ಇಂಗ್ಲೆಂಡ್‌ ಮೇಲೆ ಯಶಸ್ವಿ ‘ಜೈಸ್‌ಬಾಲ್‌’ ದಾಳಿ

KannadaprabhaNewsNetwork | Published : Feb 3, 2024 1:45 AM

ಸಾರಾಂಶ

2ನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಸ್ಪಿನ್ನರ್‌ಗಳನ್ನು ಏಕಾಂಗಿ ಹೋರಾಟದ ಮೂಲಕ ಯಶಸ್ವಿ ಜೈಸ್ವಾಲ್‌ ಹಿಮ್ಮೆಟ್ಟಿಸಿದ್ದು, 257 ಎಸೆತಗಳಲ್ಲಿ ಔಟಾಗದೆ 179 ರನ್‌ ಗಳಿಸಿ ಭಾರತಕ್ಕೆ ಆಸರೆಯಾಗಿದ್ದಾರೆ ಪಾದಾರ್ಪಣಾ ಪಂದ್ಯದಲ್ಲಿ ರಜತ್‌ ಪಾಟೀದಾರ್‌ 32ರನ್‌ ಗಳಿಸಿ ಆಲೌಟಾಗಿದ್ದಾರೆ.

ವಿಶಾಖಪಟ್ಟಣಂ: ಕಳೆದ ಪಂದ್ಯದಲ್ಲಿ ಸೋಲಿನ ಹೊರತಾಗಿಯೂ ಇಂಗ್ಲೆಂಡ್‌ನ ಬಾಜ್‌ಬಾಲ್‌ಗೆ ತಮ್ಮದೇ ‘ಜೈಸ್‌ಬಾಲ್‌’ ಶೈಲಿಯಲ್ಲಿ ಬಿಸಿ ಮುಟ್ಟಿಸಿದ್ದ ಯಶಸ್ವಿ ಜೈಸ್ವಾಲ್‌ ಮತ್ತೊಮ್ಮೆ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಇಂಗ್ಲೆಂಡ್‌ ವಿರುದ್ಧ ಶುಕ್ರವಾರ ಆರಂಭಗೊಂಡ 2ನೇ ಟೆಸ್ಟ್‌ ಪಂದ್ಯದಲ್ಲಿ ಜೈಸ್ವಾಲ್‌ ಅತ್ಯಾಕರ್ಷಕ ಸೆಂಚುರಿ ಸಿಡಿಸಿದ್ದು, ಟೀಂ ಇಂಡಿಯಾದ ಆಪತ್ಬಾಂಧವರಾಗಿ ಮೂಡಿಬಂದಿದ್ದಾರೆ. ಮೊದಲ ದಿನದಂತ್ಯಕ್ಕೆ ರೋಹಿತ್‌ ಶರ್ಮಾ ಬಳಗ 6 ವಿಕೆಟ್ ಕಳೆದುಕೊಂಡು 336 ರನ್‌ ಕಲೆಹಾಕಿದ್ದು, ದೊಡ್ಡ ಮೊತ್ತದ ನಿರೀಕ್ಷೆಯಲ್ಲಿದೆ.ಬ್ಯಾಟರ್‌ ಸ್ನೇಹಿ ಪಿಚ್‌ನಲ್ಲಿ ಟಾಸ್‌ ಗೆದ್ದ ಭಾರತ ನಿರೀಕ್ಷೆಯಂತೆಯೇ ಬ್ಯಾಟಿಂಗ್ ಆಯ್ದುಕೊಂಡಿತು. ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟ ರೋಹಿತ್‌ ಇನ್ನಿಂಗ್ಸ್‌ 14 ರನ್‌ಗೆ ಕೊನೆಗೊಂಡಿತು. ಆಕರ್ಷಕ ಹೊಡೆತಗಳ ಮೂಲಕ ದೊಡ್ಡ ಮೊತ್ತದ ನಿರೀಕ್ಷೆ ಹುಟ್ಟಿಸಿದ್ದ ಯುವ ತಾರೆಗಳಾದ ಶುಭ್‌ಮನ್‌ ಗಿಲ್‌ ಹಾಗೂ ಶ್ರೇಯಸ್‌ ಅಯ್ಯರ್‌ ಈ ಬಾರಿಯೂ ಎಡವಿದರು. 34 ರನ್‌ ಗಳಿಸಿದ್ದ ಶುಭ್‌ಮನ್‌, ಜೇಮ್ಸ್ ಆ್ಯಂಡರ್‌ಸನ್‌ಗೆ 5ನೇ ಬಾರಿ ವಿಕೆಟ್‌ ಒಪ್ಪಿಸಿದರೆ, ಶ್ರೇಯಸ್‌ ಅಯ್ಯರ್‌(27) ಅವರನ್ನು ಟಾಮ್‌ ಹಾರ್ಟ್ಲಿ ಪೆವಿಲಿಯನ್‌ಗೆ ಅಟ್ಟಿದರು.ಕೆ.ಎಲ್‌.ರಾಹುಲ್‌ ಬದಲು ಟೆಸ್ಟ್‌ ಪಾದಾರ್ಪಣೆ ಅವಕಾಶ ಗಿಟ್ಟಿಸಿಕೊಂಡ ರಜತ್‌ ಪಾಟೀದಾರ್‌ ಕೂಡಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. 32 ರನ್‌ ಸಿಡಿಸಿದ್ದ 30 ರಜತ್‌ ರೆಹಾನ್‌ ಅಹ್ಮದ್‌ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. ಬಳಿಕ ಬಂದ ಅಕ್ಷರ್‌ ಪಟೇಲ್‌ರ ಕೊಡುಗೆ ಕೇವಲ 27 ರನ್‌. ವಿಕೆಟ್‌ ಕೀಪರ್‌ ಶ್ರೀಕರ್‌ ಭರತ್‌(17)ಗೂ ಹೆಚ್ಚೇನೂ ಮ್ಯಾಜಿಕ್‌ ಮಾಡಲು ಸಾಧ್ಯವಾಗಲಿಲ್ಲ. ದಿನದ ಕೊನೆಯಲ್ಲಿ ಅನಗತ್ಯ ಹೊಡೆತಕ್ಕೆ ಕೈಹಾಕಿ ಅವರೂ ಪೆವಿಲಿಯನ್‌ಗೆ ಮರಳಿದರು. ಎಲ್ಲಾ ಬ್ಯಾಟರ್‌ಗಳು ಎರಡಂಕಿ ಮೊತ್ತ ಬಾರಿಸಿದರೂ, ಜೈಸ್ವಾಲ್‌ ಹೊರತುಪಡಿಸಿ ಯಾರೊಬ್ಬರ ಗಳಿಕೆಯೂ 40ರ ಗಡಿ ದಾಟಲಿಲ್ಲ.ಜೈಸ್ವಾಲ್‌ ಶೋ: ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಇಂಗ್ಲೆಂಡ್‌ ಸ್ಪಿನ್ನರ್‌ಗಳ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿ ಕ್ರೀಸ್‌ನಲ್ಲಿ ನೆಲೆಯೂರಿದ್ದ ಯಶಸ್ವಿ ಜೈಸ್ವಾಲ್‌ ಮಾತ್ರ. ರಕ್ಷಣಾತ್ಮಕ ಆಟದ ಜೊತೆಗೆ ನಡುನಡುವೆ ಚೆಂಡನ್ನು ಬೌಂಡರಿಗಟ್ಟಿ ಪ್ರೇಕ್ಷಕರ ಮನರಂಜಿಸಿದ ಜೈಸ್ವಾಲ್‌ 257 ಎಸೆತಗಳಲ್ಲಿ ಔಟಾಗದೆ 179 ರನ್‌ ಸಿಡಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 17 ಬೌಂಡರಿ, 5 ಸಿಕ್ಸರ್‌ ಒಳಗೊಂಡಿವೆ. 70ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸುತ್ತಿರುವ ಜೈಸ್ವಾಲ್‌, ಚೊಚ್ಚಲ ದ್ವಿಶತಕದ ಜೊತೆಗೆ ಭಾರತಕ್ಕೆ ಬೃಹತ್‌ ಮೊತ್ತದ ನಿರೀಕ್ಷೆ ಮೂಡಿಸಿದ್ದಾರೆ. ಅಶ್ವಿನ್‌(05) ಕೂಡಾ ಕ್ರೀಸ್‌ ಕಾಯ್ದುಕೊಂಡಿದ್ದಾರೆ.ಯುವ ಸ್ಪಿನ್ನರ್‌ಗಳಾದ ರೆಹಾನ್‌ ಅಹ್ಮದ್‌ ಹಾಗೂ ಶೋಯೆಬ್‌ ಬಶೀರ್‌ ತಲಾ 2, ಆ್ಯಂಡರ್‌ಸನ್‌ ಹಾಗೂ ಹಾರ್ಟ್ಲಿ ತಲಾ 1 ವಿಕೆಟ್‌ ಪಡೆದರು.ಸ್ಕೋರ್‌: ಭಾರತ 93 ಓವರಲ್ಲಿ 336/6(ಮೊದಲ ದಿನದಂತ್ಯಕ್ಕೆ)(ಜೈಸ್ವಾಲ್‌ 179*, ಶುಭ್‌ಮನ್‌ 34, ರಜತ್‌ 32, ರೆಹಾನ್‌ 2-61, ಶೋಯೆಬ್‌ 2-100)-04ನೇ ಬ್ಯಾಟರ್‌ಟೆಸ್ಟ್‌ನ ಮೊದಲ 2 ಶತಕಗಳಲ್ಲಿ 150+ ರನ್‌ ಕಲೆಹಾಕಿದ ಭಾರತದ 4ನೇ ಬ್ಯಾಟರ್‌ ಜೈಸ್ವಾಲ್. ವಿನೋದ್‌ ಕಾಂಬ್ಳಿ, ವಿವಿಎಸ್‌ ಲಕ್ಷ್ಮಣ್‌, ಚೇತೇಶ್ವರ್‌ ಪೂಜಾರಾ ಕೂಡಾ ಈ ಸಾಧನೆ ಮಾಡಿದ್ದಾರೆ.-02ನೇ ಬ್ಯಾಟರ್‌2+ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನಲ್ಲಿ ಟೆಸ್ಟ್‌ನಲ್ಲಿ 2+ ಶತಕ ಬಾರಿಸಿದ ಭಾರತದ 2ನೇ ಆರಂಭಿಕ ಆಟಗಾರ ಜೈಸ್ವಾಲ್‌. ಸುನಿಲ್‌ ಗವಾಸ್ಕರ್‌ 4 ಶತಕ ಬಾರಿಸಿದ್ದಾರೆ.-ತವರಲ್ಲಿ ಮೊದಲ ದಿನ2ನೇ ಗರಿಷ್ಠ ಸ್ಕೋರ್‌ಟೆಸ್ಟ್‌ ಪಂದ್ಯದ ಮೊದಲ ದಿನ ಗರಿಷ್ಠ ವೈಯಕ್ತಿಕ ಮೊತ್ತ ಗಳಿಸಿದ ಭಾರತೀಯರ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್‌ 6ನೇ ಸ್ಥಾನ ಪಡೆದರು. ಇನ್ನು ತವರಿನಲ್ಲಿದು ಭಾರತೀಯರ ಪೈಕಿ 2ನೇ ಗರಿಷ್ಠ. ಸೆಹ್ವಾಗ್‌ ಪಾಕ್‌(2004) ವಿರುದ್ಧ ಮುಲ್ತಾನ್‌ನಲ್ಲಿ 228, ಆಸ್ಟ್ರೇಲಿಯಾ(2003) ವಿರುದ್ಧ ಮೆಲ್ಬರ್ನ್‌ನಲ್ಲಿ 195, ವಾಸಿಂ ಜಾಫರ್‌ ಪಾಕ್‌(2007) ವಿರುದ್ಧ ಕೋಲ್ಕತಾದಲ್ಲಿ 192, ಶಿಖರ್‌ ಧವನ್‌ ಶ್ರೀಲಂಕಾ(2017) ವಿರುದ್ಧ ಗಾಲೆಯಲ್ಲಿ 190, ಸೆಹ್ವಾಗ್‌ ವೆಸ್ಟ್‌ಇಂಡೀಸ್‌(2006) ವಿರುದ್ಧ ಗ್ರಾಸ್‌ ಐಲೆಟ್‌ನಲ್ಲಿ 180 ರನ್‌ ಸಿಡಿಸಿದ್ದರು.-310

ರಜತ್‌ ಈ ಪಂದ್ಯದಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ಅವರು ಭಾರತ ಪರ ಟೆಸ್ಟ್‌ ಆಡಿದ 310ನೇ ಆಟಗಾರ.

Share this article