ಅಮಾನತು ತೆರವಿಗೆ ಸಂಜಯ್‌ ಸಿಂಗ್‌ ಸೆಟ್ಟಿಂಗ್‌: ಸಾಕ್ಷಿ, ಬಜರಂಗ್‌ ಆರೋಪ!

KannadaprabhaNewsNetwork |  
Published : Feb 15, 2024, 01:16 AM ISTUpdated : Feb 15, 2024, 08:37 AM IST
ಬಜರಂಗ್‌, ಸಾಕ್ಷಿ ಮಲಿಕ್‌ | Kannada Prabha

ಸಾರಾಂಶ

ಭಾರತೀಯ ಕುಸ್ತಿ ಫೆಡರೇಷನ್‌(ಡಬ್ಲ್ಯುಎಫ್‌ಐ) ಪದಾಧಿಕಾರಿಗಳು ಹಾಗೂ ದೇಶದ ಅಗ್ರ ಕುಸ್ತಿಪಟುಗಳ ನಡುವಿನ ತಿಕ್ಕಾಟ ನಿಲ್ಲುವ ಲಕ್ಷಣ ಕಂಡುಬರುತ್ತಿಲ್ಲ.

ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್‌(ಡಬ್ಲ್ಯುಎಫ್‌ಐ) ಪದಾಧಿಕಾರಿಗಳು ಹಾಗೂ ದೇಶದ ಅಗ್ರ ಕುಸ್ತಿಪಟುಗಳ ನಡುವಿನ ತಿಕ್ಕಾಟ ನಿಲ್ಲುವ ಲಕ್ಷಣ ಕಂಡುಬರುತ್ತಿಲ್ಲ. 

ಪ್ರತಿಭಟನೆ, ಪ್ರಶಸ್ತಿ ವಾಪಸ್‌ನ ಕೋಲಾಹಲಗಳ ಬಳಿಕ ತಣ್ಣಗಾಗಿದ್ದ ಒಲಿಂಪಿಕ್ಸ್‌ ಸಾಧಕರಾದ ಸಾಕ್ಷಿ ಮಲಿಕ್‌, ಬಜರಂಗ್‌ ಪೂನಿಯಾ ಮತ್ತೆ ಡಬ್ಲ್ಯುಎಫ್‌ಐ ವಿರುದ್ಧ ಕಿಡಿಕಾರಿದ್ದು, ವಿಶ್ವ ಕುಸ್ತಿ ಸಂಸ್ಥೆ ಜೊತೆ ಸಂಜಯ್‌ ಸಿಂಗ್‌ ‘ಸೆಟ್ಟಿಂಗ್‌’ ಮಾಡಿಕೊಂಡು ಡಬ್ಲ್ಯುಎಫ್‌ಐ ಮೇಲಿನ ನಿಷೇಧ ತೆರವುಗೊಳಿಸುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ವಿಡಿಯೋ ಸಂದೇಶ ರವಾನಿಸಿರುವ ಸಾಕ್ಷಿ, ‘ಅಮಾನತು ಹಿಂಪಡೆಯಲು ಸಂಜಯ್‌ ಸಿಂಗ್‌ ಮೋಸದ ಮಾರ್ಗ ಅನುಸರಿಸಿದ್ದಾರೆ. 

ಬ್ರಿಜ್ ಭೂಷಣ್ ಮತ್ತು ಸಂಜಯ್ ಸಿಂಗ್ ಅವರು ಕಾನೂನಿಗಿಂತ ಮೇಲು ಎಂದು ತೋರಿಸುತ್ತಿದ್ದಾರೆ. ನಾನು ಕುಸ್ತಿಯಿಂದ ನಿವೃತ್ತಿ ಆಗಿರಬಹುದು.

ಆದರೆ ಬ್ರಿಜ್‌ಭೂ಼ಷಣ್‌ ಆಪ್ತರು ಸಮಿತಿಯನ್ನು ನಿಯಂತ್ರಣಕ್ಕೆ ಪಡೆಯುವುದು ಮತ್ತು ಕುಸ್ತಿಪಟುಗಳಿಗೆ ಕಿರುಕುಳ ನೀಡುವುದು ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.

ಚುನಾವಣೆ ನಡೆಸದ ಕಾರಣಕ್ಕೆ ಕಳೆದ ಆಗಸ್ಟ್‌ನಲ್ಲಿ ಜಾಗತಿಕ ಕುಸ್ತಿ ಸಂಸ್ಥೆಯು ಡಬ್ಲ್ಯುಎಫ್‌ಐ ಮೇಲೆ ನಿಷೇಧ ಹೇರಿತ್ತು. ಮಂಗಳವಾರ ನಿಷೇಧ ತೆರವುಗೊಳಿಸಿದೆ. 

ಈ ನಡುವೆ ಡಿಸೆಂಬರ್‌ನಲ್ಲಿ ಸಂಸ್ಥೆಗೆ ಚುನಾವಣೆ ನಡೆದು ಸಂಜಯ್‌ ಸಿಂಗ್‌ ನೇತೃತ್ವದ ಸಮಿತಿ ಅಧಿಕಾರಿಕ್ಕೇರಿತ್ತು. ಆದರೆ ನಿಯಮಗಳ ಉಲ್ಲಂಘನೆ ಕಾರಣಕ್ಕೆ ಸಮಿತಿಯನ್ನು ಕ್ರೀಡಾ ಸಚಿವಾಲಯ ಅಮಾನತುಗೊಳಿಸಿ, ಸಂಸ್ಥೆಯ ನಿಯಂತ್ರಣಕ್ಕೆ ಸ್ವತಂತ್ರ ಸಮಿತಿಯನ್ನು ನೇಮಿಸಿತ್ತು.

ರೆಸ್ಲರ್ಸ್‌ನಿಂದ ಮತ್ತೆ ಹೋರಾಟದ ಎಚ್ಚರಿಕೆ
ಡಬ್ಲ್ಯುಎಫ್‌ಐನ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ರ ಕುಟುಂಬಸ್ಥರು, ಆಪ್ತರು, ಸಂಜಯ್‌ ಸಿಂಗ್‌ರನ್ನು ಆಡಳಿತದಿಂದ ದೂರವಿಡಬೇಕು ಎಂದು ಮತ್ತೆ ಆಗ್ರಹಿಸಿರುವ ಕುಸ್ತಿಪಟುಗಳು, ಅಲ್ಲದಿದ್ದರೆ ಮತ್ತೆ ಹೋರಾಟ ಆರಂಭಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. 

‘ಬ್ರಿಜ್‌ ಆಪ್ತರು ಡಬ್ಲ್ಯುಎಫ್‌ನಲ್ಲಿ ಇರಬಾರದು. ಈ ಬಗ್ಗೆ ಸರ್ಕಾರ ನಮಗೆ ಭರವಸೆ ನೀಡಬೇಕು. ಅಲ್ಲದಿದ್ದರೆ ಪ್ರತಿಭಟನೆ ಮತ್ತೆ ಆರಂಭಿಸುವ ಬಗ್ಗೆ 2-4 ದಿನದಲ್ಲಿ ನಿರ್ಧಾರ ಪ್ರಕಟಿಸುತ್ತೇವೆ’ ಎಂದು ಸಾಕ್ಷಿ ತಿಳಿಸಿದ್ದಾರೆ. 

‘ಬ್ರಿಜ್‌ಭೂಷಣ್‌ ಪುತ್ರ ಉತ್ತರ ಪ್ರದೇಶ ಕುಸ್ತಿ ಸಂಸ್ಥೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬ್ರಿಜ್ ಆಪ್ತರು ಕುಸ್ತಿಯಿಂದ ದೂರ ಇರುವುದಾಗಿ ತಿಳಿಸಿದ್ದರೂ ಸರ್ಕಾರ ಮಾತು ತಪ್ಪಿದೆ’ ಎಂದು ಬಜರಂಗ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಷೇಧ ತೆರವಿಗೆ ಯಾಕೆ ಕುಸ್ತಿಪಟುಗಳ ವಿರೋಧ?
ಡಬ್ಲ್ಯುಎಫ್‌ಐ ಮೇಲಿನ ನಿಷೇಧ ತೆರವಿಗೆ ಕುಸ್ತಿಪಟುಗಳು ವಿರೋಧಿಸುವುದಕ್ಕೆ ಕಾರಣವಿದೆ. ಕುಸ್ತಿಯ ಜಾಗತಿಕ ಸಮಿತಿಯು ಡಬ್ಲ್ಯುಎಫ್‌ಐನ್ನು ನಿಷೇಧಿಸಿದ ಬಳಿಕ ಸಂಸ್ಥೆಯನ್ನು ಭಾರತೀಯ ಒಲಿಂಪಿಕ್‌ ಸಂಸ್ಥೆ ನೇಮಿಸಿದ್ದ ಸ್ವತಂತ್ರ ಸಮಿತಿ ನಿಯಂತ್ರಿಸುತ್ತಿತ್ತು. 

ಆದರೆ ನಿಷೇಧ ತೆರವುಗೊಂಡಿದ್ದರಿಂದ ಇನ್ನು ಸಂಸ್ಥೆಯ ಅಧಿಕಾರ ಸಂಜಯ್‌ ಸಿಂಗ್ ನೇತೃತ್ವದ ಸಮಿತಿಗೆ ಸಿಗಲಿದೆ. ಅಂದರೆ ಸ್ವತಂತ್ರ ಸಮಿತಿ ಇನ್ನು ಲೆಕ್ಕಕ್ಕಿಲ್ಲ.

ಜಾಗತಿಕ ಸಮಿತಿಯೇ ನಿಷೇಧ ತೆರವುಗೊಳಿಸಿದ್ದರಿಂದ ಕ್ರೀಡಾ ಸಚಿವಾಲಯ ಹೇರಿರುವ ಅಮಾನತಿಗೆ ಬೆಲೆಯಿಲ್ಲ. ಟ್ರಯಲ್ಸ್‌, ಜಾಗತಿಕ ಟೂರ್ನಿಗೆ ಕುಸ್ತಿಪಟುಗಳ ಆಯ್ಕೆಗೆ ಸಂಬಂಧಿಸಿದಂತೆ ಸಂಜಯ್‌ ಸಿಂಗ್‌ರ ಸಮಿತಿ ಕೈಗೊಳ್ಳುವ ನಿರ್ಧಾರಗಳನ್ನೇ ಜಾಗತಿಕ ಸಮಿತಿ ಪರಿಗಣಿಸಲಿದೆ. 

ಇದರಿಂದ ತಮಗೂ ಅನ್ಯಾಯವಾಗಬಹುದು ಎಂಬುದು ಪ್ರತಿಭಟನಾ ನಿರತ ಕುಸ್ತಿಪಟುಗಳ ಭಯ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!