;Resize=(412,232))
ರಾಜೇಶ್ ಶೆಟ್ಟಿ
ಈ ಪ್ರಶಸ್ತಿ ನಾನು ನಿರೀಕ್ಷೆ ಮಾಡಿರಲಿಲ್ಲ. ನಾನು ಚಿತ್ರರಂಗದಲ್ಲಿ ಇದ್ದ ಐವತ್ತು ವರ್ಷ ಒಂದೇ ಒಂದು ರಾಷ್ಟ್ರಪ್ರಶಸ್ತಿ ಬಂದಿರಲಿಲ್ಲ. ಕಳೆದ ವರ್ಷ ಪದ್ಮಭೂಷಣ ಬಂದಿತ್ತು. ಮರುವರ್ಷವೇ ಮತ್ತೊಂದು ಇಷ್ಟು ದೊಡ್ಡ ಗೌರವ ಬರುತ್ತದೆ ಮತ್ತು ನಮ್ಮ ಜನ ಇಷ್ಟೊಂದು ದೊಡ್ಡದಾಗಿ ಸಂಭ್ರಮಿಸುತ್ತಾರೆ ಎಂಬ ಕಲ್ಪನೆಯೇ ಇರಲಿಲ್ಲ. ಹಾಗಾಗಿ ವೇದಿಕೆ ಹತ್ತುವಾಗ ಸಣ್ಣದೊಂದು ಕಂಪನವಿತ್ತು. ನಾನು ನನ್ನ ಮಾತಲ್ಲಿ ಹೇಳಿದಂತೆ ಈ ಪ್ರಶಸ್ತಿ ನನ್ನ ಸಿನಿಮಾಗಳಿಗೆ ಹಿನ್ನೆಲೆಯಲ್ಲಿ ದುಡಿದವರಿಗೆ ಸಂದ ಪ್ರಶಸ್ತಿ. ಪರದೆಯ ಮೇಲೆ ನಾಯಕ ಅಥವಾ ನಾಯಕಿಯಷ್ಟೇ ಕಾಣಿಸುತ್ತಾರೆ. ತೆರೆ ಹಿಂದಿನ ಮುಖಗಳು ಕಾಣಿಸುವುದಿಲ್ಲ. ನಾವೆಲ್ಲರೂ ಕೇವಲ ನಿಮಿತ್ತ ಮಾತ್ರ.
ಮಠ, ಆಶ್ರಮಗಳಲ್ಲಿ ಬೆಳೆದ ಆ ಬಾಲ್ಯದ ಸಂಸ್ಕಾರಗಳು ಮುನ್ನೆಲೆಗೆ ಬಂದವು. ಅದಕ್ಕಾಗಿಯೇ ನನ್ನ ಭಾಷಣವನ್ನು ಶಂಕರಾಚಾರ್ಯರ ಭಜಗೋವಿಂದಂನ ಶ್ಲೋಕದಿಂದಲೇ ಆರಂಭಿಸಿದೆ. ಕಳೆದ 55 ವರ್ಷಗಳಿಂದ (5 ವರ್ಷ ರಂಗಭೂಮಿ, 50 ವರ್ಷ ಸಿನೆಮಾ) ನಾನೂ ಸಹ ಹೊಟ್ಟೆಪಾಡಿಗಾಗಿ ನಾನಾ ವೇಷ ಹಾಕಿಕೊಂಡು ತಿರುಗಿದವನೇ. ನನ್ನ 78 ವರ್ಷಗಳ ಬದುಕಿನಲ್ಲಿ 55 ವರ್ಷಗಳು ಬಣ್ಣ ಹಚ್ಚುವುದರಲ್ಲೇ ಕಳೆದುಹೋದವು. ಈಗಲೂ ನನಗೆ ಆ ಕಾಲದ ನನ್ನ ಕಥಾ ಜಗತ್ತೇ ಕಣ್ಣ ಮುಂದೆ ಬರುತ್ತದೆ.
ಈ ಸಂದರ್ಭದಲ್ಲಿ ಮೋದಿಯವರ ಬಗೆಗಿನ ನಿಮ್ಮ ಹೇಳಿಕೆಗಳು ಮುನ್ನೆಲೆಗೆ ಬಂದವು?
ಅಪಸ್ವರಗಳೇ ಮಹತ್ವ ಪಡೆಯುತ್ತಿರುವ ಕಾಲವಿದು. ಜನರ ಮನಸ್ಸಿನಲ್ಲಿ ಕಲ್ಮಶಗಳಿಲ್ಲ. ಆದರೆ ಈ ಸೋಷಿಯಲ್ ಮೀಡಿಯಾ ಬಂದಾಗಿನಿಂದ ಕಲ್ಮಷವನ್ನು ಬಿತ್ತಲಾಗುತ್ತಿದೆ. ಕೆಲವರು ಯಾರ ಮೇಲೋ ಇರುವ ದ್ವೇಷವನ್ನು, ಕೋಪವನ್ನು ತೀರಿಸಿಕೊಳ್ಳಲು ಇಂತಹ ಸುಸಮಯವನ್ನು ಹಾಳುಮಾಡುತ್ತಾರೆ. ನಾನು ಯಾವುದೋ ಒಂದು ಸಂದರ್ಭದಲ್ಲಿ ನಮ್ಮ ದೇಶದ ಪ್ರಧಾನಮಂತ್ರಿಯವರಿಗೆ ನಿಂದಿಸಿದ್ದು ಸರಿಯಲ್ಲ ಎಂದು ಹೇಳಿದ್ದಕ್ಕೆ ಇದೆಲ್ಲಾ ಮಾತು ಬಂತು. ಹಾಗಾಗಿ ಭಾಷಣದಲ್ಲಿಯೂ ಅವರ ಪ್ರಸ್ತಾಪ ಮಾಡಲಿಲ್ಲ. ಈಗ ಎಲ್ಲವೂ ರಾಜಕೀಯಮಯವಾಗಿದೆ. ಪಾಶ್ಚಾತ್ಯ ಸೋಷಿಯಲ್ ಮೀಡಿಯಾ ಸಂಸ್ಕೃತಿ ನಮ್ಮಲ್ಲಿ ಕಲುಷಿತ ವಾತಾವರಣ ಉಂಟು ಮಾಡಿದೆ. ಅದಕ್ಕೆ ನಾನು ಸೋಷಿಯಲ್ ಮೀಡಿಯಾದಲ್ಲಿ ಇಲ್ಲವೇ ಇಲ್ಲ. ಅಪಸ್ವರಗಳನ್ನು ಕಡೆಗಣಿಸುವುದೇ ಏಕೈಕ ದಾರಿ.
ಆ ಕಾಲ ಚೆನ್ನಾಗಿದೆ ಯಾಕೆ?
70 ಮತ್ತು 80ರ ದಶಕದಲ್ಲಿ ಕನ್ನಡ ಚಿತ್ರರಂಗ ಅತ್ಯಂತ ವಿಶೇಷವಾಗಿತ್ತು. ಕಲಾತ್ಮಕ ಚಿತ್ರಗಳು, ಹೊಸ ಅಲೆಯ ಚಿತ್ರಗಳು, ಕೌಟುಂಬಿಕ ಸಿನೆಮಾಗಳು ಮತ್ತು ಕಮರ್ಷಿಯಲ್ ಚಿತ್ರಗಳು ಎಲ್ಲವೂ ಸಮತೋಲನದಲ್ಲಿದ್ದವು. ಮದ್ರಾಸ್‌ನಲ್ಲಿದ್ದ ಉದ್ಯಮ ಕರ್ನಾಟಕಕ್ಕೆ ಬಂದು ನೆಲೆ ನಿಂತಿತು. ಕನ್ನಡದ ಮಹಿಳಾ ಲೇಖಕಿಯರ ಕಾದಂಬರಿಗಳು ಸಿನೆಮಾಗಳಾಗಿ ಅದ್ಭುತ ಯಶಸ್ಸು ಕಂಡವು. ಉದಯಶಂಕರ್ ಅವರಂತಹ ಗೀತರಚನೆಕಾರರು ಅದ್ಭುತ ಸಾಹಿತ್ಯ ನೀಡಿದರು. ಬಾಲಮುರಳಿಕೃಷ್ಣ, ಭೀಮಸೇನ್ ಜೋಷಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಂತಹ ದಿಗ್ಗಜರು ಹಾಡಿದರು. ಹಂಸಗೀತೆಯಲ್ಲೇ ನನಗಾಗಿ 25 ಹಾಡುಗಳಿದ್ದವು. ಸಿನೆಮಾ ಎಂದರೆ ಕೇವಲ ಮನರಂಜನೆ ಮಾತ್ರವಲ್ಲ, ಅದರಲ್ಲಿ ಜ್ಞಾನ, ಮಾರ್ಗದರ್ಶನ ಎಲ್ಲವೂ ಇರಬೇಕು. ‘ಬಾಂಬೆಯಲ್ಲಿದ್ದಿದ್ದರೆ ನೀವು ಹೆಚ್ಚು ಸಂಪಾದನೆ ಮಾಡಬಹುದಿತ್ತು’ ಎನ್ನುತ್ತಿದ್ದರು. ಆದರೆ ನನಗೆ ಸಂಪಾದನೆಯೊಂದೇ ಮುಖ್ಯವಾಗಿರಲಿಲ್ಲ. ಹೆಮ್ಮೆ ಪಡುವಂತಹ ವಾತಾವರಣ ಬೇಕಿತ್ತು. ಅದು ನನಗೆ ಕನ್ನಡದಲ್ಲಿ ಸಿಕ್ಕಿತು. ಇವತ್ತು ಆ ಸಾಹಿತ್ಯ, ಕಾವ್ಯ ಎರಡೂ ಇಲ್ಲದಂತಾಗಿದೆ.
ಕಲಾವಿದರ ಪ್ರಪಂಚ ಹೇಗಿತ್ತು?
ರಾಜ್‌ಕುಮಾರ್ ನಂತರ ನನಗೂ ಮೊದಲು ವಿಷ್ಣುವರ್ಧನ್, ಅಂಬರೀಶ್ ಬಂದಿದ್ದರು. ನನ್ನ ನಂತರ ತಮ್ಮ ಶಂಕರ ಬಂದ. ಕೆಲವರು ಹೋಲಿಕೆ ಮಾಡಿ, ‘ನೀವು ಕೇವಲ ನಟರಷ್ಟೇ, ಸ್ಟಾರ್ ಅಲ್ಲ’ ಎನ್ನುತ್ತಿದ್ದರು. ನಾನು ಕೂಡ ಯಾವತ್ತೂ ಸ್ಟಾರ್‌ಡಮ್ ಬಯಸಿದವನಲ್ಲ. ನನಗೆ ವೈವಿಧ್ಯಮಯವಾದ, ಸವಾಲಿನ ಪಾತ್ರಗಳು ಬೇಕಾಗಿದ್ದವು. ನಾನೊಬ್ಬ ಪರಿಪೂರ್ಣ ನಟನಾಗಿರಲು ಇಷ್ಟಪಟ್ಟೆ.
ನಟನೆಯಿಂದ ದೂರಾಗಿದ್ದಿರಿ, ನಟನೆಗೆ ಮರಳುತ್ತೀರಾ?
ಒಳ್ಳೆಯ ಸ್ಕ್ರಿಪ್ಟ್ ಮತ್ತು ಸಮಾಜಕ್ಕೆ ಒಳ್ಳೆಯ ಪ್ರಭಾವ ಬೀರುವಂತಹ ಗಟ್ಟಿಯಾದ ಕಥೆ ಬಂದರೆ ಮಾಡುತ್ತೇನೆ. ಈಗ 25-30 ವರ್ಷದ ಯುವ ನಿರ್ದೇಶಕರು ಕಥೆ ತರುತ್ತಾರೆ. ಅವರಿಗೆ ನಿರ್ದೇಶನ ಮಾಡಲು ಅನುಭವದ ಕೊರತೆಯಿರುತ್ತದೆ, ಸರಿಯಾದ ಮಾರ್ಗದರ್ಶನವಿರುವುದಿಲ್ಲ. ಈಗ ಕಲಿಸುವವರೂ ಇಲ್ಲ, ಕಲಿಯುವವರೂ ಇಲ್ಲ. ಅವರಿಗೆ ಇಲ್ಲ ಎಂದು ಹೇಳಲು ಬೇಸರವಾಗುತ್ತದೆ. ನನ್ನ ಸಲಹೆ ಬಹಳಷ್ಟು ಸಲ ತೆಗೆದುಕೊಳ್ಳುವುದು ಕಡಿಮೆ. ಯಾಕೆಂದರೆ ಐವತ್ತು ವರ್ಷಗಳ ಅಂತರವಿರುತ್ತದೆ. ಈಗಲೂ ನನಗೆ ಒಪ್ಪುವಂತಹ ಪಾತ್ರ, ಚಿತ್ರಕತೆ ಬಂದರೆ ನಾನು ನಟನೆ ಮಾಡುತ್ತೇನೆ. ಈಗಲೂ ಸ್ಕ್ರಿಪ್ಟ್ ಬರುತ್ತಿರುತ್ತದೆ. ಆದರೆ ನಾನೇ ಕೊಂಚ ಮೌನವಾಗಿರುತ್ತೇನೆ.
ಪ್ರಶಸ್ತಿ ಪ್ರದಾನ ಸಮಾರಂಭ ಹೇಗಿತ್ತು?
ಸಾಮಾನ್ಯವಾಗಿ ಇಂತಹ ಸಿನೆಮಾ ಕಾರ್ಯಕ್ರಮಗಳು, ಪ್ರಶಸ್ತಿ ಸಮಾರಂಭಗಳು ದೆಹಲಿಯಲ್ಲೇ ನಡೆಯುತ್ತಿದ್ದವು. ಆದರೆ ಈ ಬಾರಿ ಜನಸಾಮಾನ್ಯರಿಗೆ ಹತ್ತಿರವಾಗಿಸಬೇಕು, ದೆಹಲಿಯಿಂದ ಹೊರಗೂ ತರಬೇಕು ಎಂಬ ಪ್ರಧಾನಿ ಮೋದಿಯವರು ಮತ್ತು ಸಚಿವರಾದ ಅಶ್ವಿನಿ ವೈಷ್ಣವ್ ಅವರ ಪರಿಕಲ್ಪನೆಯಂತೆ ಮೊದಲ ಬಾರಿಗೆ ಕೇವಡಿಯಾಗೆ ತಂದಿದ್ದರು. ಕೇವಡಿಯಾ ಮೂಲತಃ ಒಂದು ಸಣ್ಣ ಹಳ್ಳಿ. ಮೋದಿಯವರು ಸರ್ದಾರ್ ವಲ್ಲಭಭಾಯಿ ಪಟೇಲರ ಬೃಹತ್ ಪ್ರತಿಮೆಯನ್ನು ಅಲ್ಲಿ ನಿರ್ಮಿಸಿ, ನರ್ಮದಾ ನದಿಯ ಹಿನ್ನೀರು, ಬೆಟ್ಟ-ಕಣಿವೆಗಳ ನಡುವೆ ಒಂದು ಅದ್ಭುತ ಪ್ರವಾಸಿ ತಾಣವನ್ನಾಗಿ ರೂಪಿಸಿದ್ದಾರೆ. ಆ ಪ್ರತಿಮೆಯ ಕೆಳಭಾಗದಲ್ಲೇ ಬೃಹತ್ ಟೆಂಟ್ ಹಾಕಿ, ಸಭಾಂಗಣ ನಿರ್ಮಿಸಿ ಕಾರ್ಯಕ್ರಮ ಮಾಡಿದ್ದರು. ನಮಗೆ ಅಲ್ಲಿ ಸುಂದರ ಸ್ಥಳದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿದ್ದರು. ಸುತ್ತಲೂ ಪರ್ವತಗಳು, ನರ್ಮದಾ ನದಿ, ಶುದ್ಧ ಶಾಕಾಹಾರಿ ಊಟ, ಯಾವುದೇ ರೂಮ್‌ನಲ್ಲೂ ಟಿವಿ ಇರಲಿಲ್ಲ. ಒಂದು ರೀತಿಯಲ್ಲಿ ಆಶ್ರಮದ ವಾತಾವರಣದಂತಿತ್ತು.
ಈ ಪ್ರಶಸ್ತಿ ನಿಮ್ಮಲ್ಲಿ ಏನನ್ನು ಮೂಡಿಸಿದೆ?
ನನಗೆ ಈಗ 78 ವರ್ಷ. ನಾನು ಆಶ್ರಮ, ಮಠದಲ್ಲಿ ಬೆಳೆದವನು. ಮನುಷ್ಯನಿಗೆ ಎಲ್ಲವನ್ನೂ ಮೀರಿ ಕೊನೆಯಲ್ಲಿ ದಕ್ಕಬೇಕಾದದ್ದು ಮೌನ. ಮೌನದಲ್ಲಿ ಧ್ಯಾನ, ಮನನ ಮತ್ತು ಚಿಂತನ. ಇಷ್ಟು ವರ್ಷಗಳ ಲೌಕಿಕ ಜಂಜಾಟದ ನಂತರ ಮತ್ತೆ ಆ ಧ್ಯಾನಕ್ಕೆ ಮರಳುವ, ಪರಮಾರ್ಥದ ಹಾದಿಯಲ್ಲಿದ್ದೆ. ಆದರೆ ಈ ಪ್ರಶಸ್ತಿ ಮತ್ತೆ ನನ್ನನ್ನು ಪ್ರಪಂಚಕ್ಕೆ ಕರೆತಂದಿದೆ. ಕಳೆದ ಒಂದು ವಾರದಿಂದ ಬಂದ ಫೋನ್ ಕರೆ, ಸಂದೇಶಗಳು ನನ್ನನ್ನು ಚಕಿತಗೊಳಿಸಿವೆ. ಮತ್ತೆ ಒಳ್ಳೆಯ ಕತೆ ಬಂದರೆ ನಟಿಸುವ ಮನಸ್ಸು ತರಿಸಿದೆ. ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಎಂಬ ಸಾಲು ಎಷ್ಟು ಅರ್ಥಪೂರ್ಣ.