ನನ್ನ ನಿವೃತ್ತಿ ಕೇವಲ ಊಹಾಪೋಹ: ಮೇರಿ ಕೋಮ್‌ ಸ್ಪಷ್ಟನೆ

KannadaprabhaNewsNetwork | Updated : Jan 26 2024, 07:18 AM IST

ಸಾರಾಂಶ

ನಾನು ಇನ್ನೂ ನಿವೃತ್ತಿ ಘೋಷಿಸಿಲ್ಲ. ಆ ಸಮಯ ಬಂದಾಗ ನಾನು ನಿಮ್ಮ ಮುಂದೆ ಬರುತ್ತೇನೆ. ನಿವೃತ್ತಿ ಕೇವಲ ಊಹಾಪೋಹಾ ಎಂದು ಮೇರಿ ಕೋಮ್‌ ಹೇಳಿದ್ದಾರೆ

ನವದೆಹಲಿ: ಐದು ಬಾರಿ ವಿಶ್ವ ಚಾಂಪಿಯನ್‌ ಹಾಗೂ ಲಂಡನ್‌ ಒಲಿಂಪಿಕ್ಸ್‌ ಪದಕ ವಿಜೇತ ಬಾಕ್ಸರ್‌ ಮೇರಿ ಕೋಮ್‌ ನಿವೃತ್ತಿ ವದಂತಿಯನ್ನು ಅಲ್ಲಗಳೆದಿದ್ದಾರೆ. ಈ ಕುರಿತು ಗುರುವಾರ ಸ್ಪಷ್ಟನೆ ನೀಡಿರುವ ಅವರು, ನಾನು ಇನ್ನೂ ನಿವೃತ್ತಿ ಘೋಷಿಸಿಲ್ಲ. 

ಆ ಸಮಯ ಬಂದಾಗ ನಾನು ನಿಮ್ಮ ಮುಂದೆ ಬರುತ್ತೇನೆ. ನಿವೃತ್ತಿ ಕೇವಲ ಊಹಾಪೋಹಾ. ನನಗೆ ಇನ್ನೂ ಸಾಧಿಸುವ ಹಸಿವಿದೆ. ಆದರೆ ನಿಯಮಗಳು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಬಾಕ್ಸರ್‌ಗಳಿಗೆ 40 ವರ್ಷಗಳ ವಯೋಮಿತಿ ಇದ್ದು, 41 ವರ್ಷದ ಮೇರಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕೊನೆ ಬಾರಿ ಕಾಣಿಸಿಕೊಂಡಿದ್ದರು. 

ಆ ಬಳಿಕ ನಿವೃತ್ತಿಯಾಗುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಲಾಗಿತ್ತು. 2022ರ ಕಾಮನ್‌ವೆಲ್ಸ್‌ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಭಾಗಿಯಾಗಿದ್ದ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದ ಅನಿವಾರ್ಯತೆಯಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದರು. 

ಕಳೆದ ವರ್ಷದಿಂದ ಪುನಶ್ಚೇತನ ತರಬೇತಿ ಆರಂಭಿಸಿರುವ ಅವರಿಗೆ ಒಲಿಂಪಿಕ್ಸ್‌ ಹೋರತಾಗಿ ಬೇರೆ ಟೂರ್ನಿಗಳಲ್ಲಿ ಭಾಗಿಯಾಗಲು 3/4 ವರ್ಷಗಳ ಕಾಲಾವಕಾಶವಿದೆ. 

ಮೇರಿ ಅನುಪಸ್ಥಿಯಲ್ಲಿ 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ನಿಖತ್‌ ಝರಿನ್‌ ಒಂದರ ಮೇಲೊಂದು ಪ್ರಶಸ್ತಿ ಗೆಲ್ಲುತ್ತಿದ್ದಾರೆ.

ಮತ್ತೊಂದೆಡೆ ಅವರಿಗೆ ಭಾರತೀಯ ಒಲಿಂಪಿಕ್‌ ಸಮಿತಿ ಆಡಳಿತಾತ್ಮಕ ಜವಾಬ್ದಾರಿಗಳನ್ನು ನೀಡುತ್ತಿದ್ದು, ಇತ್ತೀಚೆಗೆ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧ ಕೇಳಿಬಂದಿದ್ದ ಲೈಂಗಿಕ ಕಿರುಕುಳ ಆರೋಪದ ತನಿಖಾ ಸಮಿತಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. 

ರಾಜ್ಯ ಸಭಾ ಸದಸ್ಯೆಯಾಗಿ ಕೂಡಾ ಕೆಲಸ ಮಾಡಿರುವ ಮೇರಿ ಅವರಿಗೆ ಭಾರತ ಸರ್ಕಾರ ನೀಡುವ 2ನೇ ಅತ್ಯುಚ್ಛ ನಾಗರಿಕ ಪುರಸ್ಕಾರ ಪದ್ಮವಿಭೂಷಣ ಪ್ರಶಸ್ತಿ ಕೂಡಾ ಸಂದಿದೆ.

Share this article