ಐರ್ಲೆಂಡ್‌ ಸವಾಲು ಗೆಲ್ಲುತ್ತಾ ಟೀಂ ಇಂಡಿಯಾ?

KannadaprabhaNewsNetwork | Published : Jun 5, 2024 12:31 AM

ಸಾರಾಂಶ

ದೊಡ್ಡ ಜಯದೊಂದಿಗೆ ಈ ಬಾರಿಯ ಟಿ20 ವಿಶ್ವಕಪ್‌ಗೆ ಕಾಲಿಡಲು ಟೀಂಇಂಡಿಯಾ ಕಾತರ. ಭಾರತಕ್ಕೆ ಆಘಾತ ನೀಡುವ ವಿಶ್ವಾಸದಲ್ಲಿ ಐರ್ಲೆಂಡ್‌. ನ್ಯೂಯಾರ್ಕ್‌ ಕ್ರೀಡಾಂಗಣ ಆತಿಥ್ಯ

ನ್ಯೂಯಾರ್ಕ್‌: 17 ವರ್ಷಗಳ ಬಳಿಕ ಟಿ20 ವಿಶ್ವಕಪ್‌ ಎತ್ತಿ ಹಿಡಿಯುವ ನಿರೀಕ್ಷೆಯೊಂದಿಗೆ ಅಮೆರಿಕಕ್ಕೆ ಪ್ರಯಾಣಿಸಿರುವ ಟೀಂ ಇಂಡಿಯಾ, ಟೂರ್ನಿಯ ಮೊದಲ ಪಂದ್ಯದಲ್ಲಿ ಬುಧವಾರ ಐರ್ಲೆಂಡ್‌ ವಿರುದ್ಧ ಸೆಣಸಾಡಲಿದೆ. ರೋಹಿತ್‌ ಪಡೆ ಭರ್ಜರಿ ಶುಭಾರಂಭದ ನಿರೀಕ್ಷೆಯಲ್ಲಿದ್ದರೆ, ಭಾರತಕ್ಕೆ ಆಘಾತ ನೀಡಿ ಪಂದ್ಯ ಗೆಲ್ಲುವ ತವಕ ಐರ್ಲೆಂಡ್‌ನದ್ದು.ಭಾರತ ಈ ಬಾರಿ ಟ್ರೋಫಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದ್ದು, ಎಲ್ಲಾ ವಿಭಾಗದಲ್ಲಿ ಬಲಿಷ್ಠವಾಗಿ ತೋರುತ್ತಿದೆ. ಆದರೆ ಎಷ್ಟೇ ಸಾಮರ್ಥ್ಯವಿದ್ದರೂ ಕಳೆದ ಏಕದಿನ ವಿಶ್ವಕಪ್‌ನಲ್ಲಿ ಟ್ರೋಫಿ ತಪ್ಪಿಸಿಕೊಂಡಿದ್ದು ಮರೆಯುವಂತಿಲ್ಲ. ಹೀಗಾಗಿ ಗುಂಪು ಹಂತದಲ್ಲೇ ತಂಡದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ. ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಹಲವು ಆಟಗಾರರು ತಂಡದಲ್ಲಿದ್ದು, ಈಗ ದೇಶಕ್ಕಾಗಿ ಅತ್ಯುತ್ತಮ ಆಟವಾಡಬೇಕಿದೆ. ನಾಯಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ರಿಷಭ್‌ ಪಂತ್‌, ಸೂರ್ಯಕುಮಾರ್‌ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಆದರೆ ನಾಸೌ ಕೌಂಟಿ ಕ್ರೀಡಾಂಗಣದ ನಿಧಾನಗತಿ ಪಿಚ್‌ನಲ್ಲಿ ಭಾರತೀಯ ಬ್ಯಾಟರ್ಸ್‌ ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸಲಿದ್ದಾರೆ ಎಂಬ ಕುತೂಹಲವಿದೆ. ಪಿಚ್‌ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುವ ನಿರೀಕ್ಷೆಯಿದ್ದು, ಬೂಮ್ರಾ, ಜಡೇಜಾ, ಚಹಲ್‌, ಕುಲ್ದೀಪ್‌ ಆಟ ಭಾರತದ ಪಾಲಿಗೆ ನಿರ್ಣಾಯಕ ಎನಿಸಿಕೊಂಡಿದೆ. ಮತ್ತೊಂದೆಡೆ ಐರ್ಲೆಂಡ್‌ಗೆ ಟಿ20ಯಲ್ಲಿ ಬಲಿಷ್ಠ ತಂಡಗಳನ್ನು ಸೋಲಿಸಿದ ಇತಿಹಾಸವಿದೆ. ಕಳೆದ ಬಾರಿ ಟಿ20 ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲಿ ವೆಸ್ಟ್‌ಇಂಡೀಸ್‌ ಹಾಗೂ ಮುಖ್ಯ ಸುತ್ತಿನಲ್ಲಿ ಬಲಿಷ್ಠ ಇಂಗ್ಲೆಂಡ್‌ ತಂಡಗಳನ್ನು ಮಣಿಸಿತ್ತು. ಈ ಬಾರಿಯೂ ಕೆಲ ಅಚ್ಚರಿಯ ಫಲಿತಾಂಶಗಳನ್ನು ನೀಡಿ ಸೂಪರ್‌-8 ಹಂತ ಪ್ರವೇಶಿಸುವ ಕಾತರದಲ್ಲಿದೆ. ತಂಡದಲ್ಲಿ ಬಾಲ್ಬಿರ್ನಿ, ಪಾಲ್‌ ಸ್ಟಿರ್ಲಿಂಗ್ ಸೇರಿದಂತೆ ಅನುಭವಿಗಳಿದ್ದಾರೆ.

ಪಂದ್ಯ: ರಾತ್ರಿ 8 ಗಂಟೆಗೆ

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌.

Share this article