ಪ್ಯಾರಿಸ್‌ ಒಲಿಂಪಿಕ್ಸ್‌: ಭಾರತದ ಅಥ್ಲೀಟ್ಸ್‌ಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಕೆ

KannadaprabhaNewsNetwork |  
Published : Jul 27, 2024, 12:47 AM ISTUpdated : Jul 27, 2024, 04:13 AM IST
ಮೋದಿ | Kannada Prabha

ಸಾರಾಂಶ

ಎಲ್ಲಾ ಕ್ರೀಡಾಪಟುಗಳು ಭಾರತದ ಹೆಮ್ಮೆ. ತಮ್ಮ ಅಸಾಧಾರಣ ಪ್ರದರ್ಶನ, ಕ್ರೀಡಾ ಮನೋಭಾವದ ಮೂಲಕ ಅವರೆಲ್ಲರೂ ನಮಗೆಲ್ಲರಿಗೂ ಸ್ಫೂರ್ತಿ ತುಂಬಲಿ’ ಎಂದು ಹಾರೈಸಿದ್ದಾರೆ.

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಅಥ್ಲೀಟ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಹಾರೈಸಿದ್ದಾರೆ. ಈ ಬಗ್ಗೆ ಶುಕ್ರವಾರ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘ಪ್ಯಾರಿಸ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸಲಿರುವ ಭಾರತದ ಎಲ್ಲಾ ಅಥ್ಲೀಟ್ಸ್‌ಗೆ ಶುಭವಾಗಲಿ. ಎಲ್ಲಾ ಕ್ರೀಡಾಪಟುಗಳು ಭಾರತದ ಹೆಮ್ಮೆ. ತಮ್ಮ ಅಸಾಧಾರಣ ಪ್ರದರ್ಶನ, ಕ್ರೀಡಾ ಮನೋಭಾವದ ಮೂಲಕ ಅವರೆಲ್ಲರೂ ನಮಗೆಲ್ಲರಿಗೂ ಸ್ಫೂರ್ತಿ ತುಂಬಲಿ’ ಎಂದು ಹಾರೈಸಿದ್ದಾರೆ.

ಪಥ ಸಂಚಲನದಲ್ಲಿ ಭಾರತದ 78 ಮಂದಿ

ಸೀನ್‌ ನದಿ ಮೇಲೆ ನಡೆದ ಉದ್ಘಾಟನಾ ಸಮಾರಂಭದ ಪಥಸಂಚಲನದಲ್ಲಿ ಭಾರತದ 78 ಅಥ್ಲೀಟ್‌ಗಳು ಹಾಗೂ ಅಧಿಕಾರಿಗಳು ಪಾಲ್ಗೊಂಡರು. ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ಹಾಗೂ ಟೇಬಲ್‌ ಟೆನಿಸ್‌ ಪಟು ಶರತ್‌ ಕಮಾಲ್‌ ಭಾರತದ ಧ್ವಜಧಾರಿಗಳಾಗಿ ಪಥಸಂಚಲನವನ್ನು ಮುನ್ನಡೆಸಿದರು. ಟೆನಿಸಿಗ ರೋಹನ್‌ ಬೋಪಣ್ಣ, ಆರ್ಚರಿ ಪಟು ದೀಪಿಕಾ ಕುಮಾರಿ, ಬಾಕ್ಸರ್‌ ಲವ್ಲೀನಾ ಬೋರ್ಗೊಹೈನ್‌, ಶಟ್ಲರ್‌ಗಳಾದ ಎಚ್‌.ಎಸ್‌.ಪ್ರಣಯ್‌, ಲಕ್ಷ್ಯ ಸೇನ್‌, ಸಾತ್ವಿಕ್‌, ಚಿರಾಗ್‌ ಶೆಟ್ಟಿ ಕೂಡಾ ಪಥ ಸಂಚಲನದಲ್ಲಿ ಭಾಗಿಯಾದರು. ಪುರುಷರ ಹಾಕಿ ತಂಡಕ್ಕೆ ಶನಿವಾರ ಪಂದ್ಯವಿರುವ ಕಾರಣ 3 ಮೀಸಲು ಆಟಗಾರರು ಮಾತ್ರ ಸಮಾರಂಭಕ್ಕೆ ಹಾಜರಾದರು. ಅಥ್ಲೆಟಿಕ್ಸ್‌, ವೇಟ್‌ಲಿಫ್ಟಿಂಗ್, ಕುಸ್ತಿಪಟುಗಳು ಇನ್ನಷ್ಟೇ ಪ್ಯಾರಿಸ್ ತಲುಬೇಕಿರುವ ಕಾರಣ ನೀರಜ್‌ ಚೋಪ್ರಾ, ಮೀರಾಬಾಯಿ ಚಾನು ಸೇರಿ ಪ್ರಮುಖರು ಪಥಸಂಚಲನ ವೇಳೆ ಇರಲಿಲ್ಲ.

 ಕ್ರೀಡಾ ಗ್ರಾಮದಲ್ಲಿ ಭಾರತದ ಅಥ್ಲೀಟ್ಸ್‌ಗೆ ಆಹಾರ ಕೊರತೆ! 

ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಪ್ಯಾರಿಸ್‌ಗೆ ತೆರಳಿರುವ ಭಾರತದ ಅಥ್ಲೀಟ್‌ಗಳು ತಮಗೆ ಆಹಾರದ ಕೊರತೆ ಉಂಟಾಗಿದ್ದಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ರೀಡಾ ಗ್ರಾಮದಲ್ಲಿ ಬೃಹತ್‌ ರೆಸ್ಟೋರೆಂಟ್‌ ನಿರ್ಮಿಸಲಾಗಿದೆ. ನೂರಾರು ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತಿದೆ. ಆದರೆ ತಾವು ಊಟಕ್ಕೆ ತೆರಳಿದಾಗ ಕೆಲವು ಭಾರತೀಯ ಖಾದ್ಯಗಳು ಖಾಲಿಯಾಗಿತ್ತು ಎಂದು ಬ್ಯಾಡ್ಮಿಂಟನ್‌ ಆಟಗಾರ್ತಿ ತನಿಶಾ ಕ್ರಾಸ್ಟೊ ಹೇಳಿದ್ದಾರೆ. ಬಾಕ್ಸರ್‌ ಅಮಿತ್ ಪಂಘಲ್‌, ತಮ್ಮ ಕೋಣೆ ಕಳೆದ ಬಾರಿ ಒಲಿಂಪಿಕ್ಸ್‌ ವೇಳೆ ನೀಡಿದ್ದ ಕೋಣೆಗಿಂತ ಸಣ್ಣದು ಎಂದು ದೂರಿದ್ದಾರೆ. ಅಲ್ಲದೇ ಆಹಾರ ಕೊರತೆ ಆಗಿದ್ದಕ್ಕೆ ತಮ್ಮ ತಂಡದವರಿಗೆ ಹೇಳಿ ಹೊರಗಿನಿಂದ ರೋಟಿ ದಾಲ್‌ ತರಿಸಿಕೊಂಡು ತಿಂದಿದ್ದಾಗಿಯೂ ಹೇಳಿಕೊಂಡಿದ್ದಾರೆ.

PREV

Recommended Stories

ಕೆಎಸ್‌ಸಿಎ ಚುನಾವಣೆ: ವೆಂಕಟೇಶ್‌ ಪ್ರಸಾದ್‌ ಟೀಮ್‌ಗೆ ಕುಂಬ್ಳೆ, ದ್ರಾವಿಡ್‌, ಶ್ರೀನಾಥ್‌ ಬೆಂಬಲ
ಏಷ್ಯಾಕಪ್‌ ಟಿ20: ಭಾರತ ತಂಡ ಆಯ್ಕೆ ಕುತೂಹಲಕ್ಕೆ ಇಂದು ತೆರೆ