ಭಾರತ vs ಆಸೀಸ್‌ ಮೊದಲ ಟೆಸ್ಟ್‌ ಪಂದ್ಯಕ್ಕೆ ಪರ್ತ್‌ ಆತಿಥ್ಯ?

KannadaprabhaNewsNetwork | Updated : Mar 20 2024, 08:23 AM IST

ಸಾರಾಂಶ

ವರ್ಷಾಂತ್ಯದಲ್ಲಿ 5 ಪಂದ್ಯಗಳ ಮಹತ್ವದ ಟೆಸ್ಟ್‌ ಸರಣಿ. ಈ ಪೈಕಿ ಅಡಿಲೇಡ್‌ನಲ್ಲಿ ನಡೆಯಲಿರುವ 2ನೇ ಟೆಸ್ಟ್‌ ಹಗಲು-ರಾತ್ರಿ ಪಂದ್ಯವಾಗಿರಲಿದೆ ಎಂದು ವರದಿ.

ಮೆಲ್ಬರ್ನ್‌: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್‌ ಸರಣಿಯ ಮೊದಲ ಪಂದ್ಯಕ್ಕೆ ಪರ್ತ್‌ ಕ್ರೀಡಾಂಗಣ ಆತಿಥ್ಯ ವಹಿಸುವ ಸಾಧ್ಯತೆಯಿದೆ. ಈ ಬಗ್ಗೆ ಆಸ್ಟ್ರೇಲಿಯಾ ಮಾಧ್ಯಮಗಳು ವರದಿ ಪ್ರಕಟಿಸಿದ್ದು, ಅಡಿಲೇಡ್‌, ಬ್ರಿಸ್ಬೇನ್‌, ಮೆಲ್ಬರ್ನ್‌ ಹಾಗೂ ಸಿಡ್ನಿಯಲ್ಲೂ ಪಂದ್ಯಗಳು ನಡೆಯಲಿವೆ ಎಂದು ತಿಳಿಸಿದೆ.

ವರ್ಷಾಂತ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, 5 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಪೈಕಿ ಅಡಿಲೇಡ್‌ನಲ್ಲಿ ನಡೆಯಲಿರುವ 2ನೇ ಟೆಸ್ಟ್‌ ಹಗಲು-ರಾತ್ರಿ ಪಂದ್ಯವಾಗಿರಲಿದೆ ಎಂದು ವರದಿಯಾಗಿದೆ. ಕೆಲ ವಾರಗಳಲ್ಲೇ ಕ್ರಿಕೆಟ್‌ ಆಸ್ಟ್ರೇಲಿಯಾ ಅಧಿಕೃತ ವೇಳಾಪಟ್ಟಿ ಪ್ರಕಟಿಸುವ ನಿರೀಕ್ಷೆಯಿದೆ.

ಭಾರತ ತಂಡ 22 ವರ್ಷಗಳ ಬಳಿಕ ಮೊದಲ ಬಾರಿ ಆಸ್ಟ್ರೇಲಿಯಾದಲ್ಲಿ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾಗಿಯಾಗಲಿದೆ. 1991-92ರಲ್ಲಿ ನಡೆದಿದ್ದ ಸರಣಿಯಲ್ಲಿ ಆಸೀಸ್‌ 4-0 ಅಂತರದಲ್ಲಿ ಗೆದ್ದಿತ್ತು. ಭಾರತ ಕೊನೆ ಬಾರಿ ಆಸ್ಟ್ರೇಲಿಯಾದಲ್ಲಿ 2020-21ರಲ್ಲಿ ಟೆಸ್ಟ್‌ ಸರಣಿ ಆಡಿದ್ದು, ಟೀಂ ಇಂಡಿಯಾ 2-1ರಲ್ಲಿ ಸರಣಿ ಜಯಿಸಿತ್ತು.

ಚಾಂಪಿಯನ್ಸ್‌ ಟ್ರೋಫಿಯ ಸ್ಥಳಾಂತರ ಒಪ್ಪಲ್ಲ: ಪಿಸಿಬಿ

ಕರಾಚಿ: ಯಾವುದೇ ಕಾರಣಕ್ಕೂ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯನ್ನು ಪಾಕಿಸ್ತಾನದಿಂದ ಸ್ಥಳಾಂತರಿಸಲು ಒಪ್ಪುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಮೊಹ್ಸಿನ್‌ ನಖ್ವಿ ಹೇಳಿದ್ದಾರೆ. 

ಸದ್ಯದ ಮಟ್ಟಿಗೆ ಪಾಕ್‌ನಲ್ಲಿ ನಡೆಯುವ ಟೂರ್ನಿಯಲ್ಲಿ ಭಾರತ ಪಾಲ್ಗೊಳ್ಳುವ ಸಾಧ್ಯತೆಯಿಲ್ಲ. ಹೀಗಾಗಿ ಟೂರ್ನಿ ಸ್ಥಳಾಂತರಗೊಳ್ಳಲಿದೆ ಎಂದೇ ಹೇಳಲಾಗುತ್ತಿದೆ. ಈ ನಡುವೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ನಖ್ವಿ, ‘ಬಿಸಿಸಿಐ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದೇನೆ. 

ಟೂರ್ನಿಯನ್ನು ಪಾಕಿಸ್ತಾನದಲ್ಲೇ ಆಯೋಜಿಸುತ್ತೇವೆ’ ಎಂದಿದ್ದಾರೆ. ಕಳೆದ ವರ್ಷ ಪಾಕ್‌ನಲ್ಲಿ ನಿಗದಿಯಾಗಿದ್ದ ಏಷ್ಯಾಕಪ್‌ ಬಳಿಕ ಹೈಬ್ರಿಡ್‌ ಮಾದರಿಯಲ್ಲಿ ಪಾಕ್‌, ಶ್ರೀಲಂಕಾದಲ್ಲಿ ನಡೆಸಲಾಗಿತ್ತು. ಭಾರತ ತಂಡ 2008ರಿಂದಲೂ ಪಾಕ್‌ನಲ್ಲಿ ಕ್ರಿಕೆಟ್‌ ಆಡಿಲ್ಲ.

Share this article