ನ್ಯೂಯಾರ್ಕ್: ಬೇಸ್‌ಬಾಲ್ ನಾಡಿನ ಜನರಲ್ಲಿ ಕ್ರಿಕೆಟ್ ಕ್ರೇಜ್ ಬೆಳೆಸುವ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಸಾಹಸ ಕೈ ಹಿಡಿದಂತಿಲ್ಲ. ವಿಶ್ವದ ದೊಡ್ಡಣ್ಣ ಖ್ಯಾತಿಯ ಅಮೆರಿಕದಲ್ಲಿ ಟಿ20 ವಿಶ್ವಕಪ್ ಆಯೋಜಿಸುವ ಮೂಲಕ ಕ್ರಿಕೆಟ್‌ನ ಮಾರುಕಟ್ಟೆಯನ್ನು ಜಾಗತಿಕ ಮಟ್ಟಕ್ಕೆ ಬೆಳೆಸಲು ಐಸಿಸಿ ಯೋಜನೆ ಹಾಕಿಕೊಂಡಿದ್ದರೂ, ಅದಕ್ಕೆ ಅಮೆರಿಕ ಜನರು ಪ್ರೋತ್ಸಾಹ ನೀಡಿಲ್ಲ. ಅದರಲ್ಲೂ ಭಾನುವಾರ ನ್ಯೂಯಾರ್ಕ್‌ನಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ಕೂಡಾ ನ್ಯೂಯಾರ್ಕ್ ಜನರಲ್ಲಿ ಯಾವುದೇ ಉತ್ಸಾಹ ಕಂಡು ಬರದೇ ಇದ್ದಿದ್ದು ಐಸಿಸಿ ನಿರಾಸೆಗೆ ಕಾರಣವಾಗಿದೆ. ಪಂದ್ಯಕ್ಕೆ ಕ್ರೀಡಾಂಗಣ ಭರ್ತಿಯಾದರೂ ನಗರದಲ್ಲಿ ಕ್ರಿಕೆಟ್ ಬಗ್ಗೆ ಯಾವುದೇ ಕ್ರೇಜ್ ಕಂಡುಬರಲಿಲ್ಲ.
ಸಾಮಾನ್ಯವಾಗಿ ಭಾರತದ ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕ್ ಪಂದ್ಯ ನಡೆದರೆ ಕ್ರೀಡಾಂಗಣದ ಸುತ್ತಮುತ್ತ ಮಾತ್ರವಲ್ಲ, ಇಡೀ ನಗರ, ರಾಜ್ಯದಲ್ಲೇ ಹಬ್ಬದ ವಾತಾವರಣ ಕಂಡುಬರುವುದು ಸಹಜ. ಕ್ರಿಕೆಟ್ ಅಭಿಮಾನಿಗಳಂತೂ ಪಂದ್ಯ ವೀಕ್ಷಣೆಗೆ ತುದಿಗಾಲಲ್ಲಿ ನಿಂತಿರುತ್ತಾರೆ. ವಿದೇಶಿ ನೆಲಗಳಲ್ಲೂ ಇದು ಸಾಮಾನ್ಯ. ಆದರೆ ಇದೇ ಉತ್ಸಾಹ ಅಮೆರಿಕದಲ್ಲಿ ಅದರಲ್ಲೂ ನ್ಯೂಯಾರ್ಕ್‌ನಲ್ಲಿ ನಿರೀಕ್ಷಿಸಿದ್ದ ಐಸಿಸಿಗೆ ಈಗ ನಿರಾಸೆಯಾಗಿದೆ.ಕ್ರೇಜ್ ಹೆಚ್ಚಿಸಲು ವಿಫಲ: ಕ್ರೀಡಾಂಗಣದ ಸುತ್ತಮತ್ತ ಕಾಣಸಿಗುವ ಜನದಟ್ಟಣೆ, ಅಭಿಮಾನಿಗಳ ಹರ್ಷೋದ್ಘಾರ, ತಾರಾ ಕ್ರಿಕೆಟಿಗರ ಪೋಸ್ಟರ್ ಯಾವುದೂ ಭಾನುವಾರ ಪಂದ್ಯ ಆರಂಭಕ್ಕೆ ಕೆಲ ಗಂಟೆಗಳ ಮುನ್ನವೂ ಕಂಡುಬರಲಿಲ್ಲ. ಅಮೆರಿಕ ಕಾಲಮಾನ ಬೆಳಗ್ಗೆ 10.30ಕ್ಕೆ ಪಂದ್ಯ ನಡೆದರೂ ಪಂದ್ಯ ಆರಂಭಕ್ಕೆ ಕೆಲವೇ ಸಮಯ ಇರುವಾಗಲೂ ಕ್ರೀಡಾಂಗಣದ ಬಳಿ ಸೀಮಿತ ಸಂಖ್ಯೆಯ ಅಭಿಮಾನಿಗಳಷ್ಟೇ ಇದ್ದರು.ಐಸಿಸಿಗೆ ಜನರಲ್ಲಿ ಹೆಚ್ಚಿನ ಕ್ರೇಜ್ ಹೆಚ್ಚಿಸಲ ಸಾಧ್ಯವಾಗದೆ ಇರಲು ಹಲವು ಕಾರಣಗಳಿವೆ. ಒಂದು, ಪಂದ್ಯ ನಡೆಯುವುದು ನ್ಯೂಯಾರ್ಕ್‌ನಲ್ಲಿ ಎಂದೇ ಹೇಳಲಾಗುತ್ತಿದ್ದರೂ, ಕ್ರೀಡಾಂಗಣ ಇರುವುದು ನ್ಯೂಯಾರ್ಕ್ ಸಿಟಿಯಿಂದ ಸುಮಾರು 54 ಕಿ.ಮೀ. ದೂರದ ನಾಸೌನಲ್ಲಿ. ಹೀಗಾಗಿ ಸ್ಥಳೀಯ ಜನರು ಹೆಚ್ಚಿನ ಪ್ರಮಾಣದಲ್ಲಿ ಕ್ರೀಡಾಂಗಣದ ಬಳಿ ಕಾಣಿಸಿಕೊಳ್ಳಲಿಲ್ಲ. ನಗರದ ಯಾವ ಕಡೆಯಲ್ಲೂ ಪಂದ್ಯದ ಬಗ್ಗೆ ಉತ್ಸಾಹ ಕಂಡುಬರಲಿಲ್ಲ. ಆದರೆ ಟಿಕೆಟ್ ಬೆಲೆ ಭಾರಿ ದುಬಾರಿಯಾಗಿದ್ದರೂ, ಕ್ರೀಡಾಂಗಣ ಭರ್ತಿಯಾಗಿತ್ತು ಎನ್ನುವುದೊಂದೇ ಐಸಿಸಿಗೆ ಸಮಾಧಾನ ನೀಡಿದ ಸಂಗತಿ.ವಿಶ್ವಕಪ್‌ಗಾಗಿ ನಿರ್ಮಿಸಿದ್ದ ನ್ಯೂಯಾರ್ಕ್ ಕ್ರೀಡಾಂಗಣವೆಸ್ಟ್ಇಂಡೀಸ್ ಜೊತೆ ವಿಶ್ವಕಪ್ ಆಯೋಜನೆ ಆತಿಥ್ಯ ಪಡೆದಿದ್ದ ಅಮೆರಿಕದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಕ್ರೀಡಾಂಗಣದ ಕೊರತೆ ಇತ್ತು. ಅದರಲ್ಲೂ ಭಾರತ-ಪಾಕ್ ಸೇರಿ ಪ್ರಮುಖ ಪಂದ್ಯ ಆಯೋಜನೆಗೆ ದೊಡ್ಡ ಕ್ರೀಡಾಂಗಣ ಅಗತ್ಯವಿತ್ತು. ಹೀಗಾಗಿ ಕೇವಲ 4-5 ತಿಂಗಳಲ್ಲೇ ನ್ಯೂಯಾರ್ಕ್ ಸ್ಟೇಟ್‌ನಲ್ಲಿ ಹೊಸ ಕ್ರೀಡಾಂಗಣ ನಿರ್ಮಿಸಲಾಗಿತ್ತು. ಆದರೆ ನಗರದಲ್ಲಿ ಹೆಚ್ಚಿನ ಜನರಲ್ಲಿ ಕ್ರಿಕೆಟ್ ಬಗ್ಗೆ ಆಸಕ್ತಿ ಮೂಡಿಸಲು ಐಸಿಸಿಗೆ ಸಾಧ್ಯವಾಗದಿರುವುದು ವಿಪರ್ಯಾಸ.ಭಾರತೀಯರಿಂದ ತುಂಬಿತುಳುಕಿದ ಕ್ರೀಡಾಂಗಣ!
ಮಳೆ ಅಡ್ಡಿಪಡಿಸಿದ ಹೊರತಾಗಿಯೂ ಪಂದ್ಯದ ಆರಂಭದಲ್ಲೇ ಕ್ರೀಡಾಂಗಣ ಭರ್ತಿಯಾಗಿತ್ತು. 35000 ಆಸನ ಸಾಮರ್ಥ್ಯದ ಕ್ರೀಡಾಂಗಣದಲ್ಲಿ ಬಹುತೇಕ ಭಾರತ ಮೂಲದವರೇ ಇದ್ದರು. ಗ್ಯಾಲರಿಯಲ್ಲಿ ಭಾರತದ ತ್ರಿವರ್ಣ ಧ್ವಜ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡವು. ಕೆಲವೇ ಕೆಲವು ಪಾಕಿಸ್ತಾನಿ ಅಭಿಮಾನಿಗಳು ಕ್ರೀಡಾಂಗಣದಲ್ಲಿದ್ದರು.