ಆರ್‌ಸಿಬಿ ತಂಡ ಖರೀದಿಗೆ 6 ಸಂಸ್ಥೆಗಳ ಆಸಕ್ತಿ!

Published : Oct 18, 2025, 10:34 AM IST
RCB Instagram

ಸಾರಾಂಶ

ಆರ್‌ಸಿಬಿ ಖರೀದಿಗೆ ಸಿದ್ಧ ಎನ್ನುವ ಅರ್ಥದಲ್ಲಿ ಮಾಡಿದ್ದ ಟ್ವೀಟ್‌ ಭಾರೀ ವೈರಲ್‌ ಆಗಿತ್ತು. ಇದೀಗ, ಆರ್‌ಸಿಬಿ ಖರೀದಿಗೆ ಬರೀ ಪೂನಾವಾಲಾ ಮಾತ್ರವಲ್ಲ, ಅವರನ್ನೂ ಸೇರಿ ಒಟ್ಟು 6 ಸಂಸ್ಥೆಗಳು ಆಸಕ್ತಿ ತೋರಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

 ನವದೆಹಲಿ: ಹಾಲಿ ಐಪಿಎಲ್‌ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ ಮಾರಾಟಕ್ಕಿದೆ ಎನ್ನುವ ಸುದ್ದಿ ಈಗಾಗಲೇ ಎಲ್ಲೆಡೆ ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಇತ್ತೀಚೆಗೆ ಸೀರಮ್‌ ಇನ್‌ಸ್ಟಿಟ್ಯೂಟ್‌ನ ಅದಾರ್‌ ಪೂನಾವಾಲಾ ಒಳ್ಳೆಯ ಮೊತ್ತಕ್ಕೆ ಸಿಕ್ಕರೆ ಆರ್‌ಸಿಬಿ ಖರೀದಿಗೆ ಸಿದ್ಧ ಎನ್ನುವ ಅರ್ಥದಲ್ಲಿ ಮಾಡಿದ್ದ ಟ್ವೀಟ್‌ ಭಾರೀ ವೈರಲ್‌ ಆಗಿತ್ತು. ಇದೀಗ, ಆರ್‌ಸಿಬಿ ಖರೀದಿಗೆ ಬರೀ ಪೂನಾವಾಲಾ ಮಾತ್ರವಲ್ಲ, ಅವರನ್ನೂ ಸೇರಿ ಒಟ್ಟು 6 ಸಂಸ್ಥೆಗಳು ಆಸಕ್ತಿ ತೋರಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಶೇ.50ರಷ್ಟು ಪಾಲುದಾರಿಕೆ ಹೊಂದಿರುವ ಜೆಎಸ್‌ಡಬ್ಲ್ಯು ಸಮೂಹದ ಪಾರ್ಥ್‌ ಜಿಂದಾಲ್‌, ಅದಾನಿ ಸಮೂಹ, ದಿಲ್ಲಿಯ ಬಹುಕೋಟಿ ವ್ಯಾಪಾರೋದ್ಯಮಿ, ಅಮೆರಿಕದ ಎರಡು ಖಾಸಗಿ ಈಕ್ವಿಟಿ ಕಂಪನಿಗಳು ಆರ್‌ಸಿಬಿಯನ್ನು ಖರೀದಿಸಲು ಸಿದ್ಧವಿರುವುದಾಗಿ ಸುದ್ದಿಯಾಗಿದೆ.

ಡಿಯಾಜಿಯೋದಲ್ಲಿ ಭಿನ್ನಮತ?: ಆರ್‌ಸಿಬಿ ತಂಡದ ಮಾಲಿಕತ್ವ ಹೊಂದಿರುವ ಡಿಯಾಜಿಯೋ ಸಂಸ್ಥೆಯ ಬ್ರಿಟನ್‌ ಕಚೇರಿ ತಂಡವನ್ನು ಮಾರಾಟ ಮಾಡಲು ಆಸಕ್ತಿ ಹೊಂದಿದೆ. ವ್ಯಾಪಾರದಲ್ಲಿ ತನ್ನ ಸಲಹೆ, ಮಾರ್ಗದರ್ಶನ ನೀಡಲು ಸಿಟಿ ಬ್ಯಾಂಕನ್ನು ನೇಮಕ ಮಾಡಿಕೊಂಡಿದೆ ಎನ್ನಲಾಗಿದೆ. ವಿಶ್ವದ ಹಲವು ದುಬಾರಿ ಮದ್ಯ ಬ್ರ್ಯಾಂಡ್‌ಗಳ ಮಾಲಿಕ ಡಿಯಾಜಿಯೋ , ಐಪಿಎಲ್‌ ತಂಡದ ಮಾಲಿಕತ್ವವನ್ನು ಉಳಿಸಿಕೊಳ್ಳುವ ಬಗ್ಗೆ ಆಸಕ್ತಿ ಹೊಂದಿಲ್ಲ ಎನ್ನಲಾಗುತ್ತಿದೆ. ಆದರೆ ಸಂಸ್ಥೆಯ ಭಾರತೀಯ ಕಚೇರಿಯು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಆರ್‌ಸಿಬಿ ತಂಡವನ್ನು ತನ್ನಲ್ಲೇ ಉಳಿಸಿಕೊಳ್ಳಲು ಇಚ್ಛಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪೂನಾವಾಲಾ, ಅದಾನಿಗೆ ಈ ಬಾರಿ ಲಕ್‌?: ಅದಾರ್‌ ಪೂನಾವಾಲಾರ ತಂದೆ ಸೈರಸ್‌ 2010ರಲ್ಲಿ ಐಪಿಎಲ್‌ ತಂಡಗಳನ್ನು 12ಕ್ಕೆ ಹೆಚ್ಚಳ ಮಾಡುವ ಸಂದರ್ಭದಲ್ಲಿ ಟೆಂಡರ್‌ ಪ್ರತಿ ಪಡೆದಿದ್ದರು. ಆದರೆ ಪುಣೆ, ಕೊಚ್ಚಿ ತಂಡಗಳು ಕ್ರಮವಾಗಿ ಸಹರಾ ಹಾಗೂ ರೆಂಡೆಜ್‌ವೊಸ್‌ ಸ್ಪೋರ್ಟ್ಸ್‌ ಪಾಲಾಗಿದ್ದವು. ಇನ್ನು, 2022ರಲ್ಲಿ ಅಹಮದಾಬಾದ್ ಫ್ರಾಂಚೈಸಿಯು ಸಣ್ಣ ಅಂತರದಲ್ಲಿ ಅದಾನಿ ಕೈತಪ್ಪಿತ್ತು. ಈಗೇನಾದರೂ ಆರ್‌ಸಿಬಿ ತಂಡ ಖದೀರಿಗೆ ಸಿಕ್ಕರೆ ಈ ಇಬ್ಬರು ಪೈಪೋಟಿಗೆ ಬೀಳುವ ಸಾಧ್ಯತೆ ಇದೆ.

ಇನ್ನು, ಒಂದು ವೇಳೆ ಜೆಎಸ್‌ಡಬ್ಲ್ಯು ಆರ್‌ಸಿಬಿ ಮಾಲಿಕರಾಗಲು ಇಚ್ಛಿಸಿದರೆ ಡೆಲ್ಲಿ ತಂಡದಲ್ಲಿರುವ ಪಾಲುದಾರಿಕೆಯನ್ನು ಬೇರೊಬ್ಬರಿಗೆ ಮಾರಾಟ ಮಾಡಬೇಕಿದೆ.

ತಂಡ ಮಾರಾಟಕ್ಕೆ 2 ಬಿಲಿಯನ್‌

ಡಾಲರ್‌ ಕೇಳುತ್ತಿರುವ ಆರ್‌ಸಿಬಿ? 

ಆರ್‌ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೋ ಸಂಸ್ಥೆಯು 2 ಬಿಲಿಯನ್‌ ಅಮೆರಿಕನ್‌ ಡಾಲರ್‌ (ಅಂದಾಜು 17600 ಕೋಟಿ ರು.) ಕೇಳುತ್ತಿದೆ ಎಂದು ವರದಿಯಾಗಿದೆ. ಇಷ್ಟು ದೊಡ್ಡ ಮೊತ್ತ ನೀಡಿ ಫ್ರಾಂಚೈಸಿಯನ್ನು ಖರೀದಿಸುವುದು ಲಾಭದಾಯಕವೇ? ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡಲಿದೆ.

ಐಪಿಎಲ್‌ ತಂಡದ ಒಡೆತನ ಲಾಭಕ್ಕಿಂತ ಪ್ರತಿಷ್ಠೆ ಎನ್ನುವುದು ಒಂದು ಕಡೆಯಾದರೆ, ಮುಂಬರುವ ದಿನಗಳಲ್ಲಿ ಐಪಿಎಲ್‌ ಮಾಧ್ಯಮ ಹಕ್ಕು ಮಾರಾಟದಿಂದ ಎಷ್ಟು ಹಣ ಸಿಗಲಿದೆ ಎನ್ನುವುದರ ಮೇಲೆ ತಂಡ ಖರೀದಿಯ ಮೊತ್ತ ನಿರ್ಧಾರವಾಗಬಹುದು.

ಒಂದು ಲೆಕ್ಕಾಚಾರದ ಪ್ರಕಾರ, ಜಿಯೋ-ಸ್ಟಾರ್‌ ಸಂಸ್ಥೆಗಳು ಒಂದಾಗಿರುವುದರಿಂದ ಮಾಧ್ಯಮ ಪ್ರಸಾರ ಹಕ್ಕು ಮೌಲ್ಯ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಇತ್ತೀಚೆಗೆ ಜಿಯೋಸ್ಟಾರ್‌ ತನ್ನ ಚಂದಾದಾರರ ಸಂಖ್ಯೆ 50 ಕೋಟಿ ದಾಟಿದೆ ಎಂದು ಹೇಳಿಕೊಂಡಿತ್ತು. ಅದರ ಪ್ರಕಾರ, ಐಪಿಎಲ್‌ ವೀಕ್ಷಣೆಗೆ ಪ್ರತಿ ತಿಂಗಳಿಗೆ ₹100 ಶುಲ್ಕವಿಟ್ಟರೂ ತಿಂಗಳಿಗೆ ಅಂದಾಜು 5000 ಕೋಟಿ ರು. ಆದಾಯ ಸಿಗಲಿದೆ. ಐಪಿಎಲ್‌ ಪಂದ್ಯಗಳ ಸಂಖ್ಯೆ 96ಕ್ಕೆ ಹೆಚ್ಚಳವಾಗುವ ನಿರೀಕ್ಷೆ ಇರುವ ಕಾರಣ, ಟೂರ್ನಿ ಮಾರ್ಚ್‌ನಿಂದ ಜೂನ್‌ವರೆಗೂ ಒಟ್ಟು 4 ತಿಂಗಳ ಕಾಲ ನಡೆಯಲಿದೆ. ಪ್ರತಿ ತಿಂಗಳಿಗೆ ₹5000 ಕೋಟಿ ಅಂದರೆ 4 ತಿಂಗಳಿಗೆ ₹20000 ಕೋಟಿ. ಜೊತೆಗೆ ಜಾಹೀರಾತಿನಿಂದ ಅಂದಾಜು ₹5000 ಕೋಟಿ ಆದಾಯ ನಿರೀಕ್ಷಿಸಬಹುದು. ಹೀಗಾಗಿ, 2027ರಲ್ಲಿ 5 ವರ್ಷಗಳ ಅವಧಿಗೆ ಮಾಧ್ಯಮ ಪ್ರಸಾರ ಹಕ್ಕು ಮಾರಾಟವಾಗುವಾಗ ಈಗಿರುವ ಮೊತ್ತಕ್ಕಿಂತ ಇನ್ನೂ ದೊಡ್ಡ ಮೊತ್ತ ನಿರೀಕ್ಷಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಮಾಧ್ಯಮ ಪ್ರಸಾರ ಹಕ್ಕಿನಿಂದ ಬರುವ ಒಟ್ಟು ಮೊತ್ತದಲ್ಲಿ ಶೇ.50ರಷ್ಟನ್ನು ಬಿಸಿಸಿಐ ಎಲ್ಲಾ 10 ತಂಡಗಳಿಗೆ ಸಮನಾಗಿ ಹಂಚಲಿದೆ. ಹೀಗಾಗಿ, ಆರ್‌ಸಿಬಿ ಮಾಲಿಕರು ಕೇಳುತ್ತಿರುವ 2 ಬಿಲಿಯನ್‌ ಡಾಲರ್‌ ಸರಿಯಾಗಿದೆ ಎಂದು ವಿಶ್ಲೇಷಣೆ ನಡೆಯುತ್ತಿದೆ.

ಆದರೆ, ಇಷ್ಟು ವರ್ಷ ಆರ್‌ಸಿಬಿ ಕಪ್‌ ಗೆದ್ದಿಲ್ಲ ಎನ್ನುವ ಕಾರಣಕ್ಕೆ ಆ ಪಾಟಿ ಕ್ರೇಜ್‌ ಇತ್ತು. ಈಗ ಕಪ್‌ ಗೆದ್ದಾಯಿತು. ವಿರಾಟ್‌ ಕೊಹ್ಲಿ ಸಹ ನಿವೃತ್ತಿ ಅಂಚಿನಲ್ಲಿದ್ದಾರೆ. ಹೀಗಾಗಿ ಕ್ರೇಜ್‌ ಕಡಿಮೆಯಾಗಲಿದೆ ಎನ್ನುವುದು ಕೆಲವರ ವಾದ. ಇನ್ನು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆದ ಕಾಲ್ತುಳಿತ ಪ್ರಕರಣದಿಂದಾಗಿ ತಂಡಕ್ಕೆ ಬೆಂಗಳೂರಿನಲ್ಲಿ ಕ್ರೀಡಾಂಗಣ ಸಿಗುವ ಬಗ್ಗೆಯೂ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ. ಆರ್‌ಸಿಬಿ ತಂಡವನ್ನು ಡಿಯಾಜಿಯೋ ಸಂಸ್ಥೆ ಮಾರಾಟಕ್ಕಿಟ್ಟರೆ ಈ ಎಲ್ಲಾ ಅಂಶಗಳೂ ಪರಿಗಣನೆಗೆ ಬರಬಹುದು.

PREV
Read more Articles on

Recommended Stories

ಇನ್ನಿಂಗ್ಸ್‌ ಮುನ್ನಡೆಗೆ ರಾಜ್ಯ ಹೋರಾಟ
ನೆಟ್ಟಿಗರ ನಿದ್ದೆಕೆಡಿಸಿದ್ದ ವಿರಾಟ್‌ ಕೊಹ್ಲಿ ಟ್ವೀಟ್‌!