ಇಂಗ್ಲೆಂಡ್‌ ವಿರುದ್ಧ ಟೀಂ ಇಂಡಿಯಾ ಬಿಗಿ ಹಿಡಿತ

KannadaprabhaNewsNetwork |  
Published : Jan 27, 2024, 01:19 AM ISTUpdated : Jan 27, 2024, 08:29 AM IST
ಕೆ.ಎಲ್‌.ರಾಹುಲ್‌ | Kannada Prabha

ಸಾರಾಂಶ

ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಮುನ್ನಡೆ ಸಿಕ್ಕಿದೆ. ಕನ್ನಡಿಗ ರಾಹುಲ್‌, ರವೀಂದ್ರ ಜಡೇಜಾ ಆಕರ್ಷಕ ಅರ್ಧಶತಕ ಗಳಿಸಿದ್ದಾರೆ. 2ನೇ ದಿನದಂತ್ಯಕ್ಕೆ ಭಾರತ 7 ವಿಕೆಟ್‌ಗೆ 421 । 175 ರನ್ ಮುನ್ನಡೆ ಸಾಧಿಸಿದೆ.

ಹೈದರಾಬಾದ್: ಇಂಗ್ಲೆಂಡ್‌ನ ರಣತಂತ್ರಗಳನ್ನು ಮೊದಲ ದಿನವೇ ಹಿಮ್ಮೆಟ್ಟಿಸಿದ್ದ ಟೀಂ ಇಂಡಿಯಾ, ಪ್ರವಾಸಿ ತಂಡದ ವಿರುದ್ಧದ ಆರಂಭಿಕ ಟೆಸ್ಟ್‌ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ. 

ಸ್ಪಿನ್ನರ್‌ಗಳ ಪರಾಕ್ರಮದ ಬಳಿಕ ಬ್ಯಾಟರ್‌ಗಳು ಪ್ರದರ್ಶಿಸಿದ ಅಭೂತಪೂರ್ವ ಪ್ರದರ್ಶನ ತಂಡಕ್ಕೆ ಮೇಲುಗೈ ಒದಗಿಸಿದೆ. 

ಕನ್ನಡಿಗ ಕೆ.ಎಲ್‌.ರಾಹುಲ್‌ ಹಾಗೂ ರವೀಂದ್ರ ಜಡೇಜಾ ಅರ್ಧಶತಕಗಳ ನೆರವಿನಿಂದ ಭಾರತ 2ನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 421 ರನ್‌ ಕಲೆಹಾಕಿದ್ದು, 175 ರನ್‌ಗಳ ಮುನ್ನಡೆಯಲ್ಲಿದೆ.

ಪ್ರವಾಸಿ ಇಂಗ್ಲೆಂಡನ್ನು ಮೊದಲ ಇನ್ನಿಂಗ್ಸ್‌ನಲ್ಲಿ 246ಕ್ಕೆ ನಿಯಂತ್ರಿಸಿದ್ದ ಭಾರತ, ಮೊದಲ ದಿನದಂತ್ಯಕ್ಕೆ 1 ವಿಕೆಟ್‌ಗೆ 119 ರನ್‌ ಕಲೆಹಾಕಿತ್ತು. 

ಶುಕ್ರವಾರವೂ ಬೌಂಡರಿ ಮೂಲಕ ಬ್ಯಾಟಿಂಗ್‌ ಆರಂಭಿಸಿ ಯಶಸ್ವಿ ಜೈಸ್ವಾಲ್‌(80), ದೊಡ್ಡ ಹೊಡೆತಕ್ಕೆ ಕೈ ಹಾಕಿ ದಿನದ ಮೊದಲ ಓವರಲ್ಲೇ ಪೆವಿಲಿಯನ್‌ಗೆ ಮರಳಿದರು. 

ಶುಭ್‌ಮನ್‌ ಗಿಲ್‌ ಮತ್ತೆ ಸಾಧಾರಣ ಆಟ ಪ್ರದರ್ಶಿಸಿ, ಕೇವಲ 23 ರನ್‌ಗೆ ಔಟಾದರು. ಶ್ರೇಯಸ್‌ ಅಯ್ಯರ್‌ ಇನ್ನಿಂಗ್ಸ್‌ 35 ರನ್‌ಗೆ ಕೊನೆಗೊಂಡಿತು.

ಆದರೆ ಕೆ.ಎಲ್‌.ರಾಹುಲ್‌ ಹಾಗೂ ರವೀಂದ್ರ ಜಡೇಜಾ ಇಂಗ್ಲೆಂಡ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ, ಭಾರತಕ್ಕೆ ಇನ್ನಿಂಗ್ಸ್‌ ಮುನ್ನಡೆ ಒದಗಿಸಲು ನೆರವಾದರು. 123 ಎಸೆತಗಳಲ್ಲಿ 8 ಬೌಂಡರಿ, 2 ಆಕರ್ಷಕ ಸಿಕ್ಸರ್‌ನೊಂದಿಗೆ 86 ರನ್‌ ಸಿಡಿಸಿದ ರಾಹುಲ್‌, ಶತಕದ ಅಂಚಿನಲ್ಲಿ ಟಾಮ್‌ ಹಾರ್ಟ್ಲಿಗೆ ವಿಕೆಟ್‌ ಒಪ್ಪಿಸಿದರು.

6ನೇ ವಿಕೆಟ್‌ಗೆ ಜೊತೆಯಾದ ಜಡೇಜಾ ಹಾಗೂ ಶ್ರೀಕರ್‌ ಭರತ್‌ 68 ರನ್‌ ಸೇರಿಸಿದರು. 41 ರನ್‌ ಗಳಿಸಿದ್ದ ಭರತ್‌ರನ್ನು ಜೋ ರೂಟ್‌ ಎಲ್‌ಬಿ ಬಲೆಗೆ ಬೀಳಿಸಿದರೆ, ಆರ್‌.ಅಶ್ವಿನ್‌ ರನೌಟ್‌ ಮೂಲಕ ಬಂದಷ್ಟೇ ವೇಗದಲ್ಲಿ ಪೆವಿಲಿಯನ್‌ಗೆ ಸೇರಿದರು. 

ಸದ್ಯ ಮುರಿಯದ 8ನೇ ವಿಕೆಟ್‌ಗೆ ಜಡೇಜಾ ಹಾಗೂ ಅಕ್ಷರ್ ಪಟೇಲ್‌ 63 ರನ್‌ ಜೊತೆಯಾಟವಾಡಿದ್ದು, ತಂಡಕ್ಕೆ ಬೃಹತ್‌ ಮೊತ್ತದ ನಿರೀಕ್ಷೆ ಮೂಡಿಸಿದ್ದಾರೆ. ಜಡೇಜಾ 155 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್‌ನೊಂದಿಗೆ ಔಟಾಗದೆ 81, ಅಕ್ಷರ್‌ ಔಟಾಗದೆ 35 ರನ್‌ ಸಿಡಿಸಿದ್ದಾರೆ. 

ಭಾರತದ ಪರ 4, 5, 6 ಮತ್ತು 8ನೇ ವಿಕೆಟ್‌ಗೆ 60+ ರನ್‌ ಜೊತೆಯಾಟ ಮೂಡಿಬಂತು. ಟಾಮ್‌ ಹಾರ್ಟ್ಲಿ ಹಾಗೂ ಜೋ ರೂಟ್‌ ತಲಾ 2 ವಿಕೆಟ್‌ ಪಡೆದರು.

ಸ್ಕೋರ್: ಇಂಗ್ಲೆಂಡ್‌ 246/10, ಭಾರತ 421/7(2ನೇ ದಿನದಂತ್ಯಕ್ಕೆ) (ರಾಹುಲ್‌ 86, ಜಡೇಜಾ 81*, ಜೈಸ್ವಾಲ್‌ 80, ರೂಟ್‌ 2-77, ಹಾರ್ಟ್ಲಿ 2-131)
14ನೇ ಬ್ಯಾಟರ್‌: 50ನೇ ಟೆಸ್ಟ್‌ ಪಂದ್ಯದಲ್ಲಿ 50+ ರನ್ ಗಳಿಸಿದ ಭಾರತದ 14ನೇ ಆಟಗಾರ ಕೆ.ಎಲ್‌.ರಾಹುಲ್‌.

ಸಿಗುತ್ತಾ ಇನ್ನಿಂಗ್ಸ್‌ ಜಯ?
ಸದ್ಯ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 175 ರನ್ ಮುನ್ನಡೆಯಲ್ಲಿದೆ. ಜಡೇಜಾ-ಅಕ್ಷರ್‌ ಕ್ರೀಸ್‌ನಲ್ಲಿದ್ದಾರೆ. ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಇನ್ನಷ್ಟು ಮೊತ್ತ ಕಲೆಹಾಕುವ ನಿರೀಕ್ಷೆಯಲ್ಲಿದೆ. 

ದೊಡ್ಡ ಮುನ್ನಡೆ ಪಡೆದು, 2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಬೇಗನೇ ಆಲೌಟ್‌ ಮಾಡಿ ಇನ್ನಿಂಗ್ಸ್‌ ಗೆಲುವು ದಾಖಲಿಸುವ ನಿರೀಕ್ಷೆ ಭಾರತೀಯರಲ್ಲಿದೆ.

PREV

Recommended Stories

ಭಾರತದ ಹುಡ್ಗೀರ್‌ಗೆ ವಿಶ್ವ ಕಿರೀಟ : ಭಾರತಕ್ಕೆ ಚೊಚ್ಚಲ ವಿಶ್ವಕಪ್‌
ಇಂದು ಭಾರತ vs ದ.ಆಫ್ರಿಕಾ ಐತಿಹಾಸಿಕ ಫೈನಲ್‌