ಇಂದಿನಿಂದ ಯುಎಸ್‌ ಓಪನ್‌: ದಾಖಲೆಯ 25ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮೇಲೆ ಜೋಕೋ ಕಣ್ಣು

KannadaprabhaNewsNetwork |  
Published : Aug 26, 2024, 01:34 AM ISTUpdated : Aug 26, 2024, 04:05 AM IST
ಜೋಕೋವಿಚ್‌ | Kannada Prabha

ಸಾರಾಂಶ

ಆಲ್ಕರಜ್‌, ಇಗಾ, ಗಾಫ್‌ ಆಕರ್ಷಣೆ. ಸರ್ಬಿಯಾದ ಜೋಕೋ ಕಳೆದ ವರ್ಷ ಯುಎಸ್‌ ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದರು. ಆಲ್ಕರಜ್‌ ಟೂರ್ನಿಯ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ.

ನ್ಯೂಯಾರ್ಕ್‌: ಕ್ಯಾಲೆಂಡರ್‌ ವರ್ಷದ ಕೊನೆ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಾಗಿರುವ ಯುಎಸ್‌ ಓಪನ್‌ಗೆ ಸೋಮವಾರ ಚಾಲನೆ ಸಿಗಲಿದೆ. ಹಾಲಿ ಚಾಂಪಿಯನ್‌ ನೋವಾಕ್‌ ಜೋಕೊವಿಚ್‌ ದಾಖಲೆಯ 25ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯೊಂದಿಗೆ ಟೂರ್ನಿಗೆ ಕಾಲಿಡಲಿದ್ದಾರೆ.ಸರ್ಬಿಯಾದ ಜೋಕೋ ಕಳೆದ ವರ್ಷ ಯುಎಸ್‌ ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದರು. 

ಈ ವರ್ಷ ನಡೆದ 3 ಗ್ರ್ಯಾನ್‌ಸ್ಲಾಂಗಳಲ್ಲೂ ಜೋಕೋಗೆ ಪ್ರಶಸ್ತಿ ಕೈತಪ್ಪಿದೆ. ಆದರೆ ಇತ್ತೀಚೆಗಷ್ಟೇ ಒಲಿಂಪಿಕ್ಸ್‌ ಚಾಂಪಿಯನ್‌ ಆಗಿದ್ದ ಅವರು, ಸತತ 2ನೇ ಹಾಗೂ ಒಟ್ಟಾರೆ 5ನೇ ಬಾರಿ ಯುಎಸ್‌ ಓಪನ್‌ ಗೆಲ್ಲುವ ಕಾತರದಲ್ಲಿದ್ದಾರೆ. ಮೊದಲ ಸುತ್ತಿನಲ್ಲಿ ಅವರಿಗೆ ಮಾಲ್ಡೋವಾ ದೇಶದ ರಾಡು ಅಲ್ಬೊಟ್‌ ಸವಾಲು ಎದುರಾಗಲಿದೆ.

 ಇನ್ನು, ಈ ವರ್ಷ ಫ್ರೆಂಚ್‌ ಓಪನ್‌ ಹಾಗೂ ವಿಂಬಲ್ಡನ್‌ ಚಾಂಪಿಯನ್‌ ಆಗಿರುವ ಟೆನಿಸ್‌ ಹೊಸ ಸೂಪರ್‌ ಸ್ಟಾರ್‌ ಕಾರ್ಲೊಸ್‌ ಆಲ್ಕರಜ್‌ ಟೂರ್ನಿಯ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ. ಅವರು 2ನೇ ಯುಎಸ್‌ ಓಪನ್‌, 5ನೇ ಗ್ರ್ಯಾನ್‌ಸ್ಲಾಂ ಟ್ರೋಫಿ ಮೇಲೆ ಕಣ್ಣಿಟ್ಟಿದ್ದಾರೆ. 

ವಿಶ್ವ ನಂ.1 ಯಾನಿಕ್‌ ಸಿನ್ನರ್‌, 4ನೇ ಶ್ರೇಯಾಂಕಿತ ಅಲೆಕ್ಸಾಂಡರ್‌ ಜ್ವೆರೆವ್‌, 2021ರ ಯುಎಸ್ ಓಪನ್‌ ಚಾಂಪಿಯನ್‌ ಡ್ಯಾನಿಲ್‌ ಮೆಡ್ವೆಡೆವ್‌ ಕೂಡಾ ಕಣದಲ್ಲಿದ್ದಾರೆ.ಗಾಫ್‌, ಇಗಾ ಮೇಲೆ ಕಣ್ಣು: ಮಹಿಳಾ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್‌ ಕೊಕೊ ಗಾಫ್‌, 2022ರ ಚಾಂಪಿಯನ್‌, ಹಾಲಿ ವಿಶ್ವ ನಂ.1 ಇಗಾ ಸ್ವಿಯಾಟೆಕ್‌ ಟೂರ್ನಿಯಲ್ಲಿರುವ ಪ್ರಮುಖರು. 4ನೇ ಶ್ರೇಯಾಂಕಿತ ಎಲೆನಾ ರಬೈಕೆನಾ, 2ನೇ ಶ್ರೇಯಾಂಕಿತ ಅರೈನಾ ಸಬಲೆಂಕಾ ಕೂಡಾ ಕಣದಲ್ಲಿದ್ದು, ಭಾರಿ ಪೈಪೋಟಿ ನಿರೀಕ್ಷಿಸಲಾಗಿದೆ.

ಬೋಪಣ್ಣ, ನಗಾಲ್‌ ಕಣಕ್ಕೆ

ಪುರುಷರ ಸಿಂಗಲ್ಸ್‌ನಲ್ಲಿ ಸುಮಿತ್‌ ನಗಾಲ್‌ ಭಾರತದ ಏಕೈಕ ಸ್ಪರ್ಧಿಯಾಗಿದ್ದು, ಮೊದಲ ಸುತ್ತಿನಲ್ಲಿ ನೆದರ್‌ಲೆಂಡ್ಸ್‌ನ ಟಾಲನ್‌ ಗ್ರೀಕ್‌ಸ್ಪೂರ್‌ ವಿರುದ್ಧ ಸೆಣಸಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ರೋಹಣ್‌ ಬೋಪಣ್ಣ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆಗೂಡಿ ಕಣಕ್ಕಿಳಿಯಲಿದ್ದಾರೆ. ಯೂಕಿ ಭಾಂಬ್ರಿ-ಫ್ರಾನ್ಸ್‌ನ ಅಲ್ಬಾನೊ ಒಲಿವೆಟ್ಟಿ, ಶ್ರೀರಾಮ್‌ ಬಾಲಾಜಿ-ಅರ್ಜೆಂಟೀನಾದ ಆ್ಯಂಡ್ರೋಜಿ, ನಗಾಲ್‌-ಜಪಾನ್‌ನ ನಿಶಿಯೊಕ ಜೊತೆಗೂಡಿ ಆಡಲಿದ್ದಾರೆ.

PREV

Recommended Stories

ಇಂದಿನಿಂದ ರಣಜಿ ಟ್ರೋಫಿ - 91ನೇ ಆವೃತ್ತಿಯ ದೇಸಿ ಪ್ರ.ದರ್ಜೆ ಕ್ರಿಕೆಟ್‌ ಟೂರ್ನಿ
ಗಿಲ್‌ ನಾಯಕತ್ವದಲ್ಲಿ ಮೊದಲ ಸರಣಿ ಜಯ