ಲಂಡನ್: ಲೀಡ್ಸ್ ಹಾಗೂ ಎಜ್‌ಬಾಸ್ಟನ್‌ನ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಆರ್ಭಟಿಸಿದ್ದ ಭಾರತ ತಂಡಕ್ಕೆ ಈಗ ನಿಜವಾದ ಅಗ್ನಿಪರೀಕ್ಷೆಯ ಸಮಯ. ಆರಂಭಿಕ 2 ಪಂದ್ಯಗಳಲ್ಲಿ ರನ್ ಪ್ರವಾಹವನ್ನೇ ಹರಿಸಿದ್ದ ಶುಭ್‌ಮನ್ ಗಿಲ್ ಸಾರಥ್ಯದ ತಂಡ ಗುರುವಾರದಿಂದ ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿದ್ದು, ಲಾರ್ಡ್ಸ್ ಅಂಗಳದ ಹಸಿರು ಪಿಚ್‌ನಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬ ಕುತೂಹಲವಿದೆ. ಹುಲ್ಲಿನಿಂದ ಕೂಡಿರುವ ಪಿಚ್‌ನಲ್ಲಿ ಬೌನ್ಸರ್ ಹಾಗೂ ವೇಗದ ಎಸೆತಗಳನ್ನು ಸಮರ್ಥವಾಗಿ ಎದುರಿಸುವ ತಂಡ ಕ್ರಿಕೆಟ್ ಕಾಶಿ ಎಂದೇ ಕರೆಸಿಕೊಳ್ಳುವ ಲಾರ್ಡ್ಸ್‌ನಲ್ಲಿ ಪ್ರಾಬಲ್ಯ ಸಾಧಿಸಬಹುದು. ಸರಣಿಯ ಆರಂಭಿಕ 2 ಪಂದ್ಯಗಳಲ್ಲಿ 1-1 ಸಮಬಲ ಸಾಧಿಸಿರುವ ಉಭಯ ತಂಡಗಳು, ಲಾರ್ಡ್ಸ್‌ನಲ್ಲಿ ಸರಣಿ ಮುನ್ನಡೆ ಪಡೆಯಲು ಕಾತರಿಸುತ್ತಿದೆ.ಮೊದಲ ಟೆಸ್ಟ್‌ನಲ್ಲಿ ಹಲವು ಎಡವಟ್ಟುಗಳನ್ನು ಮಾಡಿ ಪಂದ್ಯ ಕೈಚೆಲ್ಲಿದ್ದನ್ನು ಹೊರತುಪಡಿಸಿದರೆ ಈ ಸರಣಿಯಲ್ಲಿ ಭಾರತದ ಪ್ರದರ್ಶನ ಅದ್ವಿತೀಯ. ಬ್ಯಾಟಿಂಗ್‌ನಲ್ಲಿ ಗಿಲ್, ರಿಷಭ್ ಪಂತ್, ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್ ಅಬ್ಬರಿಸಿದ್ದರೆ, 2ನೇ ಟೆಸ್ಟ್‌ನಲ್ಲಿ ಬೂಮ್ರಾ ಅನುಪಸ್ಥಿತಿಯಲ್ಲೂ ಭಾರತದ ಬೌಲಿಂಗ್ ಪಡೆ ಮೊನಚು ದಾಳಿ ಸಂಘಟಿಸಿತ್ತು. ಆದರೆ ಲಾರ್ಡ್ಸ್ ಟೆಸ್ಟ್ ವೇಗ ಹಾಗೂ ಬೌನ್ಸ್‌ನಿಂದ ಕೂಡಿರಲಿದ್ದು, ಭಾರತದ ಪ್ರದರ್ಶನ ಹೇಗಿರಲಿದೆ ಎಂಬ ಕುತೂಹಲವಿದೆ.ಪ್ರಸಿದ್ಧ್ ಔಟ್ ಸಾಧ್ಯತೆ: 2 ಪಂದ್ಯದಲ್ಲೂ ವಿಫಲರಾಗಿರುವ ಕರುಣ್ ನಾಯರ್‌ಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಯಿದೆ. ಆಲ್ರೌಂಡರ್ ನಿತೀಶ್ ಕುಮಾರ್ ಕೂಡಾ ತಂಡದಲ್ಲಿ ಮುಂದುವರಿಯಬಹುದು. ಕಳೆದ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ವೇಗಿ ಜಸ್‌ಪ್ರೀತ್ ಬೂಮ್ರಾ ಈ ಪಂದ್ಯದಲ್ಲಿ ಆಡಲಿದ್ದು, ಅವರಿಗೆ ಪ್ರಸಿದ್ಧ್ ಕೃಷ್ಣ ಜಾಗ ಬಿಟ್ಟುಕೊಡಬೇಕಾಗಬಹುದು. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಸಾಧ್ಯತೆಯಿಲ್ಲ.ಆರ್ಚರ್ ವಾಪಸ್: ಲಾರ್ಡ್ಸ್ ಟೆಸ್ಟ್‌ಗೆ ಇಂಗ್ಲೆಂಡ್ ತಂಡವನ್ನು ಘೋಷಿಸಲಾಗಿದ್ದು, ಪ್ರಚಂಡ ವೇಗಿ ಜೋಫ್ರಾ ಆರ್ಚರ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪದೇ ಪದೇ ಗಾಯಗೊಳ್ಳುತ್ತಿದ್ದ ಆರ್ಚರ್ 2021ರ ಬಳಿಕ ಇದೇ ಮೊದಲ ಬಾರಿ ಟೆಸ್ಟ್ ಆಡಲು ಸಜ್ಜಾಗಿದ್ದಾರೆ. ಅವರು ಜೋಶ್ ಟಂಗ್ ಸ್ಥಾನಕ್ಕೆ ಆಯ್ಕೆಯಾಗಿದ್ದು, ಉಳಿದಂತೆ ಯಾವುದೇ ಬದಲಾವಣೆಯಾಗಿಲ್ಲ.
ಆಟಗಾರರ ಪಟ್ಟಿ:ಭಾರತ(ಸಂಭವನೀಯ): ಜೈಸ್ವಾಲ್, ರಾಹುಲ್, ಕರುಣ್, ಗಿಲ್(ನಾಯಕ), ರಿಷಭ್, ಜಡೇಜಾ, ನಿತೀಶ್, ವಾಷಿಂಗ್ಟನ್, ಬೂಮ್ರಾ, ಸಿರಾಜ್, ಆಕಾಶ್‌ದೀಪ್.
ಇಂಗ್ಲೆಂಡ್(ಆಡುವ 11): ಜ್ಯಾಕ್ ಕ್ರಾವ್ಲಿ, ಬೆನ್ ಡಕೆಟ್, ಪೋಪ್, ರೂಟ್, ಬ್ರೂಕ್, ಸ್ಟೋಕ್ಸ್(ನಾಯಕ), ಜೆಮೀ ಸ್ಮಿತ್, ವೋಕ್ಸ್, ಬ್ರೈಡನ್ ಕಾರ್ಸ್, ಆರ್ಚರ್, ಬಶೀರ್.ಪಂದ್ಯ: ಮಧ್ಯಾಹ್ನ 3.30ರಿಂದ(ಭಾರತೀಯ ಕಾಲಮಾನ)
ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.ಪಿಚ್ ರಿಪೋರ್ಟ್‌ಲಾರ್ಡ್ಸ್ ಕ್ರೀಡಾಂಗಣಕ್ಕೆ ಬಳಸಲಾಗುವ ಪಿಚ್‌ನಲ್ಲಿ ಹುಲ್ಲುಗಳಿದ್ದು, ಇದು ವೇಗಿಗಳು ಹೆಚ್ಚಿನ ನೆರವು ನೀಡುವ ನಿರೀಕ್ಷೆಯಿದೆ. ಅಧಿಕ ಬೌನ್ಸರ್‌ಗಳೂ ಕಂಡುಬರಲಿವೆ. ಹೀಗಾಗಿ ಬ್ಯಾಟರ್‌ಗಳು ರನ್ ಗಳಿಸಲು ಹೆಚ್ಚಿನ ಶ್ರಮ ವಹಿಸಬೇಕಿದೆ. 2021ರ ಬಳಿಕ ಇಲ್ಲಿ ನಡೆದ 9 ಟೆಸ್ಟ್‌ಗಳಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ 265.
ಲಾರ್ಡ್ಸ್‌ನಲ್ಲಿ 3 ಬಾರಿ ಟೆಸ್ಟ್ ಗೆದ್ದಿದೆ ಭಾರತಭಾರತ ತಂಡ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಈವರೆಗೂ 19 ಟೆಸ್ಟ್ ಪಂದ್ಯಗಳನ್ನಾಡಿದ್ದು, 3ರಲ್ಲಿ ಜಯಗಳಿಸಿದೆ. 12 ಪಂದ್ಯಗಳಲ್ಲಿ ಇಂಗ್ಲೆಂಡ್ ಗೆದ್ದಿದ್ದರೆ, ಉಳಿದ 4 ಪಂದ್ಯಗಳು ಡ್ರಾಗೊಂಡಿವೆ. ಆದರೆ ಇಲ್ಲಿ ಕೊನೆ 3 ಮುಖಾಮುಖಿಯಲ್ಲಿ ಭಾರತ 2ರಲ್ಲಿ ಜಯಗಳಿಸಿದೆ. 1986ರಲ್ಲಿ ಲಾರ್ಡ್ಸ್‌ನಲ್ಲಿ ಮೊದಲ ಬಾರಿ ಗೆದ್ದಿದ್ದ ಭಾರತ, 2014 ಹಾಗೂ 2021ರ ಪ್ರವಾಸದಲ್ಲೂ ಜಯಭೇರಿ ಬಾರಿಸಿತ್ತು.