ಅರ್ಗತಾಲಾ: ವಿಮಾನದಲ್ಲಿ ನೀರು ಎಂದು ಭಾವಿಸಿ ದ್ರವ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡಿದ್ದ ಕರ್ನಾಟಕ ಕ್ರಿಕೆಟ್ ತಂಡದ ನಾಯಕ ಮಯಾಂಕ್ ಅಗರ್‌ವಾಲ್ ಆರೋಗ್ಯ ಚೇತರಿಸಿದೆ.
ಸದ್ಯ ಅವರು ಬಹುತೇಕ ಗುಣಮುಖರಾಗಿದ್ದು, ಅರ್ಗತಾಲಾದ ಖಾಸಗಿ ಆಸ್ಪತ್ರೆಯಿಂದ ಬೆಂಗಳೂರಿನ ಆಸ್ಪತ್ರೆಗೆ ಕರೆತರಲಾಗಿದೆ.
ಮಂಗಳವಾರ ಮಧ್ಯಾಹ್ನ ಕರ್ನಾಟಕ ತಂಡ ತನ್ನ ಮುಂದಿನ ರಣಜಿ ಪಂದ್ಯವಾಡಲು ನವದೆಹಲಿ ಮಾರ್ಗವಾಗಿ ಸೂರತ್‌ಗೆ ತೆರಳುತ್ತಿತ್ತು.
ಈ ವೇಳೆ ಇಂಡಿಗೋ ವಿಮಾನದಲ್ಲಿ ತಮ್ಮ ಆಸನದ ಮುಂದಿದ್ದ ದ್ರವ ಪದಾರ್ಥವನ್ನು ಮಯಾಂಕ್ ಸೇವಿಸಿದ್ದು, ತಕ್ಷಣ ಅವರಿಗೆ ಹೊಟ್ಟೆ ನೋವು, ಗಂಟಲು ಹಾಗೂ ಬಾಯಿ ಉರಿ ಶುರುವಾಗಿದೆ.
ಹೀಗಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗಿದೆ.
ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಕರೆ ತರಲಾಗಿದೆ. ಇನ್ನು, ಘಟನೆ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.