ಮಂಡ್ಯ ಮಂಜುನಾಥ
ಚೆಂಡು ಕೈಯಲ್ಲಿದ್ದರೆ ಜಗತ್ತನ್ನೇ ಗೆದ್ದು ಬಿಡುವ ಛಲ, ಗುರಿ ಆಕಾಶದೆತ್ತರ, ಕಣ್ಣ ತುಂಬಾ ಕನಸು. ಆದರೆ, ಕಿತ್ತು ತಿನ್ನುವ ಬಡತನ. ಆದರೂ, ಸತತ ಪರಿಶ್ರಮದೊಂದಿಗೆ ಬಡತನದ ಬೆಂಕಿಯ ನಡುವೆಯೂ ಪ್ರತಿಭೆಯನ್ನು ಅರಳಿಸಿಕೊಂಡು ರಣಜಿ ತಂಡ ಪ್ರವೇಶಿಸಿದ ಮಂಡ್ಯ ಹುಡುಗನ ರೋಚಕ ಯಶೋಗಾಥೆ ಇಲ್ಲಿದೆ ನೋಡಿ.
ಮಂಡ್ಯದಿಂದ ಕೇವಲ ೧೦ ಕಿ.ಮೀ ದೂರದಲ್ಲಿದೆ ಲೋಕಸರ ಎಂಬ ಪುಟ್ಟ ಹಳ್ಳಿ. ಆ ಊರಿನ ಹುಡುಗನೇ ಎಲ್.ಆರ್.ಕುಮಾರ್. ತಾಯಿ ಅಂಗನವಾಡಿ ಕಾರ್ಯಕರ್ತೆ, ಕೂಲಿ ಕೆಲಸ ಮಾಡುವ ತಂದೆ. ದಿನದ ದುಡಿಮೆಯೇ ಬದುಕಿಗೆ ಆಧಾರ. ಕುಟುಂಬದಲ್ಲಿ ಶಾಲೆಯ ಫೀಸ್ ಕಟ್ಟುವುದಕ್ಕೂ ಸಾಧ್ಯವಾಗದ ಕೆಟ್ಟ ಪರಿಸ್ಥಿತಿ ಇತ್ತು.ಎಲ್.ಆರ್.ಕುಮಾರ್‌ಗೆ ಕ್ರಿಕೆಟ್‌ನಲ್ಲಿ ಎಲ್ಲಿಲ್ಲದ ಹುಚ್ಚು. ತಾನೂ ಕ್ರಿಕೆಟಿಗನಾಗಬೇಕೆಂಬ ಕನಸನ್ನು ಕಂಡ. ನಾನು ಕ್ರಿಕೆಟರ್ ಆಗುತ್ತೇನೆಂದು ಹೆತ್ತವರ ಬಳಿ ಹೇಳಿದಾಗ, ಮಗಾ, ಅದೆಲ್ಲಾ ನಮ್ಮಂಥವರಿಗಲ್ಲ. ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಪಡೆದುಕೊಂಡರೆ ನಮಗಷ್ಟೇ ಸಾಕು ಎಂದು ತಾಯಿ ಕಣ್ಣೀರಿಡುತ್ತಾ ಹೇಳಿದರು. ಆದರೆ, ಮಗನಿಗೆ ಹಿಡಿದಿದ್ದ ಕ್ರಿಕೆಟ್ ಹುಚ್ಚು ಕಡಿಮೆಯಾಗಲಿಲ್ಲ. ಮಗನ ಕ್ರಿಕೆಟ್ ವ್ಯಾಮೋಹ ಕಂಡ ಹೆತ್ತವರು ಅವನು ಹೈಸ್ಕೂಲ್ ಹಂತಕ್ಕೆ ಬಂದಾಗ ಕಷ್ಟಪಟ್ಟು ಹಣ ಒಟ್ಟುಗೂಡಿಸಿ ಮಗನಿಗೊಂದು ಕ್ರಿಕೆಟ್ ಜರ್ಸಿ ಮತ್ತು ಕಿಟ್ ಕೊಡಿಸಿದರು. ಅಲ್ಲಿಂದ ಶುರುವಾದದ್ದು ಈ ಮಂಡ್ಯದ ಗಂಡಿನ ನೈಜ ಸಂಗ್ರಾಮ.
ಮಂಡ್ಯದ ಪಿಇಟಿ ಕ್ರೀಡಾಂಗಣದಲ್ಲಿ ಅಭ್ಯಾಸ ಶುರು ಮಾಡಿದ ಕುಮಾರ್, ಅಂಡರ್-೧೪ ಮೈಸೂರು ವಲಯ ತಂಡಕ್ಕೆ ಆಯ್ಕೆಯಾದರು. ಮಂಡ್ಯದಿಂದ ಮೈಸೂರಿಗೆ ಪಂದ್ಯಗಳನ್ನಾಡಲು ಹೋಗಲು ಟೆಂಪೋ ಟ್ರಾವೆಲರ್ ಫೇರ್ ೨೦೦ ರುಪಾಯಿ ಬೇಕಿತ್ತು. ಕೈಯಲ್ಲಿ ಬಿಡಿಗಾಸಿಲ್ಲದ ಕುಮಾರ್, ಹಳ್ಳಿಗಳಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡಿ ಬಂದ ಹಣದಿಂದಲೇ ರೈಲು ಟಿಕೆಟ್ ಪಡೆದು ಮೈಸೂರಿಗೆ ಪ್ರಯಣಿಸುತ್ತಿದ್ದರು. ಹುಡುಗನ ಬದ್ಧತೆ ಕಂಡು ಕೋಚ್ ಮಹಾದೇವ್ ಕ್ರಿಕೆಟ್ ಫೀಸಲ್ಲಿ ರಿಯಾಯ್ತಿ ನೀಡಿ, ಉಚಿತವಾಗಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟರು.
ನನಗಾಗಿ ತಾಯಿ ತುಂಬಾ ಕಷ್ಟಪಟ್ಟಿದ್ದಾರೆ. ಶಾಲೆ ಫೀಸ್ ಕಟ್ಟಲು ಕಷ್ಟವಿದ್ದಾಗಲೂ ಕ್ರಿಕೆಟ್ ಕಿಟ್ ಕೊಡಿಸಿದ್ದರು. ಆದರೆ, ಇವತ್ತು ನನ್ನ ಸಾಧನೆ ಮತ್ತು ರಣಜಿ ಪ್ರವೇಶವನ್ನು ನೋಡಲು ತಂದೆ-ತಾಯಿ ಇಬ್ಬರೂ ಇಲ್ಲ ಎಂದು ಕಣ್ಣೀರಿಡುತ್ತಾರೆ ಎಲ್.ಆರ್.ಕುಮಾರ್
೨೦೨೩ರ ಮಹಾರಾಜ ಟ್ರೋಫಿ ವೇಳೆ ಈ ಹುಡುಗನ ಕಿಚ್ಚು ‘ಪೀಣ್ಯ ಎಕ್ಸ್‌ಪ್ರೆಸ್’ ಅಭಿಮನ್ಯು ಮಿಥುನ್ ಕಣ್ಣಿಗೆ ಬಿತ್ತು. ಬೌಲಿಂಗ್ ರನ್ ಅಪ್, ಆ್ಯಕ್ಷನ್‌ನಲ್ಲಿದ್ದ ದೋಷಗಳನ್ನು ಸರಿಪಡಿಸಿದ ಮಿಥುನ್, ಕಳೆದ ಮೂರು ವರ್ಷಗಳಿಂದ ಕುಮಾರ್ ಪಾಲಿಗೆ ಸ್ವಂತ ಅಣ್ಣನಂತೆ ನಿಂತರು. ಮೆಟ್ರೋ ಸ್ಟೇಷನ್ ಬಳಿ ಕಾಯುತ್ತಿದ್ದು ಅಭ್ಯಾಸಕ್ಕೆ ಕರೆದೊಯ್ದು ಬೌಲಿಂಗ್ ಪಾಠ ಹೇಳಿಕೊಟ್ಟರು.
- ಎಲ್.ಆರ್.ಕುಮಾರ್