ನವದೆಹಲಿ: ಭಾರತ ಕ್ರಿಕೆಟ್ ತಂಡಕ್ಕೆ ಮುಂದಿನ ಕೆಲ ತಿಂಗಳಲ್ಲಿ ಹೊಸ ಪ್ರಧಾನ ಕೋಚ್‌ನ ನೇಮಕವಾಗುವುದು ಖಚಿತ ಎನ್ನಲಾಗುತ್ತಿದೆ. ಟಿ20 ವಿಶ್ವಕಪ್ ಬಳಿಕ ಹುದ್ದೆಯಿಂದ ಕೆಳಗಿಳಿಯುವುದಾಗಿ ಹಾಲಿ ಕೋಚ್ ರಾಹುಲ್ ದ್ರಾವಿಡ್ ಬಿಸಿಸಿಐಗೆ ತಿಳಿಸಿದ್ದು, ತಾವು ಮರು ಆಯ್ಕೆ ಬಯಸಿ ಅರ್ಜಿ ಸಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಕಳೆದ ವರ್ಷ ಏಕದಿನ ವಿಶ್ವಕಪ್ ಮುಕ್ತಾಯಗೊಂಡ ಬಳಿಕವೇ ದ್ರಾವಿಡ್‌ರ ಗುತ್ತಿಗೆ ಅವಧಿ ಮುಗಿದಿತ್ತು. ಆದರೆ 2024ರ ಟಿ20 ವಿಶ್ವಕಪ್ ವರೆಗೂ ಹುದ್ದೆಯಲ್ಲಿ ಮುಂದುವರಿಯುವಂತೆ ಬಿಸಿಸಿಐ ಕೇಳಿಕೊಂಡಿತ್ತು. ಆಗಲೇ ದ್ರಾವಿಡ್ ತಾವು 2024ರ ಜೂನ್ ಬಳಿಕ ಕೋಚ್ ಆಗಿ ಮುಂದುವರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು ಎನ್ನಲಾಗಿದೆ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವ ಉದ್ದೇಶದಿಂದ ದ್ರಾವಿಡ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ಇನ್ನೊಂದು ವರ್ಷ ಕೇವಲ ಟೆಸ್ಟ್ ತಂಡದ ಕೋಚ್ ಆಗಿಯಾದರೂ ಇರುವಂತೆ ಹಲವು ಹಿರಿಯ ಆಟಗಾರರು ದ್ರಾವಿಡ್‌ರನ್ನು ಕೇಳಿದ್ದರು ಎನ್ನಲಾಗಿದ್ದು, ಅದಕ್ಕೂ ಅವರು ಒಪ್ಪಿಗೆ ನೀಡಿಲ್ಲ ಎಂದು ತಿಳಿದುಬಂದಿದೆ.
ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ನಿರ್ದೇಶಕರಾಗಿರುವ, ದ್ರಾವಿಡ್‌ರ ಅನುಪಸ್ಥಿತಿಯಲ್ಲಿ ಭಾರತ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುವ ವಿವಿಎಸ್ ಲಕ್ಷ್ಮಣ್ ಸಹ, ಪ್ರಧಾನ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವುದಿಲ್ಲ ಎಂದು ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ. ಬಿಸಿಸಿಐ ಈ ಬಾರಿ ವಿದೇಶಿ ಕೋಚ್ ಒಬ್ಬರನ್ನು ನೇಮಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಮುಂಚೂಣಿಯಲ್ಲಿ ಫ್ಲೆಮಿಂಗ್
ನ್ಯೂಜಿಲೆಂಡ್‌ನ ಮಾಜಿ ನಾಯಕ, ಹಲವು ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಆಗಿರುವ ಸ್ಟೀಫನ್ ಫ್ಲೆಮಿಂಗ್ ಭಾರತದ ಹೊಸ ಕೋಚ್ ಆಗಿ ನೇಮಕಗೊಳ್ಳಬಹುದು ಎನ್ನಲಾಗುತ್ತಿದೆ. ಒಂದು ವೇಳೆ ಫ್ಲೆಮಿಂಗ್ ಅರ್ಜಿ ಸಲ್ಲಿಸಿದರೆ, ಅವರನ್ನು ಬಿಸಿಸಿಐ ಪರಿಗಣಿಸುವ ಸಾಧ್ಯತೆ ಹೆಚ್ಚು ಎಂದು ತಿಳಿದುಬಂದಿದೆ.