ಲಾರ್ಡ್ಸ್‌ನಲ್ಲಿ ತಾಳ್ಮೆಯ ‘ಟೆಸ್ಟ್‌’ ಗೆದ್ದ ಇಂಗ್ಲೆಂಡ್‌!

KannadaprabhaNewsNetwork |  
Published : Jul 15, 2025, 01:45 AM ISTUpdated : Jul 15, 2025, 10:15 AM IST
ಟೆಸ್ಟ್‌ | Kannada Prabha

ಸಾರಾಂಶ

ಟೆಸ್ಟ್‌ ಕ್ರಿಕೆಟ್‌ ಇನ್ನೂ ಜೀವಂತವಾಗಿದೆ. ಕ್ರಿಕೆಟ್‌ನ ಸಂಪ್ರದಾಯಿಕ ಮಾದರಿ ಈಗಲೂ ಜನಪ್ರಿಯತೆ ಕಾಪಾಡಿಕೊಂಡಿದೆ ಎನ್ನುವುದಕ್ಕೆ ಭಾರತ ಹಾಗೂ ಇಂಗ್ಲೆಂಡ್ ನಡುವೆ ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲಿ ಸೋಮವಾರ ಮುಕ್ತಾಯಗೊಂಡ 3ನೇ ಟೆಸ್ಟ್‌ ಪಂದ್ಯವೇ ಸಾಕ್ಷಿ. ‘

 ಲಂಡನ್‌: ಟೆಸ್ಟ್‌ ಕ್ರಿಕೆಟ್‌ ಇನ್ನೂ ಜೀವಂತವಾಗಿದೆ. ಕ್ರಿಕೆಟ್‌ನ ಸಂಪ್ರದಾಯಿಕ ಮಾದರಿ ಈಗಲೂ ಜನಪ್ರಿಯತೆ ಕಾಪಾಡಿಕೊಂಡಿದೆ ಎನ್ನುವುದಕ್ಕೆ ಭಾರತ ಹಾಗೂ ಇಂಗ್ಲೆಂಡ್ ನಡುವೆ ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲಿ ಸೋಮವಾರ ಮುಕ್ತಾಯಗೊಂಡ 3ನೇ ಟೆಸ್ಟ್‌ ಪಂದ್ಯವೇ ಸಾಕ್ಷಿ. ‘ಬಾಜ್‌ಬಾಲ್‌’ ಯುಗದಲ್ಲೂ ತಾಳ್ಮೆಯ ಆಟಕ್ಕೆ ಬೆಲೆ ಇದೆ ಎನ್ನುವುದು ಇಂಗ್ಲೆಂಡ್‌ಗೆ ಮನವರಿಕೆಯಾದರೆ, ಎಷ್ಟೇ ತಾಳ್ಮೆಯಿಂದ ಆಡಿದರೂ ಅದೃಷ್ಟ ಕೈಹಿಡಿಯದಿದ್ದರೆ ಗೆಲುವು ಒಲಿಯುವುದಿಲ್ಲ ಎನ್ನುವ ಪಾಠ ಭಾರತಕ್ಕೆ ಸಿಕ್ಕಿದೆ. 3ನೇ ಟೆಸ್ಟ್‌ನಲ್ಲಿ 22 ರನ್‌ಗಳ ರೋಚಕ ಗೆಲುವು ಸಾಧಿಸಿದ ಆತಿಥೇಯ ತಂಡ 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಪಡೆದಿದೆ.

ಮೊದಲೆರಡು ಟೆಸ್ಟ್‌ಗಳಂತೆ ಈ ಪಂದ್ಯದಲ್ಲೂ ಕೊನೆ ದಿನದ ಕ್ಲೈಮ್ಯಾಕ್ಸ್‌ ಬಾಕಿ ಇತ್ತು. ಸೋಮವಾರ ಭಾರತಕ್ಕೆ ಗೆಲ್ಲಲು 135 ರನ್‌, ಇಂಗ್ಲೆಂಡ್‌ಗೆ ಗೆಲ್ಲಲು 6 ವಿಕೆಟ್‌ ಬೇಕಿತ್ತು. ದಿನದಾಟದ ಆರಂಭದಲ್ಲೇ ಇಂಗ್ಲೆಂಡ್‌ ಪ್ರಮುಖ 3 ವಿಕೆಟ್‌ಗಳನ್ನು ಉರುಳಿಸಿ ಭೋಜನ ವಿರಾಮಕ್ಕೂ ಮೊದಲೇ ಗೆಲ್ಲುವ ವಿಶ್ವಾಸದಲ್ಲಿತ್ತು.

ಈ ಸರಣಿಯಲ್ಲಿ ಇಂಗ್ಲೆಂಡನ್ನು ಬಲವಾಗಿ ಕಾಡುತ್ತಿರುವ ರಿಷಭ್‌ ಪಂತ್‌ (09)ರನ್ನು ಬೌಲ್ಡ್‌ ಮಾಡಿದ ಜೋಫ್ರಾ ಆರ್ಚರ್‌, ತಂಡ ಪಂದ್ಯ ಗೆದ್ದಷ್ಟೇ ಸಂಭ್ರಮಿಸುವಂತೆ ಮಾಡಿದರು. ಕೆ.ಎಲ್‌.ರಾಹುಲ್‌ (39)ರ ವಿಕೆಟ್‌ ಆತಿಥೇಯರ ಗೆಲುವಿನ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಿತು. ವಾಷಿಂಗ್ಟನ್‌ ಸುಂದರ್‌ (0) ಔಟಾಗುತ್ತಿದ್ದಂತೆ ಭಾರತದ ಇನ್ನಿಂಗ್ಸ್‌ ಕೊನೆಗೊಳ್ಳುವ ಸಮಯ ಬಂದಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಬಾಲಂಗೋಚಿಗಳನ್ನು ಜೊತೆಯಲ್ಲಿರಿಸಿಕೊಂಡು ರವೀಂದ್ರ ಜಡೇಜಾ ತೋರಿದ ಹೋರಾಟ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

8ನೇ ವಿಕೆಟ್‌ಗೆ ನಿತೀಶ್‌ ರೆಡ್ಡಿ ಜೊತೆ ಜಡೇಜಾ 30 ರನ್‌ ಜೊತೆಯಾಟವಾಡಿದರು. ನಿತೀಶ್‌ 13 ರನ್‌ ಗಳಿಸಿ ಔಟಾದಾಗ ತಂಡದ ಮೊತ್ತ 112ಕ್ಕೆ 8. ದಿನದಾಟದ ಮೊದಲ ಅವಧಿಯಲ್ಲಿ ಭಾರತ 21.5 ಓವರಲ್ಲಿ 54 ರನ್‌ಗೆ 4 ವಿಕೆಟ್‌ ಕಳೆದುಕೊಂಡಿತು.

ಆನಂತರ ಶುರುವಾಯಿತು ಭಾರತದ ಹೋರಾಟ. ಒಂದೆಡೆ ಜಡೇಜಾ ಒಂದೊಂದೇ ರನ್‌ ಸೇರಿಸುತ್ತಾ, ತಂಡವನ್ನು ಗುರಿಯತ್ತ ಕೊಂಡೊಯ್ದರೆ ಜಸ್‌ಪ್ರೀತ್‌ ಬೂಮ್ರಾ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿ ಜಡೇಜಾಗೆ ಉತ್ತಮ ಬೆಂಬಲ ಒದಗಿಸಿದರು.

ಇವರಿಬ್ಬರ ನಡುವೆ 9ನೇ ವಿಕೆಟ್‌ಗೆ 35 ರನ್‌ ಜೊತೆಯಾಟ ಮೂಡಿಬಂತು. ಪಂದ್ಯ ಗೆಲ್ಲಬಹುದು ಎನ್ನುವ ಆತ್ಮವಿಶ್ವಾಸ ಭಾರತದ ಡ್ರೆಸ್ಸಿಂಗ್‌ ರೂಂನಲ್ಲಿ ಹೆಚ್ಚುತ್ತಿರುವ ಸಮಯದಲ್ಲಿ ಬೂಮ್ರಾ ಪುಲ್‌ಶಾಟ್‌ಗೆ ಯತ್ನಿಸಿ ವಿಕೆಟ್‌ ಕಳೆದುಕೊಂಡರು. 54 ಎಸೆತ ಎದುರಿಸಿ 5 ರನ್‌ ಗಳಿಸಿದ್ದ ಬೂಮ್ರಾ ತಾಳ್ಮೆ ಕಳೆದುಕೊಂಡಿದ್ದು ಭಾರತಕ್ಕೆ ದುಬಾರಿಯಾಯಿತು. 9ನೇ ವಿಕೆಟ್‌ ಪತನದ ಬಳಿಕವೂ ಭಾರತದ ಹೋರಾಟ ನಿಲ್ಲಲಿಲ್ಲ.

ಮೊಹಮದ್‌ ಸಿರಾಜ್‌ ಜೊತೆಗೂಡಿ ಜಡೇಜಾ ತಂಡವನ್ನು ಜಯದತ್ತ ಕೊಂಡೊಯ್ಯುವ ಪ್ರಯತ್ನ ನಡೆಸಿದರು. ಕೊನೆ ವಿಕೆಟ್‌ ಉಳಿದಿದ್ದರಿಂದ ಚಹಾ ವಿರಾಮವನ್ನು ಅರ್ಧಗಂಟೆ ಮುಂದೂಡಲಾಯಿತು. ಆದರೆ, ಭಾರತ ವಿಕೆಟ್‌ ಕಾಪಾಡಿಕೊಂಡು ವಿರಾಮಕ್ಕೆ ತೆರಳಿತು. ದಿನದಾಟದ 2ನೇ ಅವಧಿಯಲ್ಲಿ 31.3 ಓವರ್‌ ಬ್ಯಾಟ್‌ ಮಾಡಿ 1 ವಿಕೆಟ್‌ ನಷ್ಟಕ್ಕೆ 51 ರನ್‌ ಗಳಿಸಿತು.

ಸಿರಾಜ್‌ ಕ್ರೀಸ್‌ಗಿಳಿದಾಗ ಭಾರತಕ್ಕೆ ಗೆಲ್ಲಲು 46 ರನ್‌ ಬೇಕಿತ್ತು. 10ನೇ ವಿಕೆಟ್‌ಗೆ ಜಡೇಜಾ ಜೊತೆ 13.3 ಓವರ್‌ ಬ್ಯಾಟ್‌ ಮಾಡಿದ ಸಿರಾಜ್‌ 23 ರನ್‌ ಸೇರಿಸಿದರು. ಆದರೆ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

ಎಡಗೈನ ಮಧ್ಯದ ಬೆರಳು ಮುರಿದ ಕಾರಣ ದಿನದಾಟದ ಬಹುತೇಕ ಸಮಯ ಮೈದಾನದಿಂದ ಹೊರಗುಳಿದಿದ್ದ ಶೋಯೆಬ್‌ ಬಶೀರ್‌ರನ್ನು ಹೊಸ ಚೆಂಡು ಪಡೆಯುವ ಮುನ್ನ ಓವರ್‌ಗಳು ಬೇಗ ಮುಗಿಯಲಿ ಎನ್ನುವ ಉದ್ದೇಶದಿಂದ ಮೈದಾನಕ್ಕಿಳಿಸಿ ಬೌಲ್‌ ಮಾಡಿಸಲಾಯಿತು.

74.5 ಓವರ್‌ಗಳ ಇನ್ನಿಂಗ್ಸ್‌ನಲ್ಲಿ ಕೇವಲ 5.5 ಓವರ್‌ ಬೌಲ್ ಮಾಡಿದ ಬಶೀರ್‌, ಬಹುಮುಖ್ಯ ಎನಿಸಿದ ಕೊನೆಯ ವಿಕೆಟ್‌ ಪಡೆದರು. ಅವರ ಓವರ್‌ಪಿಚ್ಡ್‌ ಎಸೆತವನ್ನು ಸಿರಾಜ್‌, ತಮ್ಮ ಬ್ಯಾಟ್‌ನಲ್ಲಿ ಆತ್ಮವಿಶ್ವಾಸದೊಂದಿಗೆ ತಡೆದು ನಿಲ್ಲಿಸಲು ಯತ್ನಿಸಿದರು. ಆದರೆ ಚೆಂಡು ಸಿರಾಜ್‌ಗೆ ಬ್ಯಾಟ್‌ಗೆ ಬಡಿದು ನಿಧಾನವಾಗಿ ಸ್ಟಂಪ್ಸ್‌ನತ್ತ ಸಾಗಿ ಬೇಲ್ಸ್‌ ಉರುಳಿಸಿತು. ಇಂಗ್ಲೆಂಡ್‌ ಆಟಗಾರರ ಸಂಭ್ರಮದಿಂದ ಕುಣಿದು ಕುಪ್ಪಳಿಸಿದರೆ, ಸಿರಾಜ್‌ ಕುಸಿದು ಕಣ್ಣೀರಾದರು. 181 ಎಸೆತ ಎದುರಿಸಿ 4 ಬೌಂಡರಿ, 1 ಸಿಕ್ಸರ್‌ನೊಂದಿಗೆ ಔಟಾಗದೆ 61 ರನ್‌ ಗಳಿಸಿದ ಜಡೇಜಾ, ಮತ್ತೊಂದು ಬದಿಯಲ್ಲಿ ಮೌನಕ್ಕೆ ಶರಣಾದರು. ಅಲ್ಲಿಗೆ 3ನೇ ಟೆಸ್ಟ್‌ಗೆ ತೆರೆ ಬಿತ್ತು.ಸ್ಕೋರ್‌: ಇಂಗ್ಲೆಂಡ್‌ 387 ಹಾಗೂ 192, ಭಾರತ 387 ಹಾಗೂ 170 (ಜಡೇಜಾ 61*, ರಾಹುಲ್‌ 39*, ಸ್ಟೋಕ್ಸ್‌ 3-48, ಆರ್ಚರ್‌ 3-55) ಪಂದ್ಯಶ್ರೇಷ್ಠ: ಬೆನ್‌ ಸ್ಟೋಕ್ಸ್‌

ಜು.23ರಿಂದ 4ನೇ ಟೆಸ್ಟ್‌

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 4ನೇ ಟೆಸ್ಟ್‌ ಜು.23ರಿಂದ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ರೋಚಕ ಪಂದ್ಯಕ್ಕೆ ಸಾಕ್ಷಿಯಾದ ಉಭಯ ತಂಡಗಳಿಗೆ ಒಂದು ವಾರ ವಿಶ್ರಾಂತಿ ಸಿಗಲಿದೆ.

PREV
Read more Articles on

Latest Stories

ಐಸಿಸಿ ವಾರ್ಷಿಕ ಸಭೆ: 2 ದರ್ಜೆ ಟೆಸ್ಟ್, ಟಿ20 ವಿಶ್ವಕಪ್‌ ತಂಡಗಳ ಸಂಖ್ಯೆ ಹೆಚ್ಚಳ ಶೀಘ್ರ ನಿರ್ಧಾರ
ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾ ಪಾರುಪತ್ಯ: ಅಗ್ರ-10ರಲ್ಲಿ ಐವರು ಆಸೀಸ್‌ ಬೌಲರ್ಸ್‌!
ಭಾರತೀಯ ಫುಟ್ಬಾಲ್‌ ವ್ಯವಸ್ಥೆ ಆತಂಕ, ಭಯ ಹುಟ್ಟಿಸುವಂತಿದೆ: ದಿಗ್ಗಜ ಸುನಿಲ್‌ ಚೆಟ್ರಿ ಬೇಸರ