ಪ್ಯಾರಿಸ್: ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ವಿಶ್ವ ನಂ.1 ಇಗಾ ಸ್ವಿಯಾಟೆಕ್ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿದ್ದು, ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
24 ಗ್ರ್ಯಾನ್‌ಸ್ಲಾಂಗಳ ಒಡೆಯ ನೋವಾಕ್ ಜೋಕೋವಿಚ್ 4ನೇ ಸುತ್ತಿಗೆ ಪ್ರವೇಶಿಸಿದ್ದಾರೆ.ಭಾನುವಾರ ನಡೆದ ಮಹಿಳಾ ಸಿಂಗಲ್ಸ್ 4ನೇ ಸುತ್ತಿನ ಪಂದ್ಯದಲ್ಲಿ ಪೋಲೆಂಡ್‌ನ ಇಗಾ, ಅನಸ್ತಾಸಿಯಾ ಪೊಟಪೋವಾ ವಿರುದ್ಧ 6-0, 6-0 ನೇರ ಸೆಟ್‌ಗಳಲ್ಲಿ ಜಯಿಸಿದರು.
5ನೇ ಬಾರಿ ಗ್ರ್ಯಾನ್‌ಸ್ಲಾಂ ಗೆಲ್ಲುವ ನಿರೀಕ್ಷೆಯಲ್ಲಿರುವ ಇಗಾ ಪಂದ್ಯದುದ್ದಕ್ಕೂ ಪ್ರಾಬಲ್ಯ ಸಾಧಿಸಿ ಸುಲಭ ಗೆಲುವು ಪಡೆದರು. ಹಾಲಿ ಯುಎಸ್ ಓಪನ್ ಚಾಂಪಿಯನ್, ಅಮೆರಿಕದ ಯುವ ತಾರೆ ಕೊಕೊ ಗಾಫ್ 4ನೇ ಸುತ್ತಿನಲ್ಲಿ ಇಟಲಿಯ ಎಲಿಸಬೆಟ್ಟಾ ಕೊಕಿಯಾರೆಟ್ಟೊ ವಿರುದ್ಧ 6-1, 6-2ರಲ್ಲಿ ಗೆದ್ದು ಕ್ವಾರ್ಟರ್ ಫೈನಲ್ ತಲುಪಿದರು. 5ನೇ ಶ್ರೇಯಾಂಕಿತ ಮಾರ್ಕೆಟಾ ವೊಂಡ್ರೊಸೊವಾ ಕೂಡಾ ಅಂತಿಮ 8ರ ಘಟ್ಟ ಪ್ರವೇಶಿಸಿದರು.
ಜೋಕೋ ಮಿಂಚು: ಫ್ರೆಂಚ್ ಓಪನ್‌ನಲ್ಲಿ 4ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಹಾಲಿ ಚಾಂಪಿಯನ್, ಸರ್ಬಿಯಾದ ಜೋಕೋ ಪುರುಷರ ಸಿಂಗಲ್ಸ್ 3ನೇ ಸುತ್ತಿನ ಪಂದ್ಯದಲ್ಲಿ ಭಾನುವಾರ ಇಟಲಿಯ ಲೊರೆಂಜೊ ಮುಸೆಟ್ಟಿ ವಿರುದ್ಧ 7-5, 6-7(6/8), 2-6, 6-3, 6-0 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. 7ನೇ ಶ್ರೇಯಾಂಕಿತ, ನಾರ್ವೆಯ ಕ್ಯಾಸ್ಪೆರ್ ರುಡ್ ಅರ್ಜೆಂಟೀನಾದ ಥಾಮಸ್ ಮಾರ್ಟಿನ್ ವಿರುದ್ಧ 6-4, 1-6, 6-2, 6-2 ಸೆಟ್‌ಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು. 4ನೇ ಶ್ರೇಯಾಂಕಿಯ ಅಲೆಕ್ಸಾಂಡರ್ ಜ್ವೆರೆವ್, 5ನೇ ಶ್ರೇಯಾಂಕಿತ ಡ್ಯಾನಿಲ್ ಮೆಡ್ವೆಡೆವ್, 13ನೇ ಶ್ರೇಯಾಂಕಿತ ಹೋಲ್ಗರ್ ರ್‍ಯುನೆ ಕೂಡಾ ಅಂತಿಮ 16ರ ಘಟ್ಟ ಪ್ರವೇಶಿಸಿದರು.
ಡಬಲ್ಸ್‌ನಲ್ಲಿ ಬೋಪಣ್ಣ ಶುಭಾರಂಭ
ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ರೋಹನ್ ಬೋಪಣ್ಣ-ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಪುರುಷರ ಡಬಲ್ಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಭಾನುವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಬ್ರೆಜಿಲ್‌ನ ಮಾರ್ಸೆಲೊ ಜೊರ್ಮನ್-ಒರ್ಲಾಂಡೊ ಲ್ಯುಜ್ ವಿರುದ್ಧ 7-5, 4-6, 6-4ರಲ್ಲಿ ಗೆಲುವು ಸಾಧಿಸಿದರು. 2ನೇ ಸುತ್ತಿನಲ್ಲಿ ಅರ್ಜೆಂಟೀನಾದ ಸೆಬಾಸ್ಟಿಯನ್ ಬೀಜ್-ಬ್ರೆಜಿಲ್‌ನ ಥಿಯಾಗೊ ವೈಲ್ಡ್ ಸವಾಲು ಎದುರಾಗಲಿದೆ.