ಸೂಪರ್‌ - 8ರ ಮೊದಲ ಟೆಸ್ಟ್‌ನಲ್ಲೇ ಭಾರತ ಫೇಲ್‌ !

Published : Feb 23, 2026, 12:08 PM IST
Team India

ಸಾರಾಂಶ

ಕಳೆದ ಬಾರಿ ರನ್ನರ್‌-ಅಪ್‌ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳಿಂದ ಹೀನಾಯವಾಗಿ ಸೋತ ಹಾಲಿ ಚಾಂಪಿಯನ್‌ ಭಾರತ ಬೌಲಿಂಗ್‌, ಬ್ಯಾಟಿಂಗ್‌ ಎರಡರಲ್ಲೂ ವೈಫಲ್ಯ । ಮಿಲ್ಲರ್‌, ಸ್ಟಬ್ಸ್‌, ಬ್ರೆವಿಸ್‌ ಅಬ್ಬರ, ದ.ಆಫ್ರಿಕಾ 187/7 । ಭಾರತ 18.5 ಓವರಲ್ಲಿ 111 ಆಲೌಟ್

 ಅಹಮದಾಬಾದ್‌: ಈ ವರ್ಷ ತವರಿನಲ್ಲಿ ಟಿ20 ವಿಶ್ವಕಪ್‌ ಟ್ರೋಫಿ ಗೆಲ್ಲುವ ಫೇವರಿಟ್‌ ಎಂದೇ ಕರೆಸಿಕೊಳ್ಳುತ್ತಿರುವ ಹಾಲಿ ಚಾಂಪಿಯನ್‌ ಭಾರತ ತಂಡಕ್ಕೆ ಭಾನುವಾರ ಟೂರ್ನಿಯಲ್ಲಿ ನಿಜವಾದ ಸವಾಲು ಎದುರಾಯಿತು. ಆದರೆ ಸೂಪರ್‌-8ರ ಮೊದಲ ಪರೀಕ್ಷೆಯಲ್ಲೇ ಭಾರತ ಹೀನಾಯವಾಗಿ ಸೋತಿದೆ. ಕಳೆದ ಬಾರಿ ರನ್ನರ್‌-ಅಪ್‌ ದಕ್ಷಿಣ ಆಫ್ರಿಕಾ ವಿರುದ್ಧ ಸೂರ್ಯಕುಮಾರ್‌ ಯಾದವ್‌ ಬಳಗ 76 ರನ್‌ಗಳಿಂದ ಪರಾಭವಗೊಂಡಿತು.

ಭಾರತಕ್ಕೆ ಈ ಬಾರಿ ಒಮ್ಮೆಯೂ ಚೇಸಿಂಗ್‌ ಸಿಕ್ಕಿರಲಿಲ್ಲ. ಗುಂಪು ಹಂತದ 4 ಪಂದ್ಯಗಳಲ್ಲೂ ಮೊದಲು ಬ್ಯಾಟ್‌ ಮಾಡಿ ಗೆದ್ದಿದ್ದ ತಂಡಕ್ಕೆ ದ.ಆಫ್ರಿಕಾ ವಿರುದ್ಧ ಚೇಸ್ ಮಾಡುವ ಸವಾಲು ಎದುರಾಯಿತು. ದ.ಆಫ್ರಿಕಾ 7 ವಿಕೆಟ್‌ ನಷ್ಟದಲ್ಲಿ 187 ರನ್‌ ಕಲೆಹಾಕಿದರೆ, ಬೃಹತ್‌ ಮೊತ್ತ ಬೆನ್ನತ್ತಿದ ಭಾರತ 18.5 ಓವರ್‌ಗಳಲ್ಲಿ ಕೇವಲ 111 ರನ್‌ಗೆ ಅಲೌಟಾಯಿತು.

ಕುಸಿತದ ಬಳಿಕ ಅಬ್ಬರ:

ಮೊದಲು ಬ್ಯಾಟ್‌ ಮಾಡಿದ ದ.ಆಫ್ರಿಕಾದ ಆರಂಭ ಉತ್ತಮವಾಗಿರಲಿಲ್ಲ. 4 ಓವರ್‌ಗಳಲ್ಲಿ 20 ರನ್‌ಗೆ 3 ವಿಕೆಟ್‌ ಕಳೆದುಕೊಂಡ ತಂಡ ಕಡಿಮೆ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಆದರೆ ಅನುಭವಿ ಆಟಗಾರ ಡೇವಿಡ್‌ ಮಿಲ್ಲರ್‌ ಹಗೂ ಡೆವಾಲ್ಡ್‌ ಬ್ರೆವಿಸ್‌ ಕೇವಲ 50 ಎಸೆತಗಳಲ್ಲಿ 97 ರನ್‌ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಮಧ್ಯಮ ಓವರ್‌ಗಳಲ್ಲಿ ಭಾರತೀಯ ಬೌಲರ್‌ಗಳನ್ನು ಚೆಂಡಾಡಿದ ಬ್ರೆವಿಸ್‌ 29 ಎಸೆತಕ್ಕೆ 45 ರನ್‌ ಸಿಡಿಸಿದರೆ, ಮಿಲ್ಲರ್‌ 35 ಎಸೆತಗಳಲ್ಲಿ 63 ರನ್‌ ಗಳಿಸಿದರು. ಬಳಿಕ ಟ್ರಿಸ್ಟನ್‌ ಸ್ಟಬ್ಸ್‌ ಕೂಡಾ ಅಬ್ಬರಿಸಿದರು. ಅವರು 24 ಎಸೆತಗಳಲ್ಲೇ ಔಟಾಗದೆ 44 ರನ್‌ ಸಿಡಿಸಿದರು. ಈ ಮೂವರ ಹೊರತಾಗಿ ಬೇರೆ ಯಾರೂ ಎರಡಂಕಿ ಮೊತ್ತ ಗಳಿಸಲಿಲ್ಲ. ಹಾರ್ದಿಕ್, ವರುಣ್‌ ತಲಾ 45+ ರನ್‌ ಬಿಟ್ಟುಕೊಟ್ಟರು. ಬೂಮ್ರಾ 4 ಓವರ್‌ಗಳಲ್ಲಿ ಕೇವಲ 15 ರನ್‌ ನೀಡಿ 3 ವಿಕೆಟ್‌ ಕಿತ್ತರು.

ಪೆವಿಲಿಯನ್‌ ಪರೇಡ್‌:

ಗುರಿ ಬೆನ್ನತ್ತಲು ಇಳಿದ ಭಾರತಕ್ಕೆ ಈ ಪಂದ್ಯದಲ್ಲೂ ಉತ್ತಮ ಆರಂಭ ಸಿಗಲಿಲ್ಲ. ರನ್‌ ಖಾತೆ ತೆರೆಯುವ ಮೊದಲೇ ಇಶಾನ್‌ ಔಟಾದರು. ತಿಲಕ್‌ ವರ್ಮಾ ಗಳಿಕೆ ಕೇವಲ 1 ರನ್‌. ಅಭಿಷೇಕ್‌ ಶರ್ಮಾ ಆಟ 15ಕ್ಕೆ ಕೊನೆಗೊಂಡಿತು. ವಾಷಿಂಗ್ಟನ್‌ ಸುಂದರ್‌(11), ಸೂರ್ಯಕುಮಾರ್‌(18) ಔಟಾಗುವುದರೊಂದಿಗೆ ತಂಡ 10 ಓವರ್‌ ಮುಕ್ತಾಯಕ್ಕೂ ಮುನ್ನವೇ ಸೋಲೊಪ್ಪಿಕೊಂಡಂತಾಗಿತ್ತು. ತಂಡದ ಪರ ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿ ನಿಂತಿದ್ದು ಶಿವಂ ದುಬೆ ಮಾತ್ರ. ಅವರು 37 ಎಸೆತಕ್ಕೆ 42 ರನ್‌ ಸಿಡಿಸಿ ನಿರ್ಗಮಿಸಿದರು. ಮಾರ್ಕೊ ಯಾನ್ಸನ್‌ 4, ಕೇಶವ್‌ ಮಹಾರಾಜ್‌ 3 ವಿಕೆಟ್‌ ಕಿತ್ತರು.

ಸ್ಕೋರ್: ದ.ಆಫ್ರಿಕಾ 20 ಓವರಲ್ಲಿ 187/7 (ಮಿಲ್ಲರ್‌ 63, ಬ್ರೆವಿಸ್‌ 45, ಸ್ಟಬ್ಸ್‌ ಔಟಾಗದೆ 44, ಬೂಮ್ರಾ 3-15, ಅರ್ಶ್‌ದೀಪ್‌ 2-28), ಭಾರತ 18.5 ಓವರ್‌ಗಳಲ್ಲಿ 111/10 (ದುಬೆ 42, ಸೂರ್ಯ 18, ಹಾರ್ದಿಕ್‌ 18, ಯಾನ್ಸನ್‌ 4-22, ಕೇಶವ್‌ 3-24)

ಪಂದ್ಯಶ್ರೇಷ್ಠ: ಡೇವಿಡ್‌ ಮಿಲ್ಲರ್‌

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಪಂಕಜ್ ಅಡ್ವಾಣಿಗೆ ಲಿಬರ್‌ವಿನ್ ಕಪ್: ಕಮಲ್ ಚಾವ್ಲಾ ವಿರುದ್ಧ ಗೆಲುವು
ಪಾಕ್‌ ವಿರುದ್ಧ ಭಾರತಕ್ಕೆ ‘ವಿಜಯ ರಾತ್ರಿ’!