ಮತ್ತೆ ಬಂತು ಮಿನಿ ಒಲಿಂಪಿಕ್ಸ್‌ ಇಂದಿನಿಂದ ಕಾಮನ್‌ವೆಲ್ತ್‌ ಗೇಮ್ಸ್‌ 2026

Published : Jul 23, 2026, 02:19 PM IST
Commonwealth Games 2026

ಸಾರಾಂಶ

ಮಿನಿ ಒಲಿಂಪಿಕ್ಸ್‌’ ಖ್ಯಾತಿಯ ಕಾಮನ್‌ವೆಲ್ತ್‌ ಗೇಮ್ಸ್‌ ಮತ್ತೆ ಆಗಮಿಸಿದೆ. 23ನೇ ಆವೃತ್ತಿಯ ಬಹುರಾಷ್ಟ್ರೀಯ ಕ್ರೀಡಾಕೂಟವು ಸ್ಕಾಟ್ಲೆಂಡ್‌ನ ಅತಿ ದೊಡ್ಡ ನಗರವಾಗಿರುವ ಗ್ಲಾಸ್ಗೋದಲ್ಲಿ ಗುರುವಾರದಿಂದ ಆರಂಭಗೊಳ್ಳಲಿದೆ.

  ಗ್ಲಾಸ್ಗೋ: ‘ಮಿನಿ ಒಲಿಂಪಿಕ್ಸ್‌’ ಖ್ಯಾತಿಯ ಕಾಮನ್‌ವೆಲ್ತ್‌ ಗೇಮ್ಸ್‌ ಮತ್ತೆ ಆಗಮಿಸಿದೆ. 23ನೇ ಆವೃತ್ತಿಯ ಬಹುರಾಷ್ಟ್ರೀಯ ಕ್ರೀಡಾಕೂಟವು ಸ್ಕಾಟ್ಲೆಂಡ್‌ನ ಅತಿ ದೊಡ್ಡ ನಗರವಾಗಿರುವ ಗ್ಲಾಸ್ಗೋದಲ್ಲಿ ಗುರುವಾರದಿಂದ ಆರಂಭಗೊಳ್ಳಲಿದೆ. 11 ದಿನಗಳ ಕ್ರೀಡಾಕೂಟದಲ್ಲಿ ಭಾರತ ಸೇರಿದಂತೆ ವಿಶ್ವದೆಲ್ಲೆಡೆಯ 74 ದೇಶಗಳ 3000ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.

ಒಲಿಂಪಿಕ್ಸ್‌ನಂತೆ ಕಾಮನ್‌ವೆಲ್ತ್‌ ಗೇಮ್ಸ್‌ ಕೂಡಾ ಪ್ರತಿ 4 ವರ್ಷಗಳಿಗೊಮ್ಮೆ ನಡೆಯುತ್ತವೆ. 2022ರ ಗೇಮ್ಸ್‌ಗೆ ಬರ್ಮಿಂಗ್‌ಹ್ಯಾಮ್‌ ಆತಿಥ್ಯ ವಹಿಸಿತ್ತು. ಆದರೆ ಈ ಬಾರಿ ಕ್ರೀಡಾಕೂಟದಲ್ಲಿ ಹೆಚ್ಚೇನೂ ಗೇಮ್ಸ್‌ಗಳಿಲ್ಲ. ವೆಚ್ಚ ಕಡಿತ ಕಾರಣಕ್ಕೆ ಹಲವು ಪ್ರಮುಖ ಕ್ರೀಡೆಗಳನ್ನು ಕೈ ಬಿಡಲಾಗಿದೆ. ಉಳಿದಂತೆ ಅಥ್ಲೆಟಿಕ್ಸ್‌, ವೇಟ್‌ಲಿಫ್ಟಿಂಗ್‌, ಈಜು, ಸೈಕ್ಲಿಂಗ್‌, ಬಾಸ್ಕೆಟ್‌ಬಾಲ್‌ ಸೇರಿದಂತೆ 10 ಕ್ರೀಡೆಗಳಿವೆ. ಈ ಪೈಕಿ ಪ್ಯಾರಾ ಕ್ರೀಡಾಪಟುಗಳ 6 ಕ್ರೀಡೆಗಳೂ ಇವೆ.

ಸ್ಕಾಟ್ಲೆಂಡ್‌ನ ಒಟ್ಟು 7 ಕ್ರೀಡಾಂಗಣಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಆ.2ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಅದರಲ್ಲಿ 2030ರ ಆತಿಥ್ಯ ಹಕ್ಕು ಹೊಂದಿರುವ ಭಾರತಕ್ಕೆ ಧ್ವಜ ಹಸ್ತಾಂತರ ನಡೆಯಲಿದೆ.

4ನೇ ಬಾರಿ ಸ್ಕಾಟ್ಲೆಂಡ್‌ ಆತಿಥ್ಯ:

ಸ್ಕಾಟ್ಲೆಂಡ್‌ನಲ್ಲಿ 4ನೇ ಬಾರಿ ಕಾಮನ್‌ವೆಲ್ತ್‌ ಗೇಮ್ಸ್‌ ಆಯೋಜನೆಗೊಳ್ಳಲಿದೆ. 1970ರಲ್ಲಿ ಮೊದಲ ಬಾರಿ ಎಡಿನ್‌ಬರ್ಗ್‌ನಲ್ಲಿ ಗೇಮ್ಸ್ ನಡೆದಿತ್ತು. 1986ರ ಗೇಮ್ಸ್‌ಗೂ ಎಡಿನ್‌ಬರ್ಗ್‌ ಆತಿಥ್ಯ ವಹಿಸಿತ್ತು. ಬಳಿಕ 2014ರಲ್ಲಿ ಗ್ಲಾಸ್ಗೋದಲ್ಲಿ ಗೇಮ್ಸ್‌ ಆಯೋಜಿಸಲಾಗಿತ್ತು. ಆಗ 18 ಕ್ರೀಡೆಗಳಿದ್ದವು. 12 ವರ್ಷಗಳ ಅಂತರದಲ್ಲಿ ಮತ್ತೊಮ್ಮೆ ಜಾಗತಿಕ ಮಟ್ಟದ ಕ್ರೀಡೆಗೆ ಗ್ಲಾಸ್ಗೋ ಆತಿಥ್ಯ ವಹಿಸಲು ಸಜ್ಜಾಗಿದೆ.

ಬ್ರಿಟೀಷರಿಂದ ಆಳಲ್ಪಟ್ಟ ದೇಶಗಳು ಪಾಲ್ಗೊಳ್ಳುವ ಗೇಮ್ಸ್‌ ಕಾಮನ್‌ವೆಲ್ತ್‌!

ಬ್ರಿಟೀಷರ ಆಳ್ವಿಕೆಗೆ ಒಳಪಟ್ಟ ದೇಶಗಳೆಲ್ಲಾ ಒಟ್ಟಿಗೆ ಪಾಲ್ಗೊಳ್ಳುವ ಕ್ರೀಡಾಕೂಟವೇ ಕಾಮನ್‌ವೆಲ್ತ್‌ ಗೇಮ್ಸ್‌. ಇದು ಮೊದಲ ಬಾರಿ ನಡೆದಿದ್ದು 1930ರಲ್ಲಿ. ಫಿಫಾ ವಿಶ್ವಕಪ್‌ ಕೂಡಾ ಅದೇ ವರ್ಷ ಶುರುವಾಗಿತ್ತು ಎಂಬುದು ಗಮನಾರ್ಹ. ಈ ಗೇಮ್ಸ್‌ ಒಲಿಂಪಿಕ್ಸ್‌ನಂತೆಯೇ ಪ್ರತಿ 4 ವರ್ಷಗಳಿಗೊಮ್ಮೆ ನಡೆಯುತ್ತದೆ. 70ಕ್ಕೂ ಹೆಚ್ಚು ದೇಶಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತವೆ.

ಕಳೆದ ಸಲ ಆಡಿಸಿದ್ದ 10 ಕ್ರೀಡೆಗೆ ಕೊಕ್: ಕ್ರಿಕೆಟ್, ಶೂಟಿಂಗ್‌, ಹಾಕಿ ಇಲ್ಲ!

ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಈ ಬಾರಿ ಹಲವು ಕ್ರೀಡೆಗಳನ್ನು ಕೈ ಬಿಡಲಾಗಿದೆ. ಕಳೆದ ಬಾರಿ ಬರ್ಮಿಂಗ್‌ಹ್ಯಾಮ್‌ನಲ್ಲಿ 20 ಕ್ರೀಡೆಗಳನ್ನು ನಡೆಸಲಾಗಿತ್ತು. ಅದರಲ್ಲಿ ಮಹಿಳಾ ಕ್ರಿಕೆಟ್‌ ಕೂಡಾ ಇತ್ತು. ಆದರೆ ಈ ಬಾರಿ ಕ್ರಿಕೆಟ್‌, ಬ್ಯಾಡ್ಮಿಂಟನ್‌, ಶೂಟಿಂಗ್‌, ಹಾಕಿ, ಕುಸ್ತಿ ಸೇರಿ ಪ್ರಮುಖ ಕ್ರೀಡೆಗಳಿಗೆ ಕೊಕ್‌ ನೀಡಲಾಗಿದೆ. ಇದರಿಂದ ಭಾರತದ ಪದಕ ಗಳಿಕೆ ಮೇಲೆ ಭಾರೀ ಹೊಡೆತ ಬೀಳುವುದು ಖಚಿತ. ಕಳೆದ ಬಾರಿ ಭಾರತ 61 ಪದಕ ಗೆದ್ದಿತ್ತು. ಅದರಲ್ಲಿ 25 ಪದಕಗಳು ಕುಸ್ತಿ, ಬ್ಯಾಡ್ಮಿಂಟನ್‌, ಶೂಟಿಂಗ್‌, ಟೇಬಲ್‌ ಟೆನಿಸ್‌ನಿಂದಲೇ ಬಂದಿದ್ದವು. ಹೀಗಾಗಿ ಈ ವರ್ಷ ಪದಕ ಗಳಿಕೆ ಕಡಿಮೆ ಆಗುವ ಸಾಧ್ಯತೆಯಿದೆ. ಆದರೆ 2030ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಬಹುತೇಕ ಎಲ್ಲಾ ಕ್ರೀಡೆಗಳನ್ನು ಆಯೋಜಿಸಲು ಭಾರತ ಚಿಂತನೆ ನಡೆಸುತ್ತಿದೆ.

ಕಳೆದ ಸಲ ₹7500 ಕೋಟಿ, ಈಗ ₹2000 ಕೋಟಿ ವೆಚ್ಚ

ಹಲವು ಕ್ರೀಡೆಗಳನ್ನು ಕೈಬಿಟ್ಟಿರುವ ಕಾರಣ ಈ ಬಾರಿ ಆಯೋಜನೆಯ ವೆಚ್ಚ ಕಡಿತಗೊಂಡಿದೆ. ಈಗಾಗಲೇ ಇರುವ ಕ್ರೀಡಾಂಗಣಗಳು, ಮೂಲಸೌಕರ್ಯಗಳನ್ನೇ ಅವಲಂಬಿಸಿ ಗೇಮ್ಸ್‌ ಆಯೋಜಿಸುತ್ತಿರುವುದರಿಂದ ಕಳೆದ ಬಾರಿಗಿಂತ ಶೇ.60ರಷ್ಟು ವೆಚ್ಚ ಕಡಿಮೆಯಾಗಲಿದೆ. 2022ರಲ್ಲಿ ಬರ್ಮಿಂಗ್‌ಹ್ಯಾಮ್‌ ಗೇಮ್ಸ್‌ಗೆ ₹7500 ಕೋಟಿ ವೆಚ್ಚವಾಗಿತ್ತು. ಈ ಬಾರಿ ₹2000 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಕುರುಡರಿಗೂ ಸ್ಪರ್ಶ ಅನುಭವ ಕೊಡುವ ರೀತಿ ಪದಕ ವಿನ್ಯಾಸ

ಬಲ್ಗೇರಿಯಾ ಮೂಲದ ಕಲಾವಿದೆ ಮಿಲಿಟ್ಸಾ ಮಿಲೆಂಕೋವಾ ಎಂಬವರು ಈ ಬಾರಿ ಕ್ರೀಡಾಕೂಟದ ಪದಕಗಳನ್ನು ವಿನ್ಯಾಸಗೊಳಿಸಿದ್ದಾರೆ. ಗ್ಲಾಸ್ಗೋದ ಪರಂಪರೆ, ಸಂಸ್ಕೃತಿ, ಸಂಪ್ರದಾಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಇದನ್ನು ನಿರ್ಮಿಸಲಾಗಿದ್ದು, ತ್ರಿಕೋನ ಆಕಾರದಲ್ಲಿದೆ. ಕುರುಡರೂ ಕೂಡಾ ಮುಟ್ಟಿ ನೋಡಿ ಅನುಭವಿಸುವ ರೀತಿಯಲ್ಲಿ ‘ಬ್ರೈಲ್‌’ ಮೂಲಕ ಪದಕಗಳನ್ನು ವಿನ್ಯಾಸಗೊಳಿಸಿದ್ದು, ಪ್ರಶಂಸೆಗೆ ಪಾತ್ರವಾಗಿದೆ. ಒಟ್ಟು 215 ಪದಕ ವಿಭಾಗಗಳಲ್ಲಿ 1168 ಪದಕಗಳನ್ನು ಈ ಬಾರಿ ಸ್ಪರ್ಧಿಗಳಿಗೆ ನೀಡಲಾಗುತ್ತದೆ.

ಅವನತಿಯ ಅಂಚಿನಲ್ಲಿ ಗೇಮ್ಸ್‌: ದೇಶಗಳಿಗಿಲ್ಲ ಆತಿಥ್ಯದ ಆಸಕ್ತಿ!

ಮಿನಿ ಒಲಿಂಪಿಕ್ಸ್‌ ಎಂಬ ಹೆಗ್ಗಳಿಕೆ ಇದ್ದರೂ ಕಾಮನ್‌ವೆಲ್ತ್‌ ಗೇಮ್ಸ್‌ನ ಆತಿಥ್ಯಕ್ಕೆ ಈಗ ಹಲವು ದೇಶಗಳು ನಿರಾಸಕ್ತಿ ತೋರುತ್ತಿವೆ. ಈ ಮೊದಲು, ಆಸ್ಟ್ರೇಲಿಯಾದ ವಿಕ್ಟೋರಿಯಾ ನಗರವು 2026ರ ಗೇಮ್ಸ್‌ನ ಆತಿಥ್ಯ ಹಕ್ಕು ಪಡೆದಿತ್ತು. ಗೋಲ್ಡ್‌ಕೋಸ್ಟ್‌, ಕ್ವೀನ್ಸ್‌ಲ್ಯಾಂಡ್‌ ಸಹ ಆತಿಥ್ಯದ ನಗರಗಳಾಗಿ ಆಯ್ಕೆಯಾಗಿದ್ದವು. ಆದರೆ ವೆಚ್ಚ ಹೆಚ್ಚಳ ಕಾರಣದಿಂದ ಆತಿಥ್ಯ ಹಕ್ಕಿನಿಂದ ವಿಕ್ಟೋರಿಯಾ ಹಿಂದಕ್ಕೆ ಸರಿಯಿತು. ಆ ಬಳಿಕ ಗೋಲ್ಡ್‌ಕೋಸ್ಟ್‌, ಕ್ವೀನ್ಸ್‌ಲ್ಯಾಂಡ್‌ ಕೂಡಾ ಆಸಕ್ತಿ ತೋರಲಿಲ್ಲ. ಹೀಗಾಗಿ 2024ರಲ್ಲಿ ಕೊನೆ ಆಯ್ಕೆ ಎಂಬಂತೆ ಸ್ಕಾಟ್ಲೆಂಡ್‌ ದೇಶವು ಗೇಮ್ಸ್‌ ಆಯೋಜನೆಗೆ ಮುಂದೆ ಬಂತು.

ಈ ನಡುವೆ, 2030ರ ಗೇಮ್ಸ್‌ನ ಆತಿಥ್ಯ ಹಕ್ಕು ಗುಜರಾತ್‌ನ ಆಹಮದಾಬಾದ್‌ ಪಡೆದಿದೆ. 2036ರ ಒಲಿಂಪಿಕ್ಸ್‌ ಆತಿಥ್ಯಕ್ಕೆ ಪ್ರಯತ್ನಿಸುತ್ತಿರುವ ಭಾರತ, ಅದಕ್ಕೂ ಮುನ್ನ ಕಾಮನ್‌ವೆಲ್ತ್‌ ಗೇಮ್ಸ್‌ ಆಯೋಜಿಸಿ ತನ್ನ ಸಾಮರ್ಥ್ಯ ಪ್ರದರ್ಶಿಸಲು ನೋಡುತ್ತಿದೆ. ಅಲ್ಲದೆ, ಭಾರತಕ್ಕೆ ಜಾಗತಿಕ ಮಟ್ಟದ ಕ್ರೀಡಾಕೂಟದ ಆತಿಥ್ಯ ಪ್ರತಿಷ್ಠೆಯ ವಿಷಯವಾಗಿರುವುದರಿಂದ 2030ರ ಗೇಮ್ಸ್‌ ನಡೆಸಲು ಮುಂದೆ ಬಂದಿದೆ. ಇದರ ಹೊರತಾಗಿ ಬೇರೆ ದೇಶಗಳು ಕಾಮನ್‌ವೆಲ್ತ್‌ ಗೇಮ್ಸ್‌ನ ಆತಿಥ್ಯಕ್ಕೆ ಆಸಕ್ತಿ ತೋರುತ್ತಿಲ್ಲ. ಹೆಚ್ಚುತ್ತಿರುವ ವೆಚ್ಚ, ಒಲಿಂಪಿಕ್ಸ್‌ನಷ್ಟು ಖ್ಯಾತಿ ಇಲ್ಲದಿರುವುದು, ಕಡಿಮೆ ಪ್ರಾಯೋಜಕತ್ವ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಲಾಭ ಸಿಗದೇ ಇರುವುದು, ಜಾಗತಿಕ ಮಟ್ಟದಲ್ಲಿ ಟಿವಿ ಆದಾಯ ಕಡಿಮೆ ಇರುವ ಕಾರಣ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಆತಿಥ್ಯ ವಹಿಸಲು ದೇಶಗಳು ನಿರಾಸಕ್ತಿ ತೋರುತ್ತಿವೆ.

ಶಾಲಾ ಮಕ್ಕಳಿಂದ ಮಾಸ್ಕಾಟ್‌ ವಿನ್ಯಾಸ

ಕ್ರೀಡಾಕೂಟದ ಅಧಿಕೃತ ಮಾಸ್ಕಾಟ್‌ಅನ್ನು ಕ್ರೀಡೆಗೆ ಒಂದು ವರ್ಷ ಇರುವಾಗಲೇ, ಅಂದರೆ 2025ರ ಜುಲೈ 23ರಂದು ಅನಾವರಣಗೊಳಿಸಲಾಗಿದೆ. ಅಂತರರಾಷ್ಟ್ರೀಯ ಕ್ರೀಡಾಕೂಟದ ಪೂರ್ವಭಾವಿಯಾಗಿ ಸೃಜನಶೀಲತೆ ಮತ್ತು ಯುವ ಸಮೂಹದ ಭಾಗವಹಿಸುವಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಶಾಲಾ ಮಕ್ಕಳಿಂದ ಈ ಮಾಸ್ಕಾಟ್‌ ವಿನ್ಯಾಸಗೊಳಿಸಲಾಗಿದೆ. ಗ್ಲಾಸ್ಗೋ ನಗರದ ಫಿನ್ನಿಸ್ಟನ್ ಕ್ರೇನ್‌ನ ಹೆಸರನ್ನು ಸೂಚಿಸುವ ‘ಫಿನ್ನಿ’ ಎಂಬ ಹೆಸರನ್ನು ಈ ಮಾಸ್ಕಾಟ್‌ಗೆ ಇಡಲಾಗಿದೆ.

215 ವಿಭಾಗ

ಈ ಬಾರಿ ಕ್ರೀಡಾಕೂಟದಲ್ಲಿ 215 ಪದಕ ವಿಭಾಗಗಳ ಸ್ಪರ್ಧೆಗಳಿವೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಜು.22ರಿಂದ ಮಹಾರಾಣಿ ಟ್ರೋಫಿ ಟಿ20: ಮೈಸೂರು ವಾರಿಯರ್ಸ್‌ಗೆ ಶುಭಾ ಸತೀಶ್ ನಾಯಕಿ
ಕರ್ನಾಟಕ ಕಬಡ್ಡಿ ಪ್ರೀಮಿಯರ್‌ ಲೀಗ್‌ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರು ಬೈಸನ್ಸ್ ತಂಡದ ಲಾಂಛನ ಅನಾವರಣ