ಅರ್ಗತಾಲಾ: ಕರ್ನಾಟಕ ಕ್ರಿಕೆಟ್ ತಂಡದ ನಾಯಕ ಮಯಾಂಕ್ ಅಗರ್‌ವಾಲ್ ವಿಮಾನದಲ್ಲಿ ಜ್ಯೂಸ್ ಕುಡಿದು ಅಸ್ವಸ್ಥರಾದ ಘಟನೆ ಮಂಗಳವಾರ ನಡೆದಿದೆ.
ಸೋಮವಾರ ತ್ರಿಪುರಾ ವಿರುದ್ಧದ ರಣಜಿ ಪಂದ್ಯವನ್ನು ಗೆದ್ದ ಬಳಿಕ, ಮಂಗಳವಾರ ಮಧ್ಯಾಹ್ನ ರಾಜ್ಯ ತಂಡವು ತನ್ನ ಮುಂದಿನ ಪಂದ್ಯವನ್ನಾಡಲು ನವದೆಹಲಿ ಮಾರ್ಗವಾಗಿ ಸೂರತ್‌ಗೆ ತೆರಳುತಿತ್ತು.
ಈ ವೇಳೆ ಇಂಡಿಗೋ ವಿಮಾನದಲ್ಲಿ ದ್ರವ ಪದಾರ್ಥವನ್ನು ಸೇವಿಸುತ್ತಿದ್ದಂತೆ ಮಯಾಂಕ್‌ಗೆ ಹೊಟ್ಟೆ ನೋವು, ಗಂಟಲು ಹಾಗೂ ಬಾಯಿ ಉರಿ ಶುರುವಾಗಿದ್ದು, ಎರಡು ಬಾರಿ ವಾಂತಿ ಸಹ ಮಾಡಿಕೊಂಡಿದ್ದಾರೆ.
ಕೂಡಲೇ ಮಯಾಂಕ್‌ರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಿಗೆ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಯಿತು. ಅವರಿಗೆ ಯಾವುದೇ ಅಪಾಯವಿಲ್ಲ ಎಂದು ತಿಳಿದುಬಂದಿದೆ.
ಬುಧವಾರ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿ ಬೆಂಗಳೂರಿಗೆ ಬರಲಿದ್ದು, ಸ್ಥಳೀಯ ವೈದ್ಯರನ್ನು ಸಂಪರ್ಕಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರೈಲ್ವೇಸ್ ವಿರುದ್ಧದ ಪಂದ್ಯದಿಂದ ಹೊರಕ್ಕೆ?
ಮಯಾಂಕ್ ಫೆ.2ರಿಂದ ಸೂರತ್‌ನಲ್ಲಿ ನಡೆಯಲಿರುವ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಆಡುವುದಿಲ್ಲ ಎಂದು ತಿಳಿದುಬಂದಿದೆ.
ಮಯಾಂಕ್‌ರನ್ನು ಅಗರ್ತಾಲಾದಲ್ಲಿ ಇಳಿಸಿ ತನ್ನ ಪ್ರಯಾಣ ಮುಂದುವರಿಸಿದ ತಂಡ, ಸೂರತ್ ತಲುಪಿದೆ. ಉಪನಾಯಕ ನಿಕಿನ್ ಜೋಸ್ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.