ಪ್ಯಾರಿಸ್: ಈ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕೊನೆ ಪದಕ ತಂದುಕೊಟ್ಟಿದ್ದು ಜಾವೆಲಿನ್ ಎಸೆತಗಾರ ನವ್‌ದೀಪ್ ಸಿಂಗ್. ಶನಿವಾರ ಅವರು ಪುರುಷರ ಜಾವೆಲಿನ್ ಎಸೆತ ಎಫ್41 ವಿಭಾಗದಲ್ಲಿ ಬಂಗಾರದ ಪದಕಕ್ಕೆ ಕೊರಳೊಡ್ಡಿದರು. ಕಳೆದ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದ ನವ್‌ದೀಪ್, ಈ ಬಾರಿ ಉತ್ತಮ ಪ್ರದರ್ಶನ ನೀಡಿ ತಮ್ಮ 3ನೇ ಪ್ರಯತ್ನದಲ್ಲಿ 47.32 ನೀ. ದೂರಕ್ಕೆ ಜಾವೆಲಿನ್ ಎಸೆದು 2ನೇ ಸ್ಥಾನಿಯಾದರು. ಇರಾನ್‌ನ ಸದೇಘ್ ಬೇತ್ ಸಯಾಹ್ 47.64 ಮೀ. ದೂರ ದಾಖಲಿಸಿ ಅಗ್ರಸ್ಥಾನ ಪಡೆದಿದ್ದರೆ, ಚೀನಾದ ಸುನ್ ಪೆಂಗ್‌ಕ್ಷಿಯಾಂಗ್(44.72 ಮೀ.) 3ನೇ ಸ್ಥಾನಿಯಾದರು.ಆದರೆ ಸ್ಪರ್ಧೆ ಬಳಿಕ ಇರಾನ್‌ನ ಸ್ಪರ್ಧಿ ಅನರ್ಹಗೊಂಡ ಕಾರಣ ಅವರನ್ನು ಕೂಟದಿಂದಲೇ ಅನರ್ಹಗೊಳಿಸಲಾಯಿತು. ಇದರೊಂದಿಗೆ ನವ್‌ದೀಪ್ ಬೆಳ್ಳಿ ಬದಲು ಚಿನ್ನ, ಚೀನಾದ ಸುನ್ ಕಂಚಿನ ಪದಕ ಬೆಳ್ಳಿ ಪಡೆದರು. ಇರಾಕ್‌ನ ನುಖೈಲಾವಿ(40.46 ಮೀ.) ಕಂಚು ಜಯಿಸಿದರು.ಅನರ್ಹತೆ ಯಾಕೆ?
ಇರಾನ್‌ನ ಸಯಾಹ್ ಸ್ಪರ್ಧೆ ಬಳಿಕ ಧಾರ್ಮಿಕ ಬರಹವಿರುವ ಕಪ್ಪು ಬಾವುಟ ಪ್ರದರ್ಶಿಸಿದರು. ಪ್ಯಾರಾಲಿಂಪಿಕ್ಸ್ ನಿಯಮದ ಪ್ರಕಾರ, ಗೇಮ್ಸ್ ವೇಳೆ ಯಾವುದೇ ರಾಜಕೀಯ, ಧಾರ್ಮಿಕ ಚಿಹ್ಸೆಗಳನ್ನು ಬಳಸುವಂತಿಲ್ಲ. ತಮ್ಮ ದೇಶದ ಧ್ವಜವನ್ನು ಮಾತ್ರ ಪ್ರದರ್ಶಿಸಬಹುದು. ಆದರೆ ಸಯಾಹ್ ನಿಯಮ ಉಲ್ಲಂಘಿಸಿದ ಕಾರಣ, ಅವರನ್ನು ಅನರ್ಹಗೊಳಿಸಲಾಯಿತು.ಏನಿದು ಎಫ್41?
ನವ್‌ದೀಪ್ ಎಫ್41 ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನ ಗೆದ್ದರು. ಇದು ಕುಬ್ಜರು ಅಥವಾ ಕುಳ್ಳ ದೇಹ ಹೊಂದಿರುವ ಕ್ರೀಡಾಪಟುಗಳು ಸ್ಪರ್ಧಿಸುವ ವಿಭಾಗ.ಬೆಂಗಳೂರಲ್ಲಿ ಆದಾಯ ತೆರಿಗೆ ಅಧಿಕಾರಿಯಾಗಿರುವ ನವ್‌ದೀಪ್!ನವ್‌ದೀಪ್ ಹುಟ್ಟಿದ್ದು ಹರ್ಯಾಣದ ಪಾಣಿಪತ್‌ನಲ್ಲಿ. ಸಣ್ಣ ದೇಹ ಹೊಂದಿರುವ ಕಾರಣಕ್ಕೆ ಗ್ರಾಮದಲ್ಲಿ, ಶಾಲೆಯಲ್ಲಿ ಇತರರಿಂದ ಅವಮಾನಕ್ಕೊಳಗಾಗುತ್ತಿದ್ದ ನವ್‌ದೀಪ್, ಏನಾದರೂ ಸಾಧಿಸಿ ತೋರಿಸಬೇಕೆಂಬ ಛಲ ಹೊಂದಿದ್ದರು. ರಾಷ್ಟ್ರೀಯ ಕುಸ್ತಿ ಪಟುವಾಗಿದ್ದ ತಂದೆಯಿಂದ ಸ್ಫೂರ್ತಿ ಪಡೆದರೂ, ತಮ್ಮ ದೇಹ ರಚನೆ ಕಾರಣಕ್ಕೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ನವ್‌ದೀಪ್‌ಗೆ ಸಾಧ್ಯವಾಗಲಿಲ್ಲ. 2012ರಲ್ಲಿ ರಾಷ್ಟ್ರಪತಿಯಿಂದ ಬಾಲ ಪುರಸ್ಕಾರಕ್ಕೆ ಭಾಜನರಾದ ಅವರು, ಬಳಿಕ ಡೆಲ್ಲಿ ವಿಶ್ವವಿದ್ಯಾಲಯದಲ್ಲಿ ಬಿ.ಎ. ಪದವಿ ಪಡೆದರು. 2017ರಲ್ಲಿ ನವ್‌ದೀಪ್ ಅಥ್ಲೆಟಿಕ್ಸ್ ಕಡೆ ಹೆಚ್ಚಿನ ಗಮನ ಹರಿಸಿದರು. ಅದೇ ವರ್ಷ ಏಷ್ಯನ್ ಯೂತ್ ಪ್ಯಾರಾ ಗೇಮ್ಸ್‌ನಲ್ಲಿ ಪಾಲ್ಗೊಂಡು ಚಿನ್ನ ಗೆದ್ದರು. ಆ ಬಳಿಕ ಅವರು ಹಿಂದಿರುಗಿ ನೋಡಲಿಲ್ಲ. ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 4ನೇ ಸ್ಥಾನ ಪಡೆದಿದ್ದ ಅವರು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಳೆದ ವರ್ಷ ಕಂಚಿನ ಪದಕ ಗೆದ್ದಿದ್ದಾರೆ.
ಸದ್ಯ 23 ವರ್ಷದ ನವ್‌ದೀಪ್ ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಬಿಡುವಿನ ಸಮಯದಲ್ಲಿ ನಗರದಲ್ಲಿರುವ ಸಾಯ್ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುತ್ತಾರೆ.ಅನರ್ಹತೆ: ಒಲಿಂಪಿಕ್ಸ್‌ನಲ್ಲಿ ನಷ್ಟ; ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಗಿಫ್ಟ್
ಅನರ್ಹತೆ ಎಂಬುದು ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಪದಕ ನಷ್ಟವಾಗುವಂತೆ ಮಾಡಿದರೂ, ಪ್ಯಾರಾಲಿಂಪಿಕ್ಸ್‌ನಲ್ಲಿ ಲಾಭವಾಗಿದೆ. ಇತ್ತೀಚೆಗಷ್ಟೇ ಪ್ಯಾರಿಸ್‌ನಲ್ಲೇ ನಡೆದ ಒಲಿಂಪಿಕ್ಸ್‌ನ ಮಹಿಳೆಯರ 50 ಕೆ.ಜಿ. ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್‌ಗೂ ಮುನ್ನ 100 ಗ್ರಾಂ ತೂಕ ಹೆಚ್ಚಾದ ಕಾರಣಕ್ಕೆ ವಿನೇಶ್ ಫೋಗಟ್ ಅನರ್ಹಗೊಂಡಿದ್ದರು. ಅನರ್ಹಗೊಳ್ಳದೇ ಇದ್ದಿದ್ದರೆ ಕನಿಷ್ಠ ಬೆಳ್ಳಿ ಪದಕವಾದರೂ ಲಭಿಸುತ್ತಿತ್ತು. ಆದರೆ ಈಗ, ಪ್ಯಾರಾಲಿಂಪಿಕ್ಸ್‌ನ ಪುರುಷರ ಜಾವೆಲಿನ್ ಎಸೆತದಲ್ಲಿ ಇರಾನ್‌ನ ಸ್ಪರ್ಧಿ ಧಾರ್ಮಿಕ ಧ್ವಜ ಪ್ರದರ್ಶಿಸಿ ಅನರ್ಹಗೊಂಡ ಕಾರಣ, ಭಾರತದ ನವ್‌ದೀಪ್‌ಗೆ ಚಿನ್ನದ ಪದಕ ಲಭಿಸಿದೆ.