ಸರಣಿ ಗೆಲುವಿನ ಸನಿಹದಲ್ಲಿ ಟೀಮ್‌ ಇಂಡಿಯಾ

Published : Aug 27, 2026, 11:35 AM IST
Team India

ಸಾರಾಂಶ

ಎರಡನೇ ಟೆಸ್ಟ್‌ ಪಂದ್ಯ: ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾವನ್ನು 290 ರನ್‌ಗೆ ಆಲೌಟ್‌ ಮಾಡಿ, ಫಾಲೋ ಆನ್ ಹೇರಿದ ಭಾರತ4ನೇ ದಿನ ಲಂಕಾ 2ನೇ ಇನ್ನಿಂಗ್ಸ್‌ನಲ್ಲಿ 229ಕ್ಕೆ 6, ಕೇವಲ 16 ರನ್‌ ಮುನ್ನಡೆ । ಇಂದು ಬೇಗನೇ ಆಲೌಟ್‌ ಮಾಡಿ ಗೆಲ್ಲುವ ವಿಶ್ವಾಸ

ಕೊಲಂಬೊ: ಭಾರತೀಯ ಬೌಲರ್‌ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ಆತಿಥೇಯ ಶ್ರೀಲಂಕಾ ತಂಡ 2ನೇ ಟೆಸ್ಟ್‌ ಪಂದ್ಯದಲ್ಲಿ ಫಾಲೋ-ಅನ್‌ಗೆ ತುತ್ತಾಗಿದೆ. ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ ತಂಡ ಹೋರಾಟ ಪ್ರದರ್ಶಿಸುತ್ತಿದ್ದರೂ ಭಾರತ ವಿರುದ್ಧ ಸೋಲುವ ಹಂತದಲ್ಲಿದೆ. ಇದರೊಂದಿಗೆ ಭಾರತ ತಂಡ ಸರಣಿ ಗೆಲುವಿನ ವಿಶ್ವಾಸದಲ್ಲಿದ್ದು, ಪಂದ್ಯದಲ್ಲಿ ಗುರುವಾರದ ಕ್ಲೈಮ್ಯಾಕ್ಸ್‌ ಮಾತ್ರ ಬಾಕಿಯಿದೆ.

ಭಾರತ 9 ವಿಕೆಟ್‌ಗೆ 503 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ 3ನೇ ದಿನದಂತ್ಯಕ್ಕೆ 8 ವಿಕೆಟ್‌ಗೆ 265 ರನ್‌ ಗಳಿಸಿ, ಇನ್ನೂ 238 ರನ್‌ ಹಿನ್ನಡೆಯಲ್ಲಿತ್ತು. ಪಂದ್ಯದ 4ನೇ ದಿನವಾದ ಬುಧವಾರ ಮತ್ತೆ ಬ್ಯಾಟಿಂಗ್‌ ಆರಂಭಿಸಿದ ಲಂಕಾ ತಂಡ 290 ರನ್‌ಗೆ ಆಲೌಟಾಯಿತು. ಸೋನಲ್‌ ದಿನುಶಾ(103 ರನ್‌) ಶತಕ ಪೂರೈಸಿದರೂ, ತಂಡವನ್ನು ಫಾಲೋ ಆನ್‌ನಿಂದ ತಪ್ಪಿಸಲು ಸಾಧ್ಯವಾಗಲಿಲ್ಲ. ಲಂಕಾ ಕೇವಲ 13 ರನ್‌ ಹೆಚ್ಚುವರಿ ಗಳಿಸಿದ್ದರೆ ಫಾಲೋಆನ್‌ನಿಂದ ಪಾರಾಗಬಹುದಿತ್ತು. ಪ್ರಸಿದ್ಧ್‌ ಕೃಷ್ಣ ಹಾಗೂ ಮಾನವ್‌ ಸುಥಾರ್‌ ತಲಾ 3 ವಿಕೆಟ್‌ ಪಡೆದರು.

ಮೊದಲ ಇನ್ನಿಂಗ್ಸ್‌ನಲ್ಲಿ 213 ರನ್‌ ಮುನ್ನಡೆ

ಮೊದಲ ಇನ್ನಿಂಗ್ಸ್‌ನಲ್ಲಿ 213 ರನ್‌ ಮುನ್ನಡೆ ಪಡೆದ ಭಾರತ ತಂಡ, ಲಂಕಾ ಮೇಲೆ ಫಾಲೋ ಆನ್‌ ಹೇರಿ ಆತಿಥೇಯರನ್ನು ಮತ್ತೆ ಬ್ಯಾಟಿಂಗ್‌ಗೆ ಆಹ್ವಾನಿಸಿತು. ತಂಡದ ಮೊತ್ತ 5 ರನ್‌ ಆಗುವಷ್ಟರಲ್ಲೇ ಸಿರಾಜ್ ಆಘಾತ ನೀಡಿದರು. ಬಳಿಕ ಲಂಕಾ ಚೇತರಿಕೆಯ ಆಟವಾಡಿತು. ಕಮಿಲ್‌ ಮಿಶಾರಾ(32) ಹಾಗೂ ಪಸಿಂದು ಸೂರ್ಯಬಂಡಾರ 2ನೇ ವಿಕೆಟ್‌ಗೆ 58 ರನ್‌ ಜೊತೆಯಾಟವಾಡಿದರು. 3ನೇ ವಿಕೆಟ್‌ಗೆ ಕಮಿಂಡು ಮೆಂಡಿಸ್‌ ಜೊತೆಗೂಡಿ ಪಸಿಂದು 115 ರನ್‌ ಸೇರಿಸಿದರು.

ತಂಡದ ಮೊತ್ತ 178 ಆಗಿದ್ದಾಗ ಕಮಿಂಡು ವಿಕೆಟ್‌ ಬಿತ್ತು. ಅಲ್ಲಿಂದ 40 ರನ್‌ ಸೇರಿಸುವಷ್ಟರಲ್ಲಿ ತಂಡದ ಪ್ರಮುಖ 4 ವಿಕೆಟ್‌ ಉರುಳಿದವು. 218 ರನ್‌ಗೆ ತಂಡ 6 ವಿಕೆಟ್‌ ಕಳೆದುಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ 80 ರನ್‌ ಬಾರಿಸಿದ್ದ ಪಸಿಂದು ಈ ಬಾರಿ ಶತಕ ಪೂರೈಸುವ ನಿರೀಕ್ಷೆಯಲ್ಲಿದ್ದರೂ, 92 ರನ್‌ ಗಳಿಸಿದ್ದಾಗ ಸುಥಾರ್‌ಗೆ ವಿಕೆಟ್‌ ಒಪ್ಪಿಸಿದರು.

ಸದ್ಯ ತಂಡ 6 ವಿಕೆಟ್‌ ನಷ್ಟದಲ್ಲಿ 229 ರನ್‌ ಗಳಿಸಿದ್ದು, ಕೇವಲ 16 ರನ್‌ ಮುನ್ನಡೆಯಲ್ಲಿದೆ. ಸೋನಲ್‌ ದಿನುಶಾ ಹಾಗೂ ಕೆಶಾರ ನುವಾಂಥ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಗುರುವಾರ ಪಂದ್ಯದ ಕೊನೆ ದಿನವಾಗಿದ್ದು, ಲಂಕಾವನ್ನು ಬೇಗನೇ ಆಲೌಟ್‌ ಮಾಡಿ, ಸುಲಭ ಗುರಿ ಪಡೆದು ಪಂದ್ಯ ಗೆಲ್ಲುವ ವಿಶ್ವಾಸ ಭಾರತಕ್ಕಿದೆ. ಕೊನೆ ಕ್ಷಣದ ಹೋರಾಟ ಪ್ರದರ್ಶಿಸಿ, ಭಾರತಕ್ಕೆ ಸ್ಪರ್ಧಾತ್ಮಕ ಗುರಿ ನೀಡಿ ಗೆಲ್ಲಲು ಶ್ರೀಲಂಕಾ ಅಸಾಧಾರಣ ಆಟವಾಡಬೇಕಾಗಿದೆ.

ಸ್ಕೋರ್: ಭಾರತ 503/9 ಡಿಕ್ಲೇರ್‌, ಶ್ರೀಲಂಕಾ ಮೊದಲ ಇನ್ನಿಂಗ್ಸ್‌ 290/10 (ಸೋನಲ್‌ 103, ಪ್ರಸಿದ್ಧ್‌ 3-52, ಮಾನವ್‌ 3-85) ಮತ್ತು ಎರಡನೇ ಇನ್ನಿಂಗ್ಸ್‌ 229/6 (4ನೇ ದಿನದಂತ್ಯಕ್ಕೆ) (ಪಸಿಂದು 92, ಕಮಿಂಡು 55, ಕಮಿಲ್‌ 32, ಮಾನವ್‌ 2-81, ಸಿರಾಜ್‌ 1-11)

ಭಾರತ ಸ್ಪಿನ್ನರ್ 10 ನೋ ಬಾಲ್‌!

ಈ ಪಂದ್ಯದಲ್ಲಿ ಭಾರತೀಯ ಸ್ಪಿನ್ನರ್‌ಗಳು 10 ನೋಬಾಲ್‌ ಎಸೆದಿದ್ದಾರೆ. ಇದು ಕಳೆದ 5 ವರ್ಷಗಳಲ್ಲೇ ಭಾರತೀಯ ಸ್ಪಿನ್ನರ್‌ಗಳ ಗರಿಷ್ಠ ನೋಬಾಲ್‌. 2021ರಲ್ಲಿ ಇಂಗ್ಲೆಂಡ್‌ ವಿರುದ್ಧ ಚೆನ್ನೈ ಟೆಸ್ಟ್‌ನಲ್ಲಿ ಭಾರತೀಯ ಸ್ಪಿನ್ನರ್ಸ್‌ 14 ನೋಬಾಲ್ ಎಸೆದಿದ್ದರು. 2023ರಲ್ಲಿ ಮೀರ್ಪುರದಲ್ಲಿ ಬಾಂಗ್ಲಾ ವಿರುದ್ಧ ಅಫ್ಘಾನಿಸ್ತಾನ ಸ್ಪಿನ್ನರ್‌ಗಳು 15 ನೋಬಾಲ್‌ ಎಸೆದಿದ್ದು ದಾಖಲೆ

88 ನೋಬಾಲ್

ಜಡೇಜಾ 2021ರಿಂದ ಟೆಸ್ಟ್‌ ಕ್ರಿಕೆಟ್‌ನಲ್ಲಿ 88 ನೋಬಾಲ್‌ ಎಸೆದಿದ್ದಾರೆ. ಸ್ಪಿನ್ನರ್‌ಗಳ ಪೈಕಿ ಇದು ಗರಿಷ್ಠ. ಪಾಕ್‌ನ ನೋಮಾನ್‌ ಅಲಿ(44 ನೋಬಾಲ್‌) 2ನೇ ಸ್ಥಾನದಲ್ಲಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಮಾನವ್‌, ಜಡೇಜಾ ಸ್ಪಿನ್‌ಗೆ ತತ್ತರಿಸಿದ ಶ್ರೀಲಂಕಾ
ಜಾರ್ಖಂಡ್‌ ಜೆನ್‌ಝೀ ದಂಗೆ ಏಕೆ!