ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ‘ಚಾಂಪಿಯನ್‌’ ಆಟ!

Published : Mar 29, 2026, 10:41 AM IST
RCB-vs-SRH

ಸಾರಾಂಶ

ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಶನಿವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 19ನೇ  ಆವೃತ್ತಿಯ ಐಪಿಎಲ್‌ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ 6 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿ, ಟೂರ್ನಿಯಲ್ಲಿ ಶುಭಾರಂಭ ಮಾಡಿತು.

 ಬೆಂಗಳೂರು :  ‘ಚಾಂಪಿಯನ್‌’ ಆರ್‌ಸಿಬಿ 2026ರ ಐಪಿಎಲ್‌ ಅನ್ನು ಚಾಂಪಿಯನ್‌ ತಂಡದಂತೆಯೇ ಆರಂಭಿಸಿದೆ. ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಶನಿವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 19ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ 6 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿ, ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಮೊದಲು ಬ್ಯಾಟ್‌ ಮಾಡಿದ ಸನ್‌ರೈಸರ್ಸ್‌ 20 ಓವರಲ್ಲಿ 9 ವಿಕೆಟ್‌ಗೆ 201 ರನ್‌ ಗಳಿಸಿದರೆ, ಅಬ್ಬರಿಸಿ ಬೊಬ್ಬಿರಿದ ಆರ್‌ಸಿಬಿ ಕೇವಲ 15.4 ಓವರಲ್ಲಿ 4 ವಿಕೆಟ್‌ ನಷ್ಟಕ್ಕೆ 203 ರನ್‌ ಚಚ್ಚಿ ಮೊದಲ ಪಂದ್ಯದಲ್ಲೇ ಉತ್ತಮ ನೆಟ್‌ ರನ್‌ರೇಟ್‌ ಕಲೆಹಾಕಿತು.

ತನ್ನ ತವರು ಮೈದಾನದಲ್ಲಿ ಆರ್‌ಸಿಬಿಗೆ ಭರ್ಜರಿ ಸ್ವಾಗತ ದೊರೆಯಿತು. ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಆರ್‌ಸಿಬಿ ನಾಯಕ ರಜತ್‌ ಪಾಟೀದಾರ್‌, ಬೆಂಗಳೂರು ಅಭಿಮಾನಿಗಳಿಗೆ ಧನ್ಯವಾದ ಹೇಳಿ, ನಿಮಗೆ ನಿರಾಸೆ ಮಾಡುವುದಿಲ್ಲ ಎಂದು ಭರವಸೆ ನೀಡಿದರು.

ಡಫಿ ಮಾರಕ ದಾಳಿ:

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಬ್ಯಾಟರ್‌ಗಳ ಸ್ವರ್ಗವಾದರೂ, 10 ತಿಂಗಳ ಬಳಿಕ ಇಲ್ಲಿ ಪಂದ್ಯ ನಡೆಯುತ್ತಿದ್ದ ಕಾರಣ, ಪಿಚ್‌ ಹೇಗೆ ವರ್ತಿಸಲಿದೆ ಎನ್ನುವ ಕುತೂಹಲವಿತ್ತು. ಸನ್‌ರೈಸರ್ಸ್‌ನ ಪವರ್‌-ಪ್ಲೇ ನೋಡಿದಾಗ ಪಿಚ್‌ ಬೌಲರ್‌ಗಳಿಗೆ ಸಹಕಾರ ನೀಡುತ್ತಿದೆ ಎಂದು ಭಾಸವಾಯಿತು. ಐಪಿಎಲ್‌ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ ವೇಗಿ ಜೇಕಬ್‌ ಡಫಿ, ಸತತ 4 ಓವರ್ ಬೌಲ್‌ ಮಾಡಿ ಕೇವಲ 22 ರನ್‌ಗೆ 3 ವಿಕೆಟ್‌ ಕಿತ್ತರು. ಪವರ್‌-ಪ್ಲೇ ಬಳಿಕ ಇಶಾನ್‌ ಕಿಶನ್‌ ಅಬ್ಬರಿಸಲು ಶುರು ಮಾಡಿದ ಮೇಲೆ ಗೊತ್ತಾಗಿದ್ದು, ಪಿಚ್ ಈಗಲೂ ಬ್ಯಾಟರ್‌ ಸ್ನೇಹಿಯಾಗೇ ಇದೆ, ಡಫಿ ಅವರ ಅಮೋಘ ಬೌಲಿಂಗ್‌ ಎದುರು ಸನ್‌ರೈಸರ್ಸ್‌ ತಿಣುಕಾಡಿತು ಎಂದು.

27 ಎಸೆತದಲ್ಲಿ ಅರ್ಧಶತಕ ಪೂರೈಸಿದ ಕಿಶನ್‌ 38 ಎಸೆತದಲ್ಲಿ 8 ಬೌಂಡರಿ, 5 ಸಿಕ್ಸರ್‌ನೊಂದಿಗೆ 80 ರನ್‌ ಸಿಡಿಸಿದರು. ಕೊನೆಯಲ್ಲಿ ಅನಿಕೇತ್‌ ವರ್ಮಾ 18 ಎಸೆತದಲ್ಲಿ 43 ರನ್‌ ಚಚ್ಚಿ, ತಂಡದ ಮೊತ್ತವನ್ನು 200 ರನ್‌ ದಾಟಿಸಿದರು.

ಪವರ್‌-ಪ್ಲೇನಲ್ಲಿ ಮಾರಕ ದಾಳಿ ಹಾಗೂ ಅತ್ಯಮೋಘ ಕ್ಷೇತ್ರರಕ್ಷಣೆಯಿಂದ ಆರ್‌ಸಿಬಿ, ಸನ್‌ರೈಸರ್ಸ್‌ ಬೃಹತ್‌ ಮೊತ್ತ ದಾಖಲಿಸುವುದನ್ನು ತಡೆಯಿತು.

ಆರ್‌ಸಿಬಿ ಆರ್ಭಟ:

202 ರನ್‌ ಗುರಿ ದೊಡ್ಡದಾಗಿ ಕಂಡರೂ, ಚಿನ್ನಸ್ವಾಮಿ ಪಿಚ್‌ನಲ್ಲಿ ಇದು ಸಾಧಾರಣ ಗುರಿ. ಆದರೂ ಆರಂಭದಲ್ಲೇ ಫಿಲ್‌ ಸಾಲ್ಟ್‌ ಔಟಾದ ಕಾರಣ ಆರ್‌ಸಿಬಿಗೆ ಹಿನ್ನಡೆಯಾಗಬಹುದು ಎನಿಸಿತು. ಆದರೆ ಇಂಪ್ಯಾಕ್ಟ್‌ ಆಟಗಾರ ದೇವದತ್‌ ಪಡಿಕ್ಕಲ್‌ ಅದಕ್ಕೆ ಅವಕಾಶ ನೀಡಲಿಲ್ಲ. ಕೇವಲ 21 ಎಸೆತದಲ್ಲಿ ಅರ್ಧಶತಕ ಸಿಡಿಸಿದ ಪಡಿಕ್ಕಲ್‌, 26 ಬಾಲಲ್ಲಿ 7 ಬೌಂಡರಿ, 4 ಸಿಕ್ಸರ್‌ನೊಂದಿಗೆ 61 ರನ್‌ ಸಿಡಿಸಿ ಔಟಾದರು. 2ನೇ ವಿಕೆಟ್‌ಗೆ ಕೊಹ್ಲಿ ಹಾಗೂ ಪಡಿಕ್ಕಲ್‌ ನಡುವೆ 101 ರನ್‌ ಜೊತೆಯಾಟ ಮೂಡಿಬಂತು.

ಪಡಿಕ್ಕಲ್‌ ಔಟಾದ ಬಳಿಕ ಕೆಲ ಅಮೋಘ ಹೊಡೆತಗಳ ಮೂಲಕ ಕೊಹ್ಲಿ ರಂಜಿಸಿದರೆ, ನಾಯಕ ರಜತ್‌ ಪಾಟೀದರ್‌ರ ಸಿಡಿಲಬ್ಬರಕ್ಕೆ ಸನ್‌ರೈಸರ್ಸ್‌ ಬಳಿ ಉತ್ತರಗಳೇ ಇರಲಿಲ್ಲ. 12 ಎಸೆತದಲ್ಲಿ 31 ರನ್‌ ಪೇರಿಸಿದ ರಜತ್‌, ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದರು.

ಕೊಹ್ಲಿ ಆಟ ನೋಡಿದರೆ, ಬಹಳ ದಿನಗಳ ಬಳಿಕ ಅವರು ಮೈದಾನಕ್ಕಿಳಿದಂತೆ ಕಾಣಲೇ ಇಲ್ಲ. 38 ಎಸೆತದಲ್ಲಿ 5 ಬೌಂಡರಿ, 5 ಸಿಕ್ಸರ್‌ನೊಂದಿಗೆ 69 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಸನ್‌ರೈಸರ್ಸ್‌ 18 ಇತರೆ ರನ್‌ ನೀಡಿತು. ಹಲವು ಕ್ಯಾಚ್‌ಗಳನ್ನೂ ಕೈಚೆಲ್ಲಿ ಆರ್‌ಸಿಬಿಗೆ ಅನುಕೂಲ ಮಾಡಿಕೊಟ್ಟಿತು.

ಸ್ಕೋರ್‌: ಸನ್‌ರೈಸರ್ಸ್‌ 20 ಓವರಲ್ಲಿ 201/9 (ಕಿಶನ್‌ 80, ಅನಿಕೇತ್‌ 43*, ಡಫಿ 3-22, ಶೆಫರ್ಡ್‌ 3-54), ಆರ್‌ಸಿಬಿ 15.4 ಓವರಲ್ಲಿ 203/4 (ಕೊಹ್ಲಿ 69*, ಪಡಿಕ್ಕಲ್‌ 61, ಪಾಟೀದಾರ್‌ 31, ಪೇನ್‌ 2-35 )

ಟರ್ನಿಂಗ್‌ ಪಾಯಿಂಟ್‌

ಸನ್‌ರೈಸರ್ಸ್‌ ಇನ್ನಿಂಗ್ಸ್‌ ವೇಳೆ ಕ್ಲಾಸೆನ್‌ ಹಾಗೂ ಕಿಶನ್‌ರನ್ನು ನಿರ್ಣಾಯಕ ಹಂತದಲ್ಲಿ ಔಟ್‌ ಮಾಡಿದ್ದು ಆರ್‌ಸಿಬಿಗೆ ನೆರವಾಯಿತಾದರೂ, ಬ್ಯಾಟಿಂಗ್‌ ವೇಳೆ ಸಾಲ್ಟ್‌ ವಿಕೆಟ್‌ ಪತನಗೊಂಡ ಬಳಿಕ ಪಡಿಕ್ಕಲ್‌ರ ಸ್ಫೋಟಕ ಆಟ ಆರ್‌ಸಿಬಿ ಮೇಲೆ ಒತ್ತಡ ಬೀಳದಂತೆ ನೋಡಿಕೊಂಡಿತು. ನಾಯಕ ಪಾಟೀದಾರ್‌ರ ಇನ್ನಿಂಗ್ಸ್‌ ಕೂಡ ಗೆಲುವನ್ನು ಸುಲಭಗೊಳಿಸಿತು.

64ನೇ ಫಿಫ್ಟಿ

ಐಪಿಎಲ್‌ನಲ್ಲಿ ವಿರಾಟ್‌ ಕೊಹ್ಲಿ 64ನೇ ಅರ್ಧಶತಕ ದಾಖಲಿಸಿದರು.

6ನೇ ಸ್ಥಾನ

ವಿರಾಟ್‌ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ ಶೋಯೆಬ್ ಮಲಿಕ್‌ರನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೇರಿದ್ದಾರೆ.

01ನೇ ಬಾರಿ

ಸನ್‌ರೈಸರ್ಸ್‌ ವಿರುದ್ಧ ಈ ಹಿಂದಿನ ಮುಖಾಮುಖಿಗಳಲ್ಲಿ ಆರ್‌ಸಿಬಿ 190+ ರನ್‌ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿರಲಿಲ್ಲ. ಶನಿವಾರ ಸುಲಭವಾಗಿ ಚೇಸ್‌ ಮಾಡಿ ಜಯಿಸಿತು.

ಕಾಲ್ತುಳಿತದಲ್ಲಿ ಮೃತಪಟ್ಟವರ

ನೆನಪಿನಲ್ಲಿ ಮೌನಾಚರಣೆ

ಪಂದ್ಯ ಆರಂಭಕ್ಕೂ ಮುನ್ನ ಕಳೆದ ವರ್ಷ ಕಾಲ್ತುಳಿತದಲ್ಲಿ ಮೃತಪಟ್ಟ 11 ಮಂದಿ ಅಭಿಮಾನಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ರೀಡಾಂಗಣದಲ್ಲಿದ್ದ ಎಲ್ಲರೂ 1 ನಿಮಿಷ ಮೌನಾಚರಣೆ ಮಾಡಿದರು.

14ನೇ ಪಂದ್ಯ

ಆರ್‌ಸಿಬಿ ಐಪಿಎಲ್‌ ಹಾಗೂ ಡಬ್ಲ್ಯುಪಿಎಲ್‌ ಸೇರಿ ತವರಿನಲ್ಲಿ 14 ಪಂದ್ಯಗಳಲ್ಲಿ ಟಾಸ್‌ ಗೆದ್ದಿದ್ದು ಇದೇ ಮೊದಲು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಆರ್‌ಸಿಬಿ vs ಸನ್‌ರೈಸರ್ಸ್‌ ಬಿಗ್‌ ಫೈಟ್‌
ಇಂದಿನಿಂದ ಬಹುನಿರೀಕ್ಷಿತ 19ನೇ ಆವೃತ್ತಿಯ ಐಪಿಎಲ್‌ ಶುರು