ಆರ್‌ಸಿಬಿಗೆ ನಂ.1 ಸ್ಥಾನದ ಗುರಿ - ಇಂದು ಗುಜರಾತ್‌ ವಿರುದ್ಧ ಸೆಣಸು

Published : Apr 30, 2026, 12:42 PM IST
RCB

ಸಾರಾಂಶ

ಹಾಲಿ ಚಾಂಪಿಯನ್‌ ಎಂಬ ಹೆಸರಿಗೆ ತಕ್ಕಂತೆ ಈ ಬಾರಿ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಆರ್‌ಸಿಬಿ ಈಗ ಪ್ಲೇ-ಆಫ್‌ ಸ್ಥಾನಕ್ಕೆ ಹತ್ತಿರದಲ್ಲಿದೆ. ಗುರುವಾರ ಗುಜರಾತ್‌ ಟೈಟಾನ್ಸ್‌ ವಿರುದ್ಧ ಆಡಲಿರುವ ಆರ್‌ಸಿಬಿಯು ಅದರಲ್ಲಿ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವುದರ ಜೊತೆಗೆ, ಪ್ಲೇ-ಆಫ್‌ ಸ್ಥಾನ ಬಹುತೇಕ ಖಚಿತಪಡಿಸಿಕೊಳ್ಳಲಿದೆ.

ಅಹಮದಾಬಾದ್‌: ಹಾಲಿ ಚಾಂಪಿಯನ್‌ ಎಂಬ ಹೆಸರಿಗೆ ತಕ್ಕಂತೆ ಈ ಬಾರಿ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಆರ್‌ಸಿಬಿ ಈಗ ಪ್ಲೇ-ಆಫ್‌ ಸ್ಥಾನಕ್ಕೆ ಹತ್ತಿರದಲ್ಲಿದೆ. ಗುರುವಾರ ಗುಜರಾತ್‌ ಟೈಟಾನ್ಸ್‌ ವಿರುದ್ಧ ಆಡಲಿರುವ ಆರ್‌ಸಿಬಿಯು ಅದರಲ್ಲಿ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವುದರ ಜೊತೆಗೆ, ಪ್ಲೇ-ಆಫ್‌ ಸ್ಥಾನ ಬಹುತೇಕ ಖಚಿತಪಡಿಸಿಕೊಳ್ಳಲಿದೆ.

ಆರ್‌ಸಿಬಿ 8 ಪಂದ್ಯಗಳನ್ನಾಡಿದ್ದು, 6ರಲ್ಲಿ ಗೆದ್ದು 12 ಅಂಕಗಳನ್ನು ಸಂಪಾದಿಸಿದೆ. ಯಾವುದೇ ತಂಡ ಪ್ಲೇ-ಆಫ್‌ಗೇರಲು ಕನಿಷ್ಠ 14 ಅಂಕ ಬೇಕು. ಗುಜರಾತ್‌ ವಿರುದ್ಧ ಗೆದ್ದರೆ ಬಳಿಕ ತಂಡಕ್ಕೆ ಕೊನೆ 5 ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೂ ಸಾಕಾಗುತ್ತದೆ. ಮತ್ತೊಂದೆಡೆ ಗುಜರಾತ್‌ 8 ಪಂದ್ಯಗಳ ಪೈಕಿ 4ರಲ್ಲಿ ಗೆದ್ದಿದೆ. ಇತ್ತೀಚೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿರುದ್ಧ ಸೋತಿದ್ದ ತಂಡ ಈ ಬಾರಿ ತವರಿನಲ್ಲಿ ಸೇಡು ತೀರಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಬಲಿಷ್ಠ ತಂಡ:

ಆರ್‌ಸಿಬಿ ಬ್ಯಾಟಿಂಗ್‌ ವಿಭಾಗ ಬಲಿಷ್ಠವಾಗಿದ್ದು, 8ನೇ ಕ್ರಮಾಂಕದವರೆಗೂ ಬ್ಯಾಟರ್‌ಗಳಿದ್ದಾರೆ. ಕೊಹ್ಲಿ, ರಜತ್‌, ಪಡಿಕ್ಕಲ್‌, ಟಿಮ್‌ ಡೇವಿಡ್‌ ಸ್ಥಿರ ಪ್ರದರ್ಶನ ನೀಡುತ್ತಿರುವುದು ತಂಡದ ಪ್ಲಸ್‌ ಪಾಯಿಂಟ್‌. ಬೌಲರ್‌ಗಳು ಬೆಂಕಿ ಉಗುಳುತ್ತಿದ್ದು, ಎದುರಾಳಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾರೆ. ಅದರಲ್ಲೂ ಜೋಶ್ ಹೇಜಲ್‌ವುಡ್‌, ಭುವನೇಶ್ವರ್‌ ಕುಮಾರ್‌ ಪ್ರಚಂಡ ದಾಳಿ ನಡೆಸುತ್ತಿದ್ದಾರೆ. ಈ ಮಧ್ಯೆ, ಆರಂಭಿಕ ಆಟಗಾರ ಫಿಲ್ ಸಾಲ್ಟ್‌ ಫಿಟ್ ಆಗಿರುವುದರಿಂದ ಜೇಕಬ್‌ ಬೆಥೆಲ್‌ ಸ್ಥಾನ ಕಳೆದುಕೊಳ್ಳಬಹುದು.

ಮಧ್ಯಮ ಕ್ರಮಾಂಕದ ಚಿಂತೆ:

ಗುಜರಾತ್‌ ಈ ಬಾರಿ ಆರಂಭಿಕ ಮೂವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ತಂಡ ಈ ಬಾರಿ ಗಳಿಸಿದ ರನ್‌ಗಳಲ್ಲಿ ಶೇ.70ರಷ್ಟನ್ನು ಸಾಯಿ ಸುದರ್ಶನ್‌, ನಾಯಕ ಶುಭ್‌ಮನ್‌ ಗಿಲ್‌ ಹಾಗೂ ಜೋಸ್‌ ಬಟ್ಲರ್‌ ಕಲೆಹಾಕಿದ್ದಾರೆ. ಇತರ ಬ್ಯಾಟರ್‌ಗಳಿಂದಲೂ ಕೊಡುಗೆ ಸಿಗದೇ ಇರುವುದು ತಂಡಕ್ಕೆ ಹಿನ್ನಡೆಯಾಗುತ್ತಿದೆ. ಬೌಲಿಂಗ್‌ನಲ್ಲಿ ರಬಾಡ, ಸಿರಾಜ್‌, ಪ್ರಸಿದ್ಧ್‌ ಕೃಷ್ಣ ಮಿಂಚುತ್ತಿದ್ದು, ಆರ್‌ಸಿಬಿ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಎದುರು ನೋಡುತ್ತಿದ್ದಾರೆ.

06 ವಿಕೆಟ್‌

ಭುವನೇಶ್ವರ್‌ ಈ ಐಪಿಎಲ್‌ನಲ್ಲಿ ಡೆತ್‌ ಓವರ್‌ಗಳಲ್ಲಿ 6 ವಿಕೆಟ್ ಪಡೆದಿದ್ದಾರೆ. ಇದು ಯಾವುದೇ ಬೌಲರ್‌ ಪೈಕಿ 2ನೇ ಗರಿಷ್ಠ.

9.1

ರನ್‌ರೇಟ

ಈ ಬಾರಿ ಐಪಿಎಲ್‌ನಲ್ಲಿ ಗುಜರಾತ್‌ ತಂಡ ಡೆತ್‌ ಓವರ್‌ಗಳಲ್ಲಿ ಕೇವಲ 9.1 ರನ್‌ ರೇಟ್‌ ಹೊಂದಿದೆ. ಇದು 10 ತಂಡಗಳ ಪೈಕಿ ಕನಿಷ್ಠ

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

2 ತಾಸಲ್ಲೇ 42 ಕಿ.ಮೀ. ಓಡಿ ವಿಶ್ವ ಚಕಿತಗೊಳಿಸಿದ ಸಬಾಸ್ಟಿಯನ್‌ ಜಗತ್ತು ಗೆದ್ದ ಓಟಗಾರ!
ವಿರಾಟ್‌ ಕೊಹ್ಲಿ 9000 ರನ್‌ - ಐಪಿಎಲ್‌ನಲ್ಲಿ ಈ ಮೈಲುಗಲ್ಲು ಸಾಧಿಸಿದ ಮೊದಲಿಗ