ಇಂದಿನಿಂದ ಪ್ಯಾರಿಸ್‌ನಲ್ಲಿ ಪ್ಯಾರಾಲಿಂಪಿಕ್‌ ಹಬ್ಬ

KannadaprabhaNewsNetwork | Published : Aug 28, 2024 12:47 AM

ಸಾರಾಂಶ

ಮತ್ತೊಂದು ಕ್ರೀಡಾ ಹಬ್ಬಕ್ಕೆ ಸಜ್ಜಾದ ಪ್ಯಾರಿಸ್‌ ನಗರಿ. ಸೆ.8ರ ವರೆಗೂ ಫ್ರಾನ್ಸ್‌ ರಾಜಧಾನಿಯಲ್ಲಿ ಪ್ಯಾರಾಲಿಂಪಿಕ್ಸ್‌. 167 ದೇಶಗಳ 4400 ಕ್ರೀಡಾಪಟುಗಳು ಭಾಗಿ. ಭಾರತದ 84 ಅಥ್ಲೀಟ್‌ಗಳು ಕಣಕ್ಕೆ. ಇಂದು ರಾತ್ರಿ 11.30ಕ್ಕೆ ಉದ್ಘಾಟನಾ ಸಮಾರಂಭ ಆರಂಭ.

ಪ್ಯಾರಿಸ್‌: ಒಲಿಂಪಿಕ್ಸ್‌ ಬಳಿಕ ಪ್ಯಾರಾಲಿಂಪಿಕ್ಸ್ ಆತಿಥ್ಯಕ್ಕೆ ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ ಸಜ್ಜಾಗಿದೆ. ಕ್ರೀಡಾಕೂಟಕ್ಕೆ ಬುಧವಾರ ಚಾಲನೆ ದೊರೆಯಲಿದ್ದು, ಮುಂದಿನ 12 ದಿನಗಳ ಕಾಲ ವಿಶ್ವದ 167 ದೇಶಗಳ 4400 ಕ್ರೀಡಾಪಟುಗಳು ಪದಕಗಳಿಗೆ ಸೆಣಸಲಿದ್ದಾರೆ.

ಉದ್ಘಾಟನಾ ಸಮಾರಂಭ ಬುಧವಾರ ರಾತ್ರಿ 11.30ಕ್ಕೆ (ಭಾರತೀಯ ಕಾಲಮಾನ) ಆರಂಭಗೊಳ್ಳಲಿದ್ದು, ಸುಮಾರು 3 ಗಂಟೆಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇದೇ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ಗೆ ಆತಿಥ್ಯ ವಹಿಸುತ್ತಿರುವ ಪ್ಯಾರಿಸ್‌, ಒಲಿಂಪಿಕ್ಸ್‌ನಂತೆ ಈ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನೂ ವಿಭಿನ್ನವಾಗಿ ನಡೆಸಲು ಸಿದ್ಧತೆ ಮಾಡಿಕೊಂಡಿದೆ.

ಇದೇ ಮೊದಲ ಬಾರಿಗೆ ಕ್ರೀಡಾಂಗಣದಿಂದ ಹೊರಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಪ್ಯಾರಿಸ್‌ ನಗರದ ಐತಿಹಾಸಿಕ ಸ್ಕ್ವೇರ್‌ ಪ್ಲೇಸ್‌ ಡೆ ಲಾ ಕಾನ್‌ಕೊರ್ಡ್‌ ಎಂಬಲ್ಲಿ ಕಾರ್ಯಕ್ರಮಗಳು ನಡೆಯಲಿವೆ.

ಸಾವಿರಾರು ಕಲಾವಿದರು ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದು, ಲಕ್ಷಾಂತರ ಪ್ರೇಕ್ಷಕರು ಕಾರ್ಯಕ್ರಮಗಳನ್ನು ನೇರವಾಗಿ ವೀಕ್ಷಣೆ ಮಾಡಲಿದ್ದಾರೆ. 11 ದಿನವೂ ಪದಕ ಸ್ಪರ್ಧೆ: ಪದಕ ಸ್ಪರ್ಧೆಗಳು ಆ.29 ಅಂದರೆ ಗುರುವಾರದಿಂದ ಆರಂಭಗೊಳ್ಳಲಿದ್ದು, ಒಲಿಂಪಿಕ್ಸ್‌ನಂತೆಯೇ ಪ್ರತಿ ದಿನವೂ ಪದಕ ಸ್ಪರ್ಧೆಗಳು ಇರಲಿವೆ. 11 ದಿನಗಳಲ್ಲಿ 22 ಕ್ರೀಡೆಗಳ ಒಟ್ಟು 549 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ.

ಪ್ಯಾರಾಲಿಂಪಿಕ್ಸ್‌ನ ಉಗಮ ಸ್ಥಾನ ಎಂದೇ ಕರೆಯಲ್ಪಡುವ ಇಂಗ್ಲೆಂಡ್‌ನ ಲಂಡನ್‌ ಸಮೀಪದ ಸ್ಟೋಕ್‌ ಮ್ಯಾಂಡೆವಿಲ್ಲೆ ಎಂಬ ಹಳ್ಳಿಯಲ್ಲಿ ಶನಿವಾರ ಕ್ರೀಡಾ ಜ್ಯೋತಿಯನ್ನು ಹತ್ತಿಸಲಾಯಿತು. ಜ್ಯೋತಿಯನ್ನು ಇಂಗ್ಲಿಷ್ ಕಡಲ್ಗಾಲುವೆ ಮೂಲಕ ಪ್ಯಾರಿಸ್‌ಗೆ ತರಲಾಗುತ್ತಿದ್ದು, ಬುಧವಾರ ಉದ್ಘಾಟನಾ ಸಮಾರಂಭದ ವೇಳೆ ಜ್ಯೋತಿ ಪುಂಜವನ್ನು ಬೆಳಗಿಸಲಾಗುತ್ತದೆ. ದಾಖಲೆ ಪದಕ ಗೆಲ್ಲುವ

ವಿಶ್ವಾಸದಲ್ಲಿ ಭಾರತ

ಭಾರತ ಈ ಬಾರಿ 84 ಕ್ರೀಡಾಪಟುಗಳನ್ನು ಪ್ಯಾರಿಸ್‌ಗೆ ಕಳುಹಿಸಿದ್ದು, ಕನಿಷ್ಠ 25 ಪದಕಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದೆ. 2020ರ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ 54 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಭಾರತ ಒಟ್ಟು 19 ಪದಕಗಳನ್ನು ಗೆದ್ದಿತ್ತು. ಕಳೆದ ಬಾರಿ ಪದಕ ಪಟ್ಟಿಯಲ್ಲಿ 24ನೇ ಸ್ಥಾನ ಪಡೆದಿದ್ದ ಭಾರತ, ಈ ಬಾರಿ ಅಗ್ರ-15ರೊಳಗೆ ಸ್ಥಾನ ಗಿಟ್ಟಿಸಲು ಎದುರು ನೋಡುತ್ತಿದೆ. ಭಾರತ ಈ ಬಾರಿ 12 ಕ್ರೀಡೆಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಕರ್ನಾಟಕದ ನಾಲ್ವರು

ಕ್ರೀಡಾಪಟುಗಳು ಕಣಕ್ಕೆ

ಪ್ಯಾರಿಸ್‌ ಪ್ಯಾರಾ ಗೇಮ್ಸ್‌ನಲ್ಲಿ ಕರ್ನಾಟಕದ ರಕ್ಷಿತಾ ರಾಜು, ಶ್ರೀಹರ್ಷ ದೇವರಡ್ಡಿ ರಾಮಕೃಷ್ಣ ಹಾಗೂ ಸಕೀನಾ ಖಾತೂನ್‌ ಸ್ಪರ್ಧಿಸಲಿದ್ದಾರೆ. ಮೂಲತಃ ಕರ್ನಾಟಕದ, ಸದ್ಯ ಉತ್ತರ ಪ್ರದೇಶದ ಕ್ರೀಡಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಐಎಎಸ್‌ ಅಧಿಕಾರಿ ಸುಹಾಸ್‌ ಯತಿರಾಜ್‌ ಕೂಡಾ ಕಣಕ್ಕಿಳಿಯಲಿದ್ದಾರೆ.ಬ್ಯಾಡ್ಮಿಂಟನ್‌ ತಾರೆ ಸುಹಾಸ್‌ ಕಳೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದು, ಈ ಬಾರಿ ಚಿನ್ನದ ನಿರೀಕ್ಷೆಯಲ್ಲಿದ್ದಾರೆ. 2018 ಹಾಗೂ 2023ರ ಪ್ಯಾರಾ ಏಷ್ಯನ್‌ ಗೇಮ್ಸ್‌ ಚಾಂಪಿಯನ್‌ ರಕ್ಷಿತಾ ರಾಜು, ಈ ಬಾರಿ ಮಹಿಳೆಯರ 1500 ಮೀ. ಟಿ11 ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ಸಕೀನಾ ಖಾತೂನ್‌ ಮಹಿಳೆಯರ 45 ಕೆ.ಜಿ. ವೇಟ್‌ಲಿಫ್ಟಿಂಗ್‌ನಲ್ಲಿ, ಶ್ರೀಹರ್ಷ ಶೂಟಿಂಗ್‌ನಲ್ಲಿ ಸ್ಪರ್ಧಿಸಲಿದ್ದಾರೆ.

Share this article