ಬಾರ್ಬಡೊಸ್: ಈ ಬಾರಿ ಟಿ20 ವಿಶ್ವಕಪ್‌ನ ಲೀಗ್ ಪಂದ್ಯಗಳು ಮುಕ್ತಾಯದ ಹಂತ ತಲುಪಿದ್ದು, ಸೂಪರ್-8ಕ್ಕೇರಲು ತಂಡಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ಸದ್ಯ 20 ತಂಡಗಳ ಪೈಕಿ ಭಾರತ ಸೇರಿ 6 ತಂಡಗಳು ಸೂಪರ್-8 ಹಂತ ಪ್ರವೇಶಿಸಿವೆ. ಕೆಲ ತಂಡಗಳು ರೇಸ್‌ನಿಂದ ಹೊರಗುಳಿದಿದ್ದು, ಇನ್ನುಳಿದ 2 ಸ್ಥಾನಕ್ಕಾಗಿ 4 ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡುಬರುತ್ತಿದೆ. ರೇಸ್‌ನಲ್ಲಿರುವ ತಂಡಗಳು ಯಾವುವು? ಮುಂದಿನ ಹಂತದ ಪೈಪೋಟಿ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.ಗುಂಪು ‘ಎ’
ಭಾರತ 6 ಅಂಕದೊಂದಿಗೆ ‘ಎ’ ಗುಂಪಿನಲ್ಲಿ ಮೊದಲ ಸ್ಥಾನಿಯಾಗಿ ಸೂಪರ್-8ಕ್ಕೇರಿದ್ದು, 2ನೇ ಸ್ಥಾನಿಯಾದ ಅಮೆರಿಕ ಕೂಡಾ ಮುಂದಿನ ಸುತ್ತಿಗೇರಿದೆ. ಪಾಕಿಸ್ತಾನ, ಐರ್ಲೆಂಡ್ ಹಾಗೂ ಕೆನಡಾ ತಂಡಗಳು ಅಧಿಕೃತವಾಗಿ ಹೊರಬಿದ್ದಿವೆ.
ಗುಂಪು ‘ಬಿ’
ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಆಸ್ಟ್ರೇಲಿಯಾ ಮುಂದಿನ ಹಂತಕ್ಕೇರಿದೆ. ಮತ್ತೊಂದು ಸ್ಥಾನ ಖಾಲಿ ಇದ್ದು, ಇಂಗ್ಲೆಂಡ್, ಸ್ಕಾಟ್ಲೆಂಡ್ ನಡುವೆ ಸ್ಪರ್ಧೆ ಇದೆ. ಆಸೀಸ್ ವಿರುದ್ಧ ಗೆದ್ದರೆ ಸ್ಕಾಟ್ಲೆಂಡ್ ಸೂಪರ್-8ಕ್ಕೇರಲಿದ್ದು, ಇಂಗ್ಲೆಂಡ್ ಹೊರಬೀಳಲಿದೆ. ಒಂದು ವೇಳೆ ಸ್ಕಾಟ್ಲೆಂಡ್ ಸೋತು, ಅತ್ತ ಇಂಗ್ಲೆಂಡ್ ತಂಡ ನಮೀಬಿಯಾ ವಿರುದ್ಧ ಗೆದ್ದರೆ ಸ್ಕಾಟ್ಲೆಂಡ್ ಹೊರಬೀಳಲಿದ್ದು, ಇಂಗ್ಲೆಂಡ್ ಸೂಪರ್-8ಕ್ಕೇರಲಿದೆ. ನಮೀಬಿಯಾ, ಒಮಾನ್ ಈಗಾಗಲೇ ಹೊರಬಿದ್ದಿವೆ.
ಗುಂಪು ‘ಸಿ’
‘ಸಿ’ ಗುಂಪಿನಲ್ಲಿ ಸೂಪರ್-8ಕ್ಕೇರುವ ತಂಡಗಳು ಅಧಿಕೃತಗೊಂಡಿವೆ. ಅಫ್ಘಾನಿಸ್ತಾನ ಹಾಗೂ ವೆಸ್ಟ್‌ಇಂಡೀಸ್ ತಲಾ 3 ಜಯದೊಂದಿಗೆ ಮುಂದಿನ ಸುತ್ತು ಪ್ರವೇಶಿಸಿದೆ. ಗುಂಪಿನ ಅಗ್ರಸ್ಥಾನಕ್ಕಾಗಿ ಮಾತ್ರ ಆಫ್ಘನ್-ವಿಂಡೀಸ್ ನಡುವೆ ಪೈಪೋಟಿ ಇದೆ. ನ್ಯೂಜಿಲೆಂಡ್, ಉಗಾಂಡ ಹಾಗೂ ಪಪುವಾ ನ್ಯೂ ಗಿನಿ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿವೆ.ಗುಂಪು ‘ಡಿ’
ದ.ಆಫ್ರಿಕಾ ಸತತ 3 ಪಂದ್ಯ ಗೆದ್ದು ಸೂಪರ್-8ಕ್ಕೇರಿದೆ. ಇನ್ನೊಂದು ಸ್ಥಾನಕ್ಕಾಗಿ ಬಾಂಗ್ಲಾದೇಶ-ನೆದರ್‌ಲೆಂಡ್ಸ್ ನಡುವೆ ಪೈಪೋಟಿ ಇದೆ. ಬಾಂಗ್ಲಾದೇಶ(4 ಅಂಕ) ಕೊನೆ ಪಂದ್ಯದಲ್ಲಿ ನೇಪಾಳ ವಿರುದ್ಧ ಸೆಣಸಲಿದ್ದು, ಗೆದ್ದರೆ ಮುಂದಿನ ಸುತ್ತು ಪ್ರವೇಶಿಸಲಿದೆ. ನೆದರ್‌ಲೆಂಡ್ಸ್ ತಂಡ ಶ್ರೀಲಂಕಾ ವಿರುದ್ಧ ಆಡಬೇಕಿದ್ದು, ಗೆದ್ದರೂ ಅತ್ತ ಬಾಂಗ್ಲಾ ಸೋತರೆ ಮಾತ್ರ ಸೂಪರ್-8ಕ್ಕೇರಬಹುದು. ಲಂಕಾ ಈಗಾಗಲೇ ರೇಸ್‌ನಿಂದ ಹೊರಬಿದ್ದಿದೆ.