ಅಂಡರ್-19 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಪರಾಕ್ರಮ ಮುಂದುವರಿದಿದ್ದು, ದಾಖಲೆಯ 9ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ. 6ನೇ ಬಾರಿ ಪ್ರಶಸ್ತಿ ಎತ್ತಿ ಹಿಡಿಯುವ ಕಾತರದಲ್ಲಿರುವ ಭಾರತ ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ 2 ವಿಕೆಟ್ ರೋಚಕ ಗೆಲುವು ಸಾಧಿಸಿತು
ಬೆನೋನಿ(ದಕ್ಷಿಣ ಆಫ್ರಿಕಾ): ಅಂಡರ್-19 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಪರಾಕ್ರಮ ಮುಂದುವರಿದಿದ್ದು, ದಾಖಲೆಯ 9ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ. 6ನೇ ಬಾರಿ ಪ್ರಶಸ್ತಿ ಎತ್ತಿ ಹಿಡಿಯುವ ಕಾತರದಲ್ಲಿರುವ ಭಾರತ ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ 2 ವಿಕೆಟ್ ರೋಚಕ ಗೆಲುವು ಸಾಧಿಸಿತು.
ಶಿಸ್ತುಬದ್ಧ ಬೌಲಿಂಗ್ ದಾಳಿ ಮೂಲಕ ಭಾರತ ತಂಡ ದ.ಆಫ್ರಿಕಾವನ್ನು 50 ಓವರಲ್ಲಿ 7 ವಿಕೆಟ್‌ಗೆ 244 ರನ್‌ಗೆ ಕಟ್ಟಿಹಾಕಿತು. ಬಳಿಕ ಆರಂಭಿಕ ವೈಫಲ್ಯ ಹಾಗೂ ಕೊನೆ ಕ್ಷಣದ ಗೊಂದಗಳನ್ನು ಮೆಟ್ಟಿನಿಂತ ಭಾರತ 48.5 ಓವರಲ್ಲಿ ವಿಜಯಲಕ್ಷ್ಮಿಯನ್ನು ತನ್ನತ್ತ ಒಲಿಸಿಕೊಂಡಿತು.
ಟೂರ್ನಿಯುದ್ದಕ್ಕೂ ಅಬ್ಬರಿಸಿದ್ದ ಭಾರತ ಈ ಬಾರಿಯೂ ಗುರಿಯನ್ನು ಸುಲಭದಲ್ಲಿ ಬೆನ್ನತ್ತುವ ನಿರೀಕ್ಷೆಯಲ್ಲಿತ್ತು. ಆದರೆ ಮೊದಲ ಎಸೆತದಲ್ಲೇ ಆದರ್ಶ್ ಸಿಂಗ್‌ರನ್ನು ಕಳೆದುಕೊಂಡ ತಂಡ ಸಂಕಷ್ಟಕ್ಕೊಳಗಾಯಿತು.
ಬಳಿಕ ಟೂರ್ನಿಯ ಗರಿಷ್ಠ ರನ್ ಸರದಾರ ಮುಶೀರ್ ಖಾನ್(04), ಅರ್ಶಿನ್ ಕುಲ್ಕರ್ಣಿ(12), ಪ್ರಿಯಾನ್ಶು ಮೋಲಿಯಾ(05) ನೋಡ ನೋಡುತ್ತಲೇ ಪೆವಿಲಿಯನ್ ಸೇರಿದಾಗ ತಂಡದ ಮೊತ್ತ ಕೇವಲ 32. ದಕ್ಷಿಣ ಆಫ್ರಿಕಾ ಪಾಳಯದಲ್ಲಿ ಅದಾಗಲೇ ಸಂಭ್ರಮ ಶುರುವಾಗಿತ್ತು.
ಉದಯ್-ಸಚಿನ್ ಶೋ: ಆದರೆ 5ನೇ ವಿಕೆಟ್‌ಗೆ ಜೊತೆಯಾಟ ನಾಯಕ ಉದಯ್ ಸಹರಾನ್ ಹಾಗೂ ಸಚಿನ್ ದಾಸ್ ಪಂದ್ಯದ ಗತಿಯನ್ನೇ ಬದಲಿಸಿದರು. ಒಂದೆಡೆ ಸಚಿನ್ ಆಫ್ರಿಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರೆ, ಉದಯ್ ರಕ್ಷಣಾತ್ಮಕ ಆಟದ ಮೂಲಕ ಒಂದೊಂದೇ ರನ್ ಕಲೆಹಾಕುತ್ತಾ ಸಾಗಿದರು.
ಈ ಜೋಡಿ ಅಭೂತಪೂರ್ವ 171 ರನ್ ಸೇರಿಸಿ ಪಂದ್ಯವನ್ನು ಭಾರತದ ಕಡೆಗೆ ವಾಲಿಸಿದರು. ಶತಕದತ್ತ ಮುನ್ನುಗ್ಗುತ್ತಿದ್ದ ಸಚಿನ್ 96 ರನ್ ಗಳಿಸಿ ಆಘಾತಕಾರಿಯಾಗಿ ನಿರ್ಗಮಿಸಿದ ಬಳಿಕ ತಂಡದಲ್ಲಿ ಮತ್ತೆ ಆತಂಕ ಮನೆಮಾಡಿತು.
ಆದರೆ ಕೆಳ ಕ್ರಮಾಂಕದ ಬ್ಯಾಟರ್‌ಗಳ ಜೊತೆಗೂಡಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದ ಉದಯ್(81), ಗೆಲುವಿಗೆ 1 ರನ್ ಬೇಕಿದ್ದಾಗ ರನ್‌ಔಟ್ ಆದರು. 4 ಎಸೆತದಲ್ಲಿ 13 ರನ್ ಸಿಡಿಸಿದ ರಾಜ್ ಲಿಂಬಾನಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕ್ವೆನಾ ಮಫಾಕ ಹಾಗೂ ಟ್ರಿಸ್ಟನ್ ಲ್ಯೂಸ್ ತಲಾ 3 ವಿಕೆಟ್ ಕಿತ್ತರು.
ಶಿಸ್ತುಬದ್ಧ ದಾಳಿ: ಟೂರ್ನಿಯುದ್ದಕ್ಕೂ ಎದುರಾಳಿ ತಂಡಗಳನ್ನು ಇನ್ನಿಲ್ಲದಂತೆ ಕಾಡಿದ್ದ ಭಾರತೀಯ ಬೌಲರ್‌ಗಳು ಈ ಪಂದ್ಯದಲ್ಲೂ ತಂಡದ ಕೈಬಿಡಲಿಲ್ಲ. ಶಿಸ್ತುಬದ್ಧ ದಾಳಿ ಮೂಲಕ ಮಧ್ಯಮ ಕ್ರಮಾಂಕದಲ್ಲಿ ಆಫ್ರಿಕಾ ಬ್ಯಾಟರ್‌ಗಳನ್ನು ಕಟ್ಟಿ ಹಾಕಿದರು. ಆದರೆ ಪ್ರಿಟೋರಿಯಸ್ 76, ರಿಚರ್ಡ್ 64 ರನ್ ಸಿಡಿಸಿ ತಂಡವನ್ನು 250ರ ಸನಿಹಕ್ಕೆ ತಂದರು.
ರಾಜ್ ಲಂಬಾನಿ 3, ಮುಶೀರ್ ಖಾನ್ 2 ವಿಕೆಟ್ ಪಡೆದರು.ಸ್ಕೋರ್: ದ.ಆಫ್ರಿಕಾ 50 ಓವರಲ್ಲಿ 244/7(ಪ್ರಿಟೋರಿಯಸ್ 76, ರಿಚರ್ಡ್ 64, ರಾಜ್ 3-60), ಭಾರತ 48.5 ಓವರಲ್ಲಿ 248/8(ಸಚಿನ್ 96, ಉದಯ್ 81, ಮಫಾಕ 3-32) ಪಂದ್ಯಶ್ರೇಷ್ಠ: ಉದಯ್ ಸಹರಾನ್
ಸತತ 5ನೇ ಫೈನಲ್: ಭಾರತ ಸತತ 5ನೇ ಬಾರಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿತು. ಈ ಮೊದಲು 2016, 2018, 2020, 2022ರಲ್ಲೂ ತಂಡ ಪ್ರಶಸ್ತಿ ಸುತ್ತಿಗೇರಿತ್ತು. 2018, 2022ರಲ್ಲಿ ಚಾಂಪಿಯನ್ ಆಗಿದ್ದು, ಸತತ 2ನೇ ಪ್ರಶಸ್ತಿ ನಿರೀಕ್ಷೆಯಲ್ಲಿದೆ.
ಪಾಕ್ ಅಥವಾ ಆಸೀಸ್‌ಜೊತೆ ಫೈನಲ್ ಫೈಟ್: ಟೂರ್ನಿಯ 2ನೇ ಸೆಮಿಫೈನಲ್ ಪಂದ್ಯ ಗುರುವಾರ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವೆ ನಡೆಯಲಿದೆ. ಇದರಲ್ಲಿ ಗೆಲ್ಲುವ ತಂಡದ ಜೊತೆ ಭಾರತ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿದೆ. ಫೈನಲ್ ಪಂದ್ಯ ಫೆ.11ಕ್ಕೆ ನಿಗದಿಯಾಗಿದೆ.
2 ದಶಕದಲ್ಲಿ ಸೆಮೀಸಲ್ಲಿಸೋತೇ ಇಲ್ಲ ಭಾರತ: ಭಾರತ ತಂಡ ಕಳೆದೆರಡು ದಶಕಗಳಲ್ಲಿ ಸೆಮಿಫೈನಲ್ ಪ್ರವೇಶಿಸಿದಾಗಲೆಲ್ಲಾ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿದೆ. 2002, 2004ರ ಟೂರ್ನಿಗಳಲ್ಲಿ ಭಾರತ ಸೆಮಿಫೈನಲ್‌ನಲ್ಲಿ ಸೋತಿತ್ತು. ಆ ಬಳಿಕ 8 ಬಾರಿಯೂ ಸೆಮೀಸ್‌ನಲ್ಲಿ ಗೆದ್ದಿದೆ.
03ನೇ ಬಾರಿ: ದ.ಆಫ್ರಿಕಾ ಸೆಮೀಸ್‌ನಲ್ಲಿ ಸೋತಿದ್ದು 3ನೇ ಬಾರಿ. 1998, 2012ರಲ್ಲೂ ಉಪಾಂತ್ಯದಲ್ಲಿ ಪರಾಭವಗೊಂಡಿತ್ತು. 2014ರಲ್ಲಿ ಚಾಂಪಿಯನ್ ಆಗಿತ್ತು.