ಸೋಲನ್(ಹಿಮಾಚಲ ಪ್ರದೇಶ): ಮೇ 25ರಿಂದ 30ರ ವರೆಗೆ ಇಲ್ಲಿ ನಡೆದ 2ನೇ ಕುಡೊ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಮಾರ್ಷಲ್ ಆರ್ಟ್ಸ್ ತಂಡ 3ನೇ ಸ್ಥಾನ ಪಡೆದುಕೊಂಡಿದೆ. ಕರ್ನಾಟಕದ 70 ಕ್ರೀಡಾಪಟುಗಳು ಕೂಟದಲ್ಲಿ ಪಾಲ್ಗೊಂಡಿದ್ದರು. ಉತ್ತಮ ಪ್ರದರ್ಶನ ನೀಡಿದ ರಾಜ್ಯದ ಕುಡೊ ಪಟುಗಳು 3 ಚಿನ್ನ, 13 ಬೆಳ್ಳಿ ಹಾಗೂ 18 ಕಂಚು ಸೇರಿ ಒಟ್ಟು 34 ಪದಕಗಳನ್ನು ಪಡೆದುಕೊಂಡಿದ್ದಾರೆ.
ರಾಜ್ಯದ ಹಲವಾರು ಜಿಲ್ಲೆಗಳಿಂದ 70 ಕ್ರೀಡಾಪಟುಗಳು ಸಬ್ ಜೂನಿಯರ್, ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ, ಮಾರ್ಚ್ ತಿಂಗಳಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿದ್ದರು. ಈ ಪಂದ್ಯಾವಳಿಯಲ್ಲಿ ಕೂಡೊ ಅಸೋಸಿಯೇಷನ್ ಆಫ್ ಕರ್ನಾಟಕದ ಅಧ್ಯಕ್ಷ ಶಿಹಾನ್ ಶಬ್ಬೀರ್ ಅಹ್ಮದ್ ರವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ತಂಡವು ಭಾಗವಹಿಸಿತ್ತು.
ತೀರ್ಪುಗಾರರಾಗಿ ಅಮೃತ್ ಪಟೇಲ್, ಅಂಬೇಡ್ಕರ್ ಹಾಗೂ ಮೊಹಮ್ಮದ್ ಇಬ್ರಾಹಿಂ, ಟೀಮ್ ಕೋಚ್ ಆಗಿ ಶೇಖರ್ ಹಾಗೂ ಟೀಮ್ ಮ್ಯಾನೇಜರ್ ಆಗಿ ಮೊಹಮ್ಮದ್ ನಿಜಾಮುದ್ದೀನ್ ರವರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಕೂಡೊ ಜಪಾನಿನ ಮಿಕ್ಸಡ್ ಮಾರ್ಷಲ್ ಆರ್ಟ್ಸ್ ಆಗಿದೆ. ಅಂದರೆ ಜಪಾನಿನ ಒಂದು ಸಮರ ಕಲೆಯಾಗಿದೆ, ಈ ಕ್ರೀಡೆಯು ಬಾಕ್ಸಿಂಗ್, ಕರಾಟೆ, ಜುಡೊ, ಟೆಕ್ವಾಂಡೊ, ಕಿಕ್ ಬಾಕ್ಸಿಂಗ್, ಕುಸ್ತಿ, ಮುಯ್ ಥಾಯ್, ವುಶು, ಜುಜುಟ್ಸು ಸೇರಿದಂತೆ ಹಲವಾರು ಸಮರ ಕಲೆಗಳ ಮಿಶ್ರಣವಾಗಿದೆ. ಈ ಕ್ರೀಡೆಯ ನಿಯಮಗಳು, ಶಿಸ್ತು ಹಾಗೂ ಭಾರತದಲ್ಲಿ ಈ ಕ್ರೀಡೆಯ ಅತಿ ವೇಗವಾಗಿ ಬೆಳವಣಿಗೆಯನ್ನು ಗಮನಿಸಿ ಭಾರತ ಸರ್ಕಾರವು ಈ ಕ್ರೀಡೆಗೆ ಮಾನ್ಯತೆಯನ್ನು ನೀಡಿದೆ.
ಅಂ.ರಾ. ಕ್ರಿಕೆಟ್‌ಗೆ ಕೇದಾರ್ ಜಾಧವ್ ನಿವೃತ್ತಿ ಘೋಷಣೆ
ಪುಣೆ: ಭಾರತದ ಆಲ್ರೌಂಡರ್ ಕೇದಾರ್ ಜಾಧವ್ ಸೋಮವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ್ದಾರೆ. 39 ವರ್ಷದ ಕೇದಾರ್ 2014ರಲ್ಲಿ ಭಾರತ ಪರ ಪಾದಾರ್ಪಣೆ ಮಾಡಿದ್ದು, ಈ ವರೆಗೂ 73 ಏಕದಿನ ಹಾಗೂ 9 ಟಿ20 ಪಂದ್ಯಗಳಲ್ಲಿ 1500ಕ್ಕೂ ಅಧಿಕ ರನ್ ಗಳಿಸಿದ್ದಾರೆ. 2020ರಲ್ಲಿ ಕೊನೆ ಬಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.ಸದ್ಯ ಅವರು ಮಹಾರಾಷ್ಟ್ರ ಪ್ರೀಮಿಯರ್ ಲೀಗ್‌ನಲ್ಲಿ ಕೋಲಾಪುರ ತಂಡದ ನಾಯಕನಾಗಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ, ಆರ್‌ಸಿಬಿ, ಡೆಲ್ಲಿ ಸೇರಿ ಹಲವು ತಂಡಗಳನ್ನು ಪ್ರತಿನಿಧಿಸಿದ್ದಾರೆ.