ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲೂ ವಿಶೇಷ ಉದ್ಘಾಟನೆ : 2 ಐತಿಹಾಸಿಕ ಸ್ಥಳಗಳಲ್ಲಿ ಸಮಾರಂಭ

KannadaprabhaNewsNetwork | Updated : Aug 27 2024, 04:10 AM IST

ಸಾರಾಂಶ

ನಾಳೆ ಪ್ಯಾರಿಸ್‌ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ. ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗೆ ಪ್ಯಾರಾಲಿಂಪಿಕ್ಸ್‌ ಉದ್ಘಾಟನೆ. ಪ್ಯಾರಿಸ್‌ ನಗರದ ಐತಿಹಾಸಿಕ ಪ್ಲೇಸ್ ಡೆ ಲಾ ಕಾಂಕಾರ್ಡ್, ಚಾಂಪ್ಸ್‌ ಎಲಿಸೀಸ್‌ನಲ್ಲಿ ಕಾರ್ಯಕ್ರಮ. ಸಾವಿರಾರು ಕಲಾವಿದರು ಭಾಗಿ

ಪ್ಯಾರಿಸ್‌: ಇತ್ತೀಚೆಗಷ್ಟೇ ವರ್ಣರಂಜಿತ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭದೊಂದಿಗೆ ಜಗತ್ತಿನೆಲ್ಲೆಡೆಯ ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದ ಪ್ಯಾರಿಸ್‌ ನಗರ ಮತ್ತೊಂದು ವಿಶೇಷ ಸಮಾರಂಭಕ್ಕೆ ಸಾಕ್ಷಿಯಾಗಲಿದೆ. ಬುಧವಾರ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ 17ನೇ ಆವೃತ್ತಿ ಪ್ಯಾರಾಲಿಂಪಿಕ್ಸ್‌ಗೆ ಚಾಲನೆ ಸಿಗಲಿದೆ. 

ಒಲಿಂಪಿಕ್ಸ್‌ನಂತೆಯೇ ವಿಶೇಷ ರೀತಿಯಲ್ಲಿ ಉದ್ಘಾಟನಾ ಸಮಾರಂಭ ನಡೆಸಲು ಆಯೋಜಕರು ಸಿದ್ಧತೆ ನಡೆಸುತ್ತಿದ್ದಾರೆ.ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಪ್ಯಾರಿಸ್‌ನ ಸೀನ್‌ ನದಿ ಮೇಲೆ ನಡೆದಿತ್ತು. ಅದು ಒಲಿಂಪಿಕ್ಸ್‌ ಇತಿಹಾಸದಲ್ಲೇ ಕ್ರೀಡಾಂಗಣದ ಹೊರಗಡೆ ನಡೆದ ಮೊದಲ ಉದ್ಘಾಟನಾ ಸಮಾರಂಭ. ಪ್ಯಾರಾಲಿಂಪಿಕ್ಸ್‌ನಲ್ಲೂ ಮೊದಲ ಬಾರಿ ಕ್ರೀಡಾಂಗಣದ ಹೊರಗಡೆ ಉದ್ಘಾಟನಾ ಸಮಾರಂಭ ನಡೆಸಲು ಆಯೋಜಕರು ನಿರ್ಧರಿಸಿದ್ದಾರೆ. ನಗರದ 2 ಐತಿಹಾಸಿಕ ಸ್ಥಳಗಳಾದ ಪ್ಲೇಸ್ ಡೆ ಲಾ ಕಾಂಕಾರ್ಡ್ ಹಾಗೂ ಚಾಂಪ್ಸ್‌ ಎಲಿಸೀಸ್‌ನಲ್ಲಿ ಸಮಾರಂಭ ನಡೆಯಲಿದೆ. ಸಮಾರಂಭ ನಿರ್ದೇಶಕ ಥಾಮಸ್‌ ಜಾಲಿ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.

ಹೇಗಿರಲಿದೆ ಕಾರ್ಯಕ್ರಮ?: ಸಮಾರಂಭವು ಬುಧವಾರ ಸಂಜೆ ಸ್ಥಳೀಯ ಕಾಲಮಾನ ರಾತ್ರಿ 8 ಗಂಟೆಗೆ(ಭಾರತೀಯ ಕಾಲಮಾನ ರಾತ್ರಿ 11.30ಕ್ಕೆ) ಚಾಂಪ್ಸ್-ಎಲಿಸೀಸ್‌ನಲ್ಲಿ ಪಥಸಂಚನದೊಂದಿಗೆ ಪ್ರಾರಂಭವಾಗುತ್ತದೆ. ಜಗತ್ತಿನ 184 ದೇಶಗಳ ಅಥ್ಲೀಟ್‌ಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. 6,000 ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಜೊತೆ ಅಪಾರ ಪ್ರಮಾಣದ ಪ್ರೇಕ್ಷಕರೂ ಕಾರ್ಯಕ್ರಯಕ್ಕೆ ಸಾಕ್ಷಿಯಾಗಲಿದ್ದಾರೆ. ಬಳಿಕ ಪ್ಲೇಸ್ ಡೆ ಲಾ ಕಾಂಕಾರ್ಡ್‌ನಲ್ಲಿ ಅಥ್ಲೀಟ್‌ಗಳ ಪಥಸಂಚಲನ ನಡೆಯಲಿದೆ. ಈ ವೇಳೆ ಅತ್ಯಾಕರ್ಷಕ ನೃತ್ಯ ಪ್ರದರ್ಶನ, ಲೇಸರ್‌ ಲೈಟ್‌ ಶೋ ಕೂಡಾ ಇರಲಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೆ 65 ಸಾವಿರ ಪ್ರೇಕ್ಷಕರು ಭಾಗಿ

ಪ್ಲೇಸ್ ಡೆ ಲಾ ಕಾಂಕಾರ್ಡ್ ಹಾಗೂ ಚಾಂಪ್ಸ್‌ ಎಲಿಸೀಸ್‌ನಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ 65000ಕ್ಕೂ ಹೆಚ್ಚು ಪ್ರೇಕ್ಷಕರು ಆಗಮಿಸಲಿದ್ದಾರೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಇದಕ್ಕಾಗಿ 2 ಐತಿಹಾಸಿಕ ಸ್ಥಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಜ್ಯೋತಿ ಬೆಳಗಿಸಲಿರುವ ಖ್ಯಾತ ನಟ ಜಾಕಿ ಚಾನ್‌

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಖ್ಯಾತ ನಟ ಜಾಕಿ ಚಾನ್, ಫ್ರಾನ್ಸ್‌ ನಟಿ ಎಲ್ಸಾ ಜಿಲ್ಬರ್‌ಸ್ಟೈನ್, ರ್‍ಯಾಪರ್‌ ಜಾರ್ಜಿಯೊ ಸೇರಿದಂತೆ ಪ್ರಮುಖರು ಕ್ರೀಡಾ ಜ್ಯೋತಿ ಬೆಳಗಿಸಲಿದ್ದಾರೆ. ನೂರಾರು ಕಲಾವಿದರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. 

ಗೇಮ್ಸ್‌ನ 17.5 ಲಕ್ಷ ಟಿಕೆಟ್‌ಗಳು ಮಾರಾಟ

ಪ್ಯಾರಾಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭಕ್ಕೂ ಮುನ್ನವೇ ಕ್ರೀಡಾಕೂಟದ ಒಟ್ಟು 17.5 ಲಕ್ಷ ಟಿಕೆಟ್‌ಗಳು ಮಾರಾಟಗೊಂಡಿವೆ. ಒಲಿಂಪಿಕ್ಸ್‌ ವೇಳೆಗೆ ಸುಮಾರು 7 ಲಕ್ಷದಷ್ಟು ಟಿಕೆಟ್‌ಗಳು ಮಾರಾಟಗೊಂಡಿದ್ದವು ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

Share this article