ಟ್ರಿನಿಡಾಡ್: ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಆತಿಥೇಯ ವೆಸ್ಟ್‌ಇಂಡೀಸ್ ‘ಸಿ’ ಗುಂಪಿನಿಂದ ಮೊದಲ ತಂಡವಾಗಿ ಸೂಪರ್-8 ಪ್ರವೇಶಿಸಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 2 ಬಾರಿ ಚಾಂಪಿಯನ್ ವಿಂಡೀಸ್ 13 ರನ್ ಗೆಲುವು ಸಾಧಿಸಿತು.
ಸತತ 2ನೇ ಸೋಲು ಕಂಡ ನ್ಯೂಜಿಲೆಂಡ್ ಗುಂಪು ಹಂತದಲ್ಲೇ ಹೊರಬೀಳುವುದು ಬಹುತೇಕ ಖಚಿತವಾಗಿದ್ದು, ಆಡಿರುವ 2 ಪಂದ್ಯದಲ್ಲೂ ಗೆದ್ದಿರುವ ಅಫ್ಘಾನಿಸ್ತಾನ ಸೂಪರ್-8ಗೇರುವ ಸಾಧ್ಯತೆ ಹೆಚ್ಚಿದೆ.
ಕಿವೀಸ್ ಕಳಪೆ ನೆಟ್ ರನ್‌ರೇಟ್(-2.425) ಹೊಂದಿದ್ದು, ಇನ್ನುಳಿದ 2 ಪಂದ್ಯದಲ್ಲಿ ಗೆದ್ದರೂ ಅಫ್ಘಾನಿಸ್ತಾನ(+5.225)ವನ್ನು ಹಿಂದಿಕ್ಕಿ ಮುಂದಿನ ಹಂತಕ್ಕೇರುವ ಸಾಧ್ಯತೆ ಕಡಿಮೆ.ಗುರುವಾರದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಿಂಡೀಸ್, ಶೆರ್ಫಾನೆ ರುಥರ್‌ಫೋರ್ಡ್(39 ಎಸೆತಗಳಲ್ಲಿ ಔಟಾಗದೆ 68) ಸಾಹಸದಿಂದಾಗಿ 9 ವಿಕೆಟ್‌ಗೆ 149 ರನ್ ಕಲೆಹಾಕಿತು. 12.3 ಓವರ್‌ಗಳಲ್ಲಿ 76 ರನ್‌ಗೆ 7 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ರುಥರ್‌ಫೋರ್ಡ್ ಆಪತ್ಬಾಂಧವರಾಗಿ ಮೂಡಿಬಂದರು. ಟ್ರೆಂಟ್ ಬೌಲ್ಟ್ 4 ಓವರಲ್ಲಿ 16ಕ್ಕೆ 3, ಸೌಥಿ ಹಾಗೂ ಫರ್ಗ್ಯೂಸನ್ ತಲಾ 2 ವಿಕೆಟ್ ಕಿತ್ತರು.ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕಿವೀಸ್ 9 ವಿಕೆಟ್‌ಗೆ 136 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಗ್ಲೆನ್ ಫಿಲಿಪ್ಸ್(40), ಸ್ಯಾಂಟ್ನರ್(21) ಹೋರಾಟ ತಂಡದ ಕೈ ಹಿಡಿಯಲಿಲ್ಲ. ಅಲ್ಜಾರಿ ಜೋಸೆಫ್ 19 ರನ್‌ಗೆ 4, ಗುಡಾಕೇಶ್ ಮೋಟಿ 25 ರನ್‌ಗೆ 3 ವಿಕೆಟ್ ಕಿತ್ತರು.ಸ್ಕೋರ್: ವೆಸ್ಟ್‌ಇಂಡೀಸ್ 20 ಓವರಲ್ಲಿ 149/9 (ರುಥರ್‌ಫೋರ್ಡ್ 68*, ಬೌಲ್ಟ್ 3-16, ಸೌಥಿ 2-21), ನ್ಯೂಜಿಲೆಂಡ್ 20 ಓವರಲ್ಲಿ 136/9 (ಫಿಲಿಪ್ಸ್ 40, ಆ್ಯಲೆನ್ 26, ಅಲ್ಜಾರಿ 4-19, ಗುಡಾಕೇಶ್ 3-25)
ಪಂದ್ಯಶ್ರೇಷ್ಠ: ಶೆರ್ಫಾನೆ ರುಥರ್‌ಫೋರ್ಡ್