟ್ಟು 33 ಪಂದ್ಯಗಳು. ಎಲ್ಲಾ ಪಂದ್ಯಗಳಿಗೂ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ. ಮಯಾಂಕ್‌, ಪಡಿಕ್ಕಲ್‌, ಪಾಂಡೆ ಸೇರಿ ಹಲವು ತಾರಾ ಆಟಗಾರರು ಭಾಗಿ.

 ಬೆಂಗಳೂರು :  ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಆಯೋಜಿಸುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 3ನೇ ಆವೃತ್ತಿಗೆ ಗುರುವಾರ ಚಾಲನೆ ದೊರೆಯಲಿದೆ. ಎರಡೂವರೆ ವಾರಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ 6 ತಂಡಗಳು ಪಾಲ್ಗೊಳ್ಳಲಿದ್ದು, ಫೈನಲ್‌ ಸೇರಿ ಒಟ್ಟು 33 ಪಂದ್ಯಗಳು ನಡೆಯಲಿವೆ.

ಈ ಮೊದಲು ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಹೆಸರಿನಲ್ಲಿ ನಡೆಯುತ್ತಿದ್ದ ಟೂರ್ನಿಯು, 2019ರಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಆರೋಪ ಕೇಳಿ ಬಂದ ಕಾರಣ ಸ್ಥಗಿತಗೊಳಿಸಲಾಗಿತ್ತು. ಬಳಿಕ 2022ರಲ್ಲಿ ಮಹಾರಾಜ ಟ್ರೋಫಿ ಹೆಸರಿನಲ್ಲಿ ಟೂರ್ನಿಯನ್ನು ಪುನಾರಂಭಿಸಲಾಯಿತು.

ಮೊದಲ ಆವೃತ್ತಿಯಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್‌ ತಂಡ ಚಾಂಪಿಯನ್‌ ಆದರೆ, 2023ರಲ್ಲಿ ಅಂದರೆ ಕಳೆದ ಆವೃತ್ತಿಯಲ್ಲಿ ಹುಬ್ಬಳ್ಳಿ ಟೈಗರ್ಸ್‌ ಪ್ರಶಸ್ತಿ ಎತ್ತಿಹಿಡಿದಿತ್ತು. ಬೆಂಗಳೂರಲ್ಲೇ ಎಲ್ಲಾ ಪಂದ್ಯಗಳು

ಟೂರ್ನಿಯ ಎಲ್ಲಾ 33 ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಯಲಿದೆ. ಇದಕ್ಕಾಗಿ ಕೆಎಸ್‌ಸಿಎ ಹಲವು ಪಿಚ್‌ಗಳನ್ನು ಸಿದ್ಧಪಡಿಸಿದ್ದು, ಟೂರ್ನಿಯ ಪ್ರತಿ ಪಂದ್ಯವೂ ಸ್ಪರ್ಧಾತ್ಮಕವಾಗಿರುವಂತೆ ನೋಡಿಕೊಳ್ಳಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಟೂರ್ನಿ ಮಾದರಿ ಹೇಗೆ?

ಲೀಗ್‌ ಹಂತ ಡಬಲ್‌ ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯಲಿದ್ದು, ಪ್ರತಿ ತಂಡವು ಉಳಿದ 5 ತಂಡಗಳ ವಿರುದ್ಧ ತಲಾ 2 ಬಾರಿ ಆಡಲಿದೆ. ಆ.29ರ ವರೆಗೂ ಲೀಗ್‌ ಪಂದ್ಯಗಳು ನಡೆಯಲಿವೆ. ಲೀಗ್‌ ಹಂತದ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ಅಗ್ರ-4 ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ. ಮೊದಲ ಸ್ಥಾನ ಪಡೆದ ತಂಡ 4ನೇ ಸ್ಥಾನ ಪಡೆದ ತಂಡದ ವಿರುದ್ಧ ಆಡಲಿದ್ದು, ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದ ತಂಡಗಳು ಮತ್ತೊಂದು ಸೆಮೀಸ್‌ನಲ್ಲಿ ಮುಖಾಮುಖಿಯಾಗಲಿವೆ. ಆ.30, 31ರಂದು ಸೆಮಿಫೈನಲ್‌ ಪಂದ್ಯಗಳು ನಡೆಯಲಿದ್ದು, ಸೆ.1ಕ್ಕೆ ಫೈನಲ್‌ ನಿಗದಿಯಾಗಿದೆ. 2 ಪಂದ್ಯಗಳು ಇರುವ ದಿನಗಳಂದು ಮೊದಲ ಪಂದ್ಯ ಮಧ್ಯಾಹ್ನ 3ಕ್ಕೆ, 2ನೇ ಪಂದ್ಯ ಸಂಜೆ 7ಕ್ಕೆ ಆರಂಭಗೊಳ್ಳಲಿದೆ. ಸೆಮೀಸ್‌, ಫೈನಲ್‌ ಪಂದ್ಯಗಳು ಸಂಜೆ 7ಕ್ಕೆ ಶುರುವಾಗಲಿವೆ.ಇಂದು ಬೆಂಗಳೂರು vs ಗುಲ್ಬರ್ಗಾ,

ಶಿವಮೊಗ್ಗ vs ಮೈಸೂರು ಸೆಣಸು

ಉದ್ಘಾಟನಾ ಪಂದ್ಯದಲ್ಲಿ ಮೊದಲ ಆವೃತ್ತಿಯ ಚಾಂಪಿಯನ್‌ ಗುಲ್ಬರ್ಗಾ ಮಿಸ್ಟಿಕ್ಸ್‌ ಹಾಗೂ ಬೆಂಗಳೂರು ಬ್ಲಾಸ್ಟರ್ಸ್‌ ಸೆಣಸಲಿದ್ದು, ದಿನದ 2ನೇ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್‌-ಅಪ್‌ ಮೈಸೂರು ವಾರಿಯರ್ಸ್‌ಗೆ ಶಿವಮೊಗ್ಗ ಲಯನ್ಸ್‌ ಎದುರಾಗಲಿದೆ. 2ನೇ ದಿನದ ಮೊದಲ ಪಂದ್ಯದಲ್ಲಿ ಉಳಿದ ಎರಡು ತಂಡಗಳಾದ ಹುಬ್ಬಳ್ಳಿ ಟೈಗರ್ಸ್‌ ಹಾಗೂ ಮಂಗಳೂರು ಡ್ರ್ಯಾಗನ್ಸ್‌ ಮುಖಾಮುಖಿಯಾಗಲಿವೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಪಾಕಿಸ್ತಾನದಿಂದ ಯು-ಟರ್ನ್‌: ಟಿ20 ವಿಶ್ವಕಪ್ಪಲ್ಲಿ ಭಾರತ ವಿರುದ್ಧ ಕಣಕ್ಕೆ?
ಆರ್‌ಸಿಬಿ ಖರೀದಿಗೆ ಮ್ಯಾಂಚೆಸ್ಟರ್‌ ಯುನೈಟೆಡ್‌ ಆಸಕ್ತಿ!