ಪ್ರೊ ಕಬಡ್ಡಿ: ಸ್ಟೀಲರ್ಸ್‌, ಪೈರೇಟ್ಸ್‌ಗೆ ಭರ್ಜರಿ ಜಯ

KannadaprabhaNewsNetwork |  
Published : Jan 30, 2024, 02:04 AM IST
ಶಿವಮ್‌ | Kannada Prabha

ಸಾರಾಂಶ

ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ಪ್ಲೇ-ಆಫ್‌ ಪ್ರವೇಶಿಸಲು ಪೈಪೋಟಿ ತೀವ್ರಗೊಳ್ಳುತ್ತಿದ್ದು, ಹರ್ಯಾಣ ಸ್ಟೀಲರ್ಸ್‌ ಹಾಗೂ ಪಾಟ್ನಾ ಪೈರೇಟ್ಸ್‌ ಆಕರ್ಷಕ ಗೆಲುವುಗಳ ಮೂಲಕ, ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯುವ ಪ್ರಯತ್ನ ನಡೆಸಿವೆ.

ಪಾಟ್ನಾ: ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ಪ್ಲೇ-ಆಫ್‌ ಪ್ರವೇಶಿಸಲು ಪೈಪೋಟಿ ತೀವ್ರಗೊಳ್ಳುತ್ತಿದ್ದು, ಹರ್ಯಾಣ ಸ್ಟೀಲರ್ಸ್‌ ಹಾಗೂ ಪಾಟ್ನಾ ಪೈರೇಟ್ಸ್‌ ಆಕರ್ಷಕ ಗೆಲುವುಗಳ ಮೂಲಕ, ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯುವ ಪ್ರಯತ್ನ ನಡೆಸಿವೆ. ಸೋಮವಾರ ಹರ್ಯಾಣ ತಂಡವು ಬೆಂಗಾಲ್‌ ವಾರಿಯರ್ಸ್‌ ವಿರುದ್ಧ 41-36 ಅಂಕಗಳಲ್ಲಿ ಗೆದ್ದರೆ, ಪಾಟ್ನಾ 32-20ರ ಅಂತರದಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ ಜಯಭೇರಿ ಬಾರಿಸಿತು. ಹರ್ಯಾಣ ಅಂಕಪಟ್ಟಿಯಲ್ಲಿ 6ನೇ ಸ್ಥಾನ ಪಡೆದರೆ, ಪಾಟ್ನಾ 5ನೇ ಸ್ಥಾನಕ್ಕೇರಿದೆ.

ಪಾಟಲೀಪುತ್ರ ಒಳಾಂಗಣ ಕ್ರೀಡಾಂಗದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್‌ 41-36 ಅಂಕಗಳ ಅಂತರದಿಂದ ವಾರಿಯರ್ಸ್‌ ಸವಾಲನ್ನು ಮೆಟ್ಟಿನಿಂತಿತು. ಜತೆಗೆ ಹಿಂದಿನ ದಬಾಂಗ್‌ ದಿಲ್ಲಿ ಎದುರಿನ ಸೋಲಿನಿಂದ ಸ್ಟೀಲರ್ಸ್‌ ತಂಡ ಹೊರಬಂದಿತು. ಸ್ಟೀಲರ್ಸ್‌ ಪರ ಸಿದ್ಧಾರ್ಥ್‌ ದೇಸಾಯಿ (11 ಅಂಕ) ಮತ್ತು ಶಿವಂ (12 ಅಂಕ) ಸೂಪರ್‌ ಟೆನ್‌ ಹಾಗೂ ವಿನಯ್‌ 6 ಅಂಕ ಗಳಿಸಿ ಗೆಲುವಿಗೆ ಬೆಂಬಲ ವ್ಯಕ್ತಪಡಿಸಿದರು. ಅತ್ತ ಮಣಿಂದರ್‌ ಸಿಂಗ್‌ (13 ಅಂಕ), ನಿತಿನ್‌ ಕುಮಾರ್‌ (9 ಅಂಕ) ಮತ್ತು ಶ್ರೀಕಾಂತ್‌ (7 ಅಂಕ) ದಿಟ್ಟ ಹೋರಾಟ ನೀಡಿದರೂ ತಂಡದ ಹ್ಯಾಟ್ರಿಕ್‌ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. ಹಿನ್ನಡೆ ತಗ್ಗಿಸುವ ಭರವಸೆಯಲ್ಲಿ ಎರಡನೇ ಅವಧಿಯನ್ನು ಆರಂಭಿಸಿ ಜೈದೀಪ್‌ ದಹಿಯಾ ನೇತೃತ್ವದ ಸ್ಟೀಲರ್ಸ್‌ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು. ಇದರ ಫಲವಾಗಿ 24ನೇ ನಿಮಿಷದಲ್ಲಿ ಬೆಂಗಾಲ್‌ ತಂಡವನ್ನು ಆಲೌಟ್‌ ಮಾಡಿದ ಹರಿಯಾಣ, ಮುನ್ನಡೆ ಕಾಯ್ದುಕೊಳ್ಳುವಲ್ಲಿ ಸಫಲಗೊಂಡಿತು. ಮೊದಲ ಅವಧಿಯಲ್ಲಿ ಗಮನ ಸೆಳೆದಿದ್ದ ಸ್ಟಾರ್‌ ರೇಡರ್‌ ಸಿದ್ಧಾರ್ಥ್‌, ದ್ವಿತೀಯಾರ್ಧದಲ್ಲಿ ಅಬ್ಬರಿಸಿ ಸೂಪರ್‌ ಟೆನ್‌ ಸಾಧನೆ ಮಾಡಿದರು.

ಅನುಭವಿ ನಾಯಕ ಮಣಿಂದರ್‌ ಸಿಂಗ್‌ ನಾಯಕತ್ವದ ಬೆಂಗಾಲ್‌ ಕೂಡ ಪ್ರತಿ ಹೋರಾಟ ಸಂಘಟಿಸಿತು. ನಿತಿನ್‌ ಕುಮಾರ್‌ ಮತ್ತು ಶ್ರೀಕಾಂತ್‌ ಜಾಧವ್‌ ಆಕರ್ಷಕ ರೇಡಿಂಗ್‌ ಮೂಲಕ ತಂಡದ ಹೋರಾಟಕ್ಕೆ ನೆರವಾದರು.

ಪಂದ್ಯ ಮುಕ್ತಾಯಕ್ಕೆ 10 ನಿಮಿಷಗಳಿರುವಾಗ ಹರಿಯಾಣ (31-27) ನಾಲ್ಕು ಅಂಕಗಳ ಮುನ್ನಡೆ ಕಾಯ್ದುಕೊಂಡು ಗೆಲುವಿನ ಮುನ್ಸೂಚನೆ ನೀಡಿತು. 30ರಿಂದ 35 ನಿಮಿಷಗಳ ಆಟದಲ್ಲಿ ಆಲ್‌ರೌಂಡ್‌ ಪ್ರದರ್ಶನ ಹೊರಹಾಕಿದ ಹರ್ಯಾಣ 9 ಅಂಕ ಕಲೆ ಹಾಕಿದರೆ, ಬೆಂಗಾಲ್‌ ಕೇವಲ 3 ಅಂಕಗಳಿಗೆ ಸೀಮಿತಗೊಂಡಿತು. 33ನೇ ನಿಮಿಷದಲ್ಲಿ ವಾರಿಯರ್ಸ್‌ ತಂಡವನ್ನು ಆಲೌಟ್‌ ಮಾಡಿದ ಹರ್ಯಾಣ ತನ್ನ ಮುನ್ನಡೆಯನ್ನು 9 ಅಂಕಗಳಿಗೆ (39-30) ವಿಸ್ತರಿಸಿಕೊಂಡಿತು. ಇದರಿಂದ ಸಹಜವಾಗಿ ಒತ್ತಡಕ್ಕೆ ಸಿಲುಕಿದ ಮಣಿಂದರ್‌ ಬಳಗ ಹೊಂದಾಣಿಕೆ ಆಟವಾಡುವಲ್ಲಿ ಪದೇ ಪದೆ ಎಡವಿದರೆ, ಸ್ಟೀಲರ್ಸ್‌ ಮಾತ್ರ ತನ್ನ ಪ್ರಭುತ್ವವನ್ನು ಕಾಯ್ದುಕೊಂಡಿತು.

ಸೂಪರ್‌ ಟ್ಯಾಕಲ್‌ನಲ್ಲಿಮಿಂಚಿದ ಬೆಂಗಾಲ್‌ ವಾರಿಯರ್ಸ್‌ ಪಂದ್ಯದ ಪ್ರಥಮಾರ್ಧಕ್ಕೆ ಹರ್ಯಾಣ ಸ್ಟೀಲರ್ಸ್‌ ವಿರುದ್ಧ 18-16 ಅಂಕಗಳ ಅಂತರದಲ್ಲಿ ಮುನ್ನಡೆ ಕಂಡುಕೊಂಡಿತು.

ಪಂದ್ಯದ ಆರಂಭದಿಂದಲೂ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನೀಡುವ ಮೂಲಕ ಮುನ್ನಡೆಗಾಗಿ ಪ್ರಯತ್ನಿಸಿದವು. ಬೆಂಗಾಲ್‌ ಪರ ಮಣಿಂದರ್‌ ಮತ್ತು ಶ್ರೀಕಾಂತ್‌ ಸೂಧಿರ್ತಿದಾಯಕ ಪ್ರದರ್ಶನ ತೋರಿದರೆ, ಹರಿಯಾಣ ತಂಡದ ಪರ ಸಿದ್ಧಾರ್ಥ್‌ ದೇಸಾಯಿ ಹಾಗೂ ವಿನಯ್‌ ಗಮನ ಸೆಳೆದರು. 13ನೇ ನಿಮಿಷದಲ್ಲಿ ಉಭಯ ತಂಡಗಳು 11 -11ರಲ್ಲಿ ಸಮಬಲದ ಹೋರಾಟ ನೀಡಿದ ಪಂದ್ಯ ಆರಂಭದಲ್ಲೇ ರೋಚಕತೆ ಮೂಡಿಸಿತು. ಈ ವೇಳೆ ಸತತ ಎರಡು ಅಂಕ ಗಳಿಸಿದ ಹರ್ಯಾಣ 13-11ರಲ್ಲಿ ಮೇಲುಗೈ ಸಾಧಿಸಿತು. ಆದರೆ ಕೆಲವೇ ನಿಮಿಷಗಳಲ್ಲಿಎರಡು ಸೂಪರ್‌ ಟ್ಯಾಕಲ್‌ನಲ್ಲಿ ಮಿಂಚಿನ ಆಟವಾಡಿದ ಬೆಂಗಾಲ್‌ 16-17ರಲ್ಲಿಅಂತರ ಕಾಯ್ದುಕೊಂಡಿತು.

ಇಂದಿನ ಪಂದ್ಯ: ಪುಣೇರಿ ಪಲ್ಟನ್‌-ತೆಲುಗು ಟೈಟಾನ್ಸ್‌, ರಾತ್ರಿ 8ಕ್ಕೆ

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕ್ರಿಕೆಟ್‌ ‘ವಿಶ್ವ’ ಯುದ್ಧ ಗೆಲ್ಲೋರ್‍ಯಾರು..?
ಫೈನಲ್‌ ಟಿಕೆಟ್‌ಗಾಗಿ ಇಂದು ಕಿವೀಸ್‌ vs ದ.ಆಫ್ರಿಕಾ