ನ್ಯೂಯಾರ್ಕ್: ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಹೈಲೈಟ್ಸ್ ಎಂಬಂತಿದ್ದ ಸೋಮವಾರದ ದಕ್ಷಿಣ ಆಫ್ರಿಕಾ-ಬಾಂಗ್ಲಾದೇಶ ಪಂದ್ಯ ರೋಚಕವಾಗಿ ಮುಕ್ತಾಯಗೊಂಡಿದ್ದು, 4 ರನ್‌ಗಳ ಗೆಲುವು ಸಾಧಿಸಿದ ಆಫ್ರಿಕಾ ಈ ಬಾರಿ ಟೂರ್ನಿಯಲ್ಲಿ ಸೂಪರ್-8ಗೆ ಅಧಿಕೃತ ಪ್ರವೇಶ ಪಡೆದಿದೆ. ಹ್ಯಾಟ್ರಿಕ್ ಗೆಲುವು ಸಾಧಿಸಿದ ದ.ಆಫ್ರಿಕಾ ‘ಡಿ’ ಗುಂಪಿನಲ್ಲಿ 6 ಅಂಕದೊಂದಿಗೆ ಅಗ್ರಸ್ಥಾನಿಯಾದರೆ, ಬಾಂಗ್ಲಾದೇಶ 2 ಪಂದ್ಯಗಳಲ್ಲಿ ಮೊದಲ ಸೋಲು ಅನುಭವಿಸಿತು.
ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 6 ವಿಕೆಟ್ ಕಳೆದುಕೊಂಡು 113 ರನ್ ಕಲೆಹಾಕಿತು. ಮೊದಲ ಓವರಲ್ಲೇ ರೀಜಾ ಹೆಂಡ್ರಿಕ್ಸ್ ಶೂನ್ಯಕ್ಕೆ ಔಟಾದರೆ, 5ನೇ ಓವರ್ ವೇಳೆ 23 ರನ್ ಆಗುವಷ್ಟರಲ್ಲಿ ತಂಡದ ನಾಲ್ವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಮಾರ್ಕ್‌ರಮ್ 4, ಡಿ ಕಾಕ್ 18 ರನ್ ಗಳಿಸಿದರೆ, ಸ್ಟಬ್ಸ್ ಶೂನ್ಯಕ್ಕೆ ನಿರ್ಗಮಿಸಿದರು.
ಆದರೆ 5ನೇ ವಿಕೆಟ್‌ಗೆ ಕ್ಲಾಸೆನ್(44 ಎಸೆತಗಳಲ್ಲಿ 46) ಹಾಗೂ ಡೇವಿಡ್ ಮಿಲ್ಲರ್(29) 79 ರನ್ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಬಾಂಗ್ಲಾ ಪರ ತಂಜೀದ್ ಹಸನ್ 18ಕ್ಕೆ 3, ತಸ್ಕೀನ್ ಅಹ್ಮದ್ 19ಕ್ಕೆ 2 ವಿಕೆಟ್ ಕಿತ್ತರು.ಸುಲಭ ಗುರಿ ಸಿಕ್ಕರೂ ದ.ಆಫ್ರಿಕಾದ ಮಾರಕ ದಾಳಿಗೆ ತತ್ತರಿಸಿದ ಬಾಂಗ್ಲಾ, 7 ವಿಕೆಟ್‌ಗೆ 109 ರನ್ ಗಳಿಸಿ ಕೊನೆ ಎಸೆತದಲ್ಲಿ ಸೋಲೊಪ್ಪಿಕೊಂಡಿತು.
ಬಾಂಗ್ಲಾ ಕೂಡಾ ದ.ಆಫ್ರಿಕಾದಂತೆಯೇ ಸತತ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಪ್ರಮುಖರು ಕೈಕೊಟ್ಟರೂ ತೌಹೀದ್(37) ಹಾಗೂ ಮಹ್ಮೂದುಲ್ಲಾ(20) ತಂಡವನ್ನು ಕಾಪಾಡಿದರು. ಕೊನೆ ಓವರಲ್ಲಿ 11, ಕೊನೆ ಎಸೆತದಲ್ಲಿ 6 ರನ್ ರನ್ ಬೇಕಿದ್ದಾಗ ಬಾಂಗ್ಲಾ ಪಂದ್ಯ ಕೈಚೆಲ್ಲಿತು. ಕೇಶವ್ 3 ವಿಕೆಟ್ ಕಿತ್ತರು.ಸ್ಕೋರ್: ದ.ಆಫ್ರಿಕಾ 113/6 (ಕ್ಲಾಸೆನ್ 46, ಮಿಲ್ಲರ್ 29, ತಂಜೀಮ್ 3-18), ಬಾಂಗ್ಲಾ 109/7(ತೌಹೀದ್ 37, ಕೇಶವ್ 3-27, ನೋಕಿಯಾ 2-17) ಪಂದ್ಯಶ್ರೇಷ್ಠ: ಹೆನ್ರಿಚ್ ಕ್ಲಾಸೆನ್