ಭಾರತದ ವಿಶ್ವ ಟೆಸ್ಟ್‌ ಫೈನಲ್‌ ಕನಸು ಭಗ್ನ: ಆಸ್ಟ್ರೇಲಿಯಾ ವಿರುದ್ಧ 10 ವರ್ಷ ಬಳಿಕ ಟೆಸ್ಟ್‌ ಸರಣಿ ಸೋಲು

KannadaprabhaNewsNetwork | Updated : Jan 06 2025, 03:56 AM IST

ಸಾರಾಂಶ

ಕ್ಲೈಮ್ಯಾಕ್ಸ್‌ನಲ್ಲಿ ಕಾಣದ ರೋಚಕತೆ. ಸಿಡ್ನಿ ಟೆಸ್ಟ್‌ನಲ್ಲಿ ಭಾರತಕ್ಕೆ 6 ವಿಕೆಟ್‌ ಸೋಲು. 5 ಪಂದ್ಯಗಳ ಸರಣಿ 3-1ರಲ್ಲಿ ಆಸೀಸ್‌ ಮಡಿಲಿಗೆ. ಟೀಂ ಇಂಡಿಯಾ 2ನೇ ಇನ್ನಿಂಗ್ಸಲ್ಲಿ 157ಕ್ಕೆ ಆಲೌಟ್‌. ಆಸೀಸ್‌ಗೆ 162 ರನ್‌ ಗುರಿ, ಸುಲಭ ಜಯ. ಬೂಮ್ರಾ ಆಡದೆ ಭಾರತಕ್ಕೆ ಹಿನ್ನಡೆ

ಸಿಡ್ನಿ: ಸಿಡ್ನಿ ಟೆಸ್ಟ್‌ನ ಕ್ಲೈಮ್ಯಾಕ್ಸ್‌ನಲ್ಲಿ ನಿರೀಕ್ಷಿತ ರೋಚಕತೆ ಕಂಡುಬರಲಿಲ್ಲ. ಆಸ್ಟ್ರೇಲಿಯಾದ ಪ್ರಾಬಲ್ಯಕ್ಕೆ ಸಾಕ್ಷಿಯಾದ ಕೊನೆ ಟೆಸ್ಟ್‌ನ 3ನೇ ದಿನದಾಟ ಭಾರತವನ್ನು ಯಾವುದೇ ಹೋರಾಟವಿಲ್ಲದೆ ಸೋಲುವಂತೆ ಮಾಡಿತು. ನಿರ್ಣಾಯಕ ಟೆಸ್ಟ್‌ನಲ್ಲಿ 6 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿದ ಆತಿಥೇಯ ಆಸೀಸ್‌, 5 ಪಂದ್ಯಗಳ ಟೆಸ್ಟ್‌ ಸರಣಿಯನ್ನು 3-1 ಅಂತರದಲ್ಲಿ ಕೈ ವಶಪಡಿಸಿಕೊಂಡಿತು. ಜೊತೆಗೆ 2023-25ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪ್ರವೇಶಿಸಿ, ಭಾರತವನ್ನು ರೇಸ್‌ನಿಂದಲೇ ಹೊರದಬ್ಬಿತು.

2ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 141 ರನ್‌ ಗಳಿಸಿ, ಒಟ್ಟಾರೆ 145 ರನ್‌ ಮುನ್ನಡೆ ಪಡೆದಿದ್ದ ಭಾರತ 3ನೇ ದಿನವಾದ ಭಾನುವಾರ ಮತ್ತಷ್ಟು ರನ್‌ ಕಲೆಹಾಕುವ ಯೋಜನೆಯಲ್ಲಿತ್ತು. ಹೀಗಾದರೆ ಆಸೀಸ್‌ಗೆ ಸ್ಪರ್ಧಾತ್ಮಕ ಗುರಿ ಲಭಿಸಿ, ಪಂದ್ಯ ರೋಚಕ ಅಂತ್ಯ ಕಾಣುವ ಸಾಧ್ಯತೆಯಿತ್ತು. ಆದರೆ ಯೋಜನೆ ಉಲ್ಟಾ ಹೊಡೆಯಿತು. ಶನಿವಾರದ ಮೊತ್ತಕ್ಕೆ ಕೇವಲ 16 ರನ್‌ ಸೇರಿಸಿದ್ದೇ ಭಾರತದ ಸಾಧನೆ. ದಿನದ 7.5 ಓವರ್‌ಗಳಲ್ಲೇ ಭಾರತವನ್ನು ಆಲೌಟ್‌ ಮಾಡಲು ಆಸೀಸ್‌ ಯಶಸ್ವಿಯಾಯಿತು.

ರವೀಂದ್ರ ಜಡೇಜಾ(13), ವಾಷಿಂಗ್ಟನ್‌ ಸುಂದರ್(12) ಹೆಚ್ಚೇನೂ ಮ್ಯಾಜಿಕ್‌ ಮಾಡಲು ಸಾಧ್ಯವಾಗಲಿಲ್ಲ. ಬೆನ್ನು ನೋವಿನಿಂದ ಬಳಲುತ್ತಿದ್ದರೂ ಕ್ರೀಸ್‌ಗಿಳಿದ ನಾಯಕ ಬೂಮ್ರಾ ರನ್‌ ಖಾತೆ ತೆರೆಯಲಿಲ್ಲ. ತಂಡ 157 ರನ್‌ಗೆ ಸರ್ವಪನತ ಕಂಡಿತು. ಅವಕಾಶ ಸಿಕ್ಕಾಗಲೆಲ್ಲಾ ಭಾರತವನ್ನು ಕಾಡುತ್ತಿದ್ದ ಸ್ಕಾಟ್‌ ಬೋಲಂಡ್‌ 6 ವಿಕೆಟ್‌ಗಳನ್ನು ಕಬಳಿಸಿದರು.

ಸುಲಭ ಗೆಲುವು: 162 ರನ್‌ ಸಿಡ್ನಿ ಪಿಚ್‌ನಲ್ಲಿ ಸ್ಪರ್ಧಾತ್ಮಕ ಮೊತ್ತವೇ ಆಗಿತ್ತು. ಆದರೆ ಬೂಮ್ರಾ ಬೌಲ್‌ ಮಾಡುವುದಿಲ್ಲ ಎಂದು ಅರಿತಿದ್ದ ಆಸೀಸ್‌ ತುಂಬು ಆತ್ಮವಿಶ್ವಾಸದಿಂದಲೇ ಚೇಸಿಂಗ್‌ಗೆ ಇಳಿಯಿತು. ಮೊಹಮದ್‌ ಸಿರಾಜ್‌ ಹಾಗೂ ಪ್ರಸಿದ್ಧ್‌ ಕೃಷ್ಣರ ಮೊದಲೆರಡು ಓವರ್‌ಗಳಲ್ಲೇ 12 ಇತರೆ ಸೇರಿ 26 ರನ್‌ ದೋಚಿದ ಆಸೀಸ್‌ ಬಳಿಕ ಮತ್ತಷ್ಟು ಹುಮ್ಮಸ್ಸಿನಿಂದ ಬ್ಯಾಟ್‌ ಬೀಸಿತು. ಇನ್ನಿಂಗ್ಸ್‌ನ 4ನೇ ಓವರ್‌ನಲ್ಲಿ ಸ್ಯಾಮ್‌ ಕಾನ್‌ಸ್ಟಾಸ್‌(22)ರನ್ನು ಔಟ್‌ ಮಾಡಿದ ಪ್ರಸಿದ್ಧ್‌, ಬಳಿಕ 8ನೇ ಓವರ್‌ನಲ್ಲಿ ಮಾರ್ನಸ್‌ ಲಬುಶೇನ್‌(6), 10ನೇ ಓವರ್‌ನಲ್ಲಿ ಸ್ಟೀವ್‌ ಸ್ಮಿತ್‌(4)ರನ್ನು ಪೆವಿಲಿಯನ್‌ಗೆ ಅಟ್ಟಿದರು. ಆದರೆ ತಂಡದ ಸ್ಕೋರ್‌ ಅದಾಗಲೇ 58 ಆಗಿತ್ತು.

 ಉಸ್ಮಾನ್‌ ಖವಾಜ 45 ಎಸೆತಗಳಲ್ಲಿ 41 ರನ್‌ ಸಿಡಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಬಳಿಕ ಟ್ರ್ಯಾವಿಸ್‌ ಹೆಡ್‌(ಔಟಾಗದೆ 34) ಹಾಗೂ ಬ್ಯೂ ವೆಬ್‌ಸ್ಟೆರ್‌(ಔಟಾಗದೆ 39) ತಂಡವನ್ನು ಜಯದ ದಡ ತಲುಪಿಸಿದರು.ಬೂಮ್ರಾ ಅನುಪಸ್ಥಿತಿಯಲ್ಲಿ ಆರಂಭಿಕ ಸ್ಪೆಲ್‌ನಲ್ಲೇ ಸಿರಾಜ್‌ ಸತತ 11, ಪ್ರಸಿದ್ಧ್‌ 10 ಓವರ್ ಎಸೆದರು. ಇನ್ನಿಂಗ್ಸ್‌ನ ಒಟ್ಟು 27 ಓವರ್‌ಗಳಲ್ಲಿ ಇವರಿಬ್ಬರೇ 24 ಓವರ್‌ ಎಸೆದರು. 

ಸಿರಾಜ್‌ 12 ಓವರಲ್ಲಿ 69 ರನ್‌ ಬಿಟ್ಟುಕೊಟ್ಟು 1 ವಿಕೆಟ್‌ ಕಿತ್ತರೆ, ಪ್ರಸಿದ್ಧ್‌ 12 ಓವರಲ್ಲಿ 65 ರನ್‌ಗೆ 3 ವಿಕೆಟ್‌ ಪಡೆದರು. ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ 185 ರನ್‌ ಗಳಿಸಿದ್ದ ಭಾರತ, ಆಸ್ಟ್ರೇಲಿಯಾವನ್ನು 181 ರನ್‌ಗೆ ನಿಯಂತ್ರಿಸಿ 4 ರನ್‌ ಮುನ್ನಡೆ ಪಡೆದಿತ್ತು.ಸ್ಕೋರ್‌: ಭಾರತ ಮೊದಲ ಇನ್ನಿಂಗ್ಸ್‌ 185/10 ಮತ್ತು 2ನೇ ಇನ್ನಿಂಗ್ಸ್‌ 157/10 (ಜಡೇಜಾ 13, ವಾಷಿಂಗ್ಟನ್‌ 12, ಬೋಲಂಡ್‌ 6-45), ಆಸ್ಟ್ರೇಲಿಯಾ 181/10 ಮತ್ತು 2ನೇ ಇನ್ನಿಂಗ್ಸ್‌ 162/4 (ಖವಾಜ 41, ವೆಬ್‌ಸ್ಟೆರ್‌ ಔಟಾಗದೆ 39, ಹೆಡ್‌ ಔಟಾಗದೆ 34, ಪ್ರಸಿದ್ಧ್‌ 3-65, ಸಿರಾಜ್‌ 1-69)

ಪಂದ್ಯಶ್ರೇಷ್ಠ: ಸ್ಕಾಟ್‌ ಬೋಲಂಡ್‌(ಒಟ್ಟು 10 ವಿಕೆಟ್‌)ಸರಣಿಶ್ರೇಷ್ಠ: ಜಸ್‌ಪ್ರೀತ್‌ ಬೂಮ್ರಾ(ಒಟ್ಟು 42 ರನ್‌, 32 ವಿಕೆಟ್‌)

ದಶಕದ ಬಳಿಕ ಭಾರತ ವಿರುದ್ಧ ಆಸೀಸ್‌ಗೆ ಸರಣಿ

ಆಸ್ಟ್ರೇಲಿಯಾ ತಂಡ ದಶಕದ ಬಳಿಕ ಭಾರತ ವಿರುದ್ಧ ಟೆಸ್ಟ್‌ ಸರಣಿ ತನ್ನದಾಗಿಸಿಕೊಂಡಿತು. 2014-15ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಸರಣಿಯಲ್ಲಿ ಆಸೀಸ್‌ 2-0 ಗೆಲುವು ಸಾಧಿಸಿತ್ತು. ಬಳಿಕ ನಾಲ್ಕು ಸರಣಿಗಳಲ್ಲೂ ಭಾರತ ತಲಾ 2-1ರಲ್ಲಿ ಜಯಭೇರಿ ಬಾರಿಸಿತ್ತು.

ಬಾರ್ಡರ್‌-ಗವಾಸ್ಕರ್‌ ಟ್ರೋಫಿ 6ನೇ ಬಾರಿ ಗೆದ್ದ ಆಸ್ಟ್ರೇಲಿಯಾ

ಬಾರ್ಡರ್‌-ಗವಾಸ್ಕರ್‌ ಟ್ರೋಫಿಯಲ್ಲಿ ಆಸ್ಟ್ರೇಲಿಯಾ 6ನೇ ಬಾರಿ ಸರಣಿ ಗೆಲುವು ತನ್ನದಾಗಿಸಿಕೊಂಡಿತು. 1996-97ರಲ್ಲಿ ಇತ್ತಂಡಗಳ ನಡುವಿನ ಸರಣಿಗೆ ಬಾರ್ಡರ್‌-ಗವಾಸ್ಕರ್‌ ಎಂದು ಹೆಸರಿಡಲಾಗಿತ್ತು. ಆ ಸರಣಿ ಸೇರಿದಂತೆ ಒಟ್ಟು 17 ಸರಣಿಗಳ ಪೈಕಿ ಭಾರತ 10 ಬಾರಿ ಗೆಲುವು ಸಾಧಿಸಿದೆ. 2003-04 ಸರಣಿ 1-1ರಿಂದ ಡ್ರಾಗೊಂಡಿತ್ತು.

1978 ಬಳಿಕ ಸತತ 2 ಸರಣಿಯಲ್ಲಿ ತಲಾ 3 ಪಂದ್ಯ ಸೋತ ಭಾರತ

ಭಾರತ 1978ರ ಬಳಿಕ ಇದೇ ಮೊದಲ ಬಾರಿ ಸತತವಾಗಿ 2 ಸರಣಿಗಳಲ್ಲಿ ತಲಾ 3 ಪಂದ್ಯಗಳನ್ನು ಸೋತಿದೆ. ಇತ್ತೀಚೆಗಷ್ಟೇ ನ್ಯೂಜಿಲೆಂಡ್‌ ವಿರುದ್ಧ ಭಾರತ 0-3 ಸೋಲು ಕಂಡಿತ್ತು. ಅದಕ್ಕೂ ಮುನ್ನ 1967-77ರಲ್ಲಿ ಇಂಗ್ಲೆಂಡ್‌ ವಿರುದ್ಧ ತವರಲ್ಲಿ 1-3, 1977-78ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರದೇ ತವರಿನಲ್ಲಿ 2-3ರಿಂದ ಸೋಲಿಗೆ ತುತ್ತಾಗಿತ್ತು.

07ನೇ ಬಾರಿ: ಭಾರತ ಈ ಸರಣಿಯಲ್ಲಿ 7 ಬಾರಿ ಇನ್ನಿಂಗ್ಸ್‌ನಲ್ಲಿ 200ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟಾಗಿದೆ. 1959ರ ಇಂಗ್ಲೆಂಡ್‌ ಸರಣಿಯಲ್ಲೂ ಭಾರತ ಈ ರೀತಿ 7 ಸಲ ಆಲೌಟಾಗಿತ್ತು.

ಜೇಬಲ್ಲಿ ಸ್ಯಾಂಡ್‌ ಪೇಪರ್‌ ಇಲ್ಲ: ಆಸೀಸ್‌ ಫ್ಯಾನ್ಸ್‌ಗೆ ಕೊಹ್ಲಿ ತೀಕ್ಷ್ಣ ತಿರುಗೇಟು!

ಸಿಡ್ನಿ ಟೆಸ್ಟ್‌ನ 3ನೇ ದಿನ ಆಸ್ಟ್ರೇಲಿಯಾ ಅಭಿಮಾನಿಗಳನ್ನು ವಿರಾಟ್‌ ಕೊಹ್ಲಿ ತಮ್ಮದೇ ಶೈಲಿಯಲ್ಲಿ ಕಿಚಾಯಿಸಿದರು. 2018ರ ದ.ಆಫ್ರಿಕಾ ವಿರುದ್ಧ ಟೆಸ್ಟ್‌ ವೇಳೆ ಆಸ್ಟ್ರೇಲಿಯಾ ಆಟಗಾರರು ಜೇಬಲ್ಲಿ ಸ್ಯಾಂಡ್‌ ಪೇಪರ್‌ ಇಟ್ಟು ಚೆಂಡು ವಿರೂಪಗೊಳಿಸಿದ್ದರು. ಭಾನುವಾರ ಫೀಲ್ಡಿಂಗ್‌ ವೇಳೆ ಕೊಹ್ಲಿ ಆಸ್ಟ್ರೇಲಿಯಾ ಅಭಿಮಾನಿಗಳನ್ನು ಗುರಿಯಾಗಿಸಿ, ತಮ್ಮ ಜೇಬಲ್ಲಿ ಸ್ಯಾಂಡ್‌ ಪೇಪರ್‌ ಇಲ್ಲ ಎಂದು ತೋರಿಸಿ, ಭಾರತೀಯರು ಚೆಂಡು ವಿರೂಪಗೊಳಿಸುವುದಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದರು. ಇದರ ವಿಡಿಯೋ ಭಾರಿ ವೈರಲ್‌ ಆಗಿದೆ.

Share this article