ಆರ್‌ಸಿಬಿ vs ಚೆನ್ನೈ ಪಂದ್ಯಕ್ಕೆ ಮಳೆ ಭೀತಿ: ಮಳೆ ಬಂದ್ರೆ ಪ್ಲೇ-ಆಫ್‌ ಲೆಕ್ಕಾಚಾರ ಹೇಗೆ?

KannadaprabhaNewsNetwork | Updated : May 18 2024, 04:20 AM IST

ಸಾರಾಂಶ

ಪಂದ್ಯಕ್ಕೆ ಮಳೆ ಭೀತಿ ಇದ್ದು, ಆರ್‌ಸಿಬಿ ಆಟಗಾರರು ಹಾಗೂ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ. ಮಳೆಯಿಂದ ಪಂದ್ಯ ರದ್ದಾದರೆ ಚೆನ್ನೈ ಪ್ಲೇ-ಆಫ್‌ ಪ್ರವೇಶಿಸಲಿದೆ.

 ಬೆಂಗಳೂರು: 17ನೇ ಆವೃತ್ತಿ ಐಪಿಎಲ್‌ನ ಬಹುನಿರೀಕ್ಷಿತ ಆರ್‌ಸಿಬಿ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ನಿರ್ಣಾಯಕ ಹಣಾಹಣಿಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಆದರೆ ಪಂದ್ಯಕ್ಕೆ ಮಳೆ ಭೀತಿ ಇದ್ದು, ಆರ್‌ಸಿಬಿ ಆಟಗಾರರು ಹಾಗೂ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ.

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಶನಿವಾರ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆಯಿದ್ದು, ಪಂದ್ಯಕ್ಕೆ ಅಡ್ಡಿಪಡಿಸುವ ಭೀತಿಯಿದೆ. ಪಂದ್ಯದ ಫಲಿತಾಂಶಕ್ಕೆ ತಲಾ 5 ಓವರ್ ಪಂದ್ಯವಾದರೂ ನಡೆಯಬೇಕು. ಒಂದು ವೇಳೆ ಪಂದ್ಯ ರದ್ದಾದರೆ ಇತ್ತಂಡಕ್ಕೂ ತಲಾ 1 ಅಂಕ ಸಿಗಲಿದ್ದು, ಆರ್‌ಸಿಬಿ ಪ್ಲೇ-ಆಫ್‌ ಕನಸು ಭಗ್ನಗೊಳ್ಳಲಿದೆ. ಚೆನ್ನೈ ನಾಕೌಟ್‌ ಪ್ರವೇಶಿಸಲಿದೆ.

ಪಂದ್ಯಕ್ಕೆ ಮಳೆ ಅಡ್ಡಿಯಾಗಿ, ಓವರ್‌ಗಳು ಕಡಿತಗೊಳ್ಳುವ ಸಾಧ್ಯತೆಯಿದೆ. ಹೀಗಾದರೆ ಆರ್‌ಸಿಬಿ ಪ್ಲೇ-ಆಫ್‌ಗೇರಲು ಏನು ಮಾಡಬೇಕು ಎಂಬ ಲೆಕ್ಕಾಚಾರ ಇಲ್ಲಿದೆ.

ಆರ್‌ಸಿಬಿ ಮೊದಲು ಬ್ಯಾಟ್ ಮಾಡಿದರೆ: 20 ಓವರ್ ಪಂದ್ಯ ನಡೆದು ಆರ್‌ಸಿಬಿ 200 ರನ್‌ ಗಳಿಸಿದರೆ ಚೆನ್ನೈಯನ್ನು 182 ರನ್‌ಗೆ ಕಟ್ಟಿ ಹಾಕಬೇಕು. 15 ಓವರ್‌ನಲ್ಲಿ 170 ರನ್‌ ಗಳಿಸಿದರೆ ಚೆನ್ನೈಯನ್ನು 152ಕ್ಕೆ, 10 ಓವರ್‌ ಪಂದ್ಯ ನಡೆದು 130 ರನ್‌ ಕಲೆಹಾಕಿದರೆ ಚೆನ್ನೈಯನ್ನು 112 ರನ್‌ಗೆ ನಿಯಂತ್ರಿಸಬೇಕು. 5 ಓವರ್‌ ಪಂದ್ಯ ನಡೆದು ಆರ್‌ಸಿಬಿ 80 ರನ್ ಗಳಿಸಿದರೆ, ಚೆನ್ನೈಯನ್ನು ಆರ್‌ಸಿಬಿ ಬೌಲರ್‌ಗಳು 62 ರನ್‌ ರನ್‌ಗೆ ಕಟ್ಟಿಹಾಕಿದರೆ ಮಾತ್ರ ಆರ್‌ಸಿಬಿ ಪ್ಲೇ-ಆಫ್‌ಗೇರಲಿದೆ.

ಸಿಎಸ್‌ಕೆ ಮೊದಲು ಬ್ಯಾಟ್‌ ಮಾಡಿದರೆ: 20 ಓವರ್ ಪಂದ್ಯ ನಡೆದು ಚೆನ್ನೈ 201 ರನ್‌ ಗುರಿ ನೀಡಿದರೆ, ಅದನ್ನು ಆರ್‌ಸಿಬಿ 18.1 ಓವರಲ್ಲಿ ಬೆನ್ನತ್ತಿ ಗೆಲ್ಲಬೇಕು. 15 ಓವರಲ್ಲಿ 171 ರನ್‌ ಗುರಿ ನೀಡಿದರೆ 13.1 ಓವರಲ್ಲಿ, 10 ಓವರ್‌ ಪಂದ್ಯದಲ್ಲಿ 131 ರನ್‌ ಗುರಿ ಸಿಕ್ಕರೆ 8.1 ಓವರಲ್ಲಿ ಗೆಲ್ಲಬೇಕು. ಇನ್ನು, 5 ಓವರ್‌ ಪಂದ್ಯ ನಡೆದು ಚೆನ್ನೈ 81 ರನ್‌ ಕಲೆಹಾಕಿದರೆ ಆ ಮೊತ್ತವನ್ನು ಆರ್‌ಸಿಬಿ 3.1 ಓವರಲ್ಲೇ ಚೇಸ್‌ ಮಾಡಬೇಕು.

ಮೇ 18ಕ್ಕೆ ಸೋಲೇ ಕಂಡಿಲ್ಲ ಆರ್‌ಸಿಬಿ!

ಆರ್‌ಸಿಬಿ ಐಪಿಎಲ್‌ನಲ್ಲಿ ಮೇ 18ರಂದು ಈವರೆಗೂ 4 ಪಂದ್ಯಗಳನ್ನಾಡಿವೆ. 4ರಲ್ಲೂ ತಂಡ ಗೆದ್ದಿರುವುದು ವಿಶೇಷ. ಈ ಪೈಕಿ 2ರಲ್ಲಿ ಚೆನ್ನೈ ವಿರುದ್ಧವೇ ಜಯಗಳಿಸಿದೆ. 2013ರ ಮೇ 18ಕ್ಕೆ ಹಾಗೂ 2014ರ ಮೇ 18ಕ್ಕೆ ಚೆನ್ನೈ, 2016 ಮೇ 18ಕ್ಕೆ ಪಂಜಾಬ್‌, 2023ರ ಮೇ 18ಕ್ಕೆ ಪಂಜಾಬ್‌ ವಿರುದ್ಧ ಗೆಲುವು ಸಾಧಿಸಿದೆ. ಈ ಬಾರಿ ಏನಾಗಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

11ನೇ ಪಂದ್ಯ: ಆರ್‌ಸಿಬಿ-ಚೆನ್ನೈ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11ನೇ ಬಾರಿ ಮುಖಾಮುಖಿಯಾಗುತ್ತಿದೆ. ಈ ವರೆಗಿನ 10 ಪಂದ್ಯಗಳಲ್ಲಿ ಚೆನ್ನೈ 5, ಆರ್‌ಸಿಬಿ 4ರಲ್ಲಿ ಗೆದ್ದಿದ್ದು, 1 ಪಂದ್ಯ ರದ್ದಾಗಿದೆ.

Share this article