ಕಿಂಗ್‌ ಕೊಹ್ಲಿ ಅಬ್ಬರಕ್ಕೆ ಕಿಂಗ್ಸ್‌ ಸೈಲೆಂಟ್‌!

KannadaprabhaNewsNetwork |  
Published : Mar 26, 2024, 01:03 AM ISTUpdated : Mar 26, 2024, 08:54 AM IST
ಕೊಹ್ಲಿ (ಚಿತ್ರ: ಕೆ.ರವಿ) | Kannada Prabha

ಸಾರಾಂಶ

ಪಂಜಾಬ್‌ ವಿರುದ್ಧ ಗೆದ್ದು ತವರಲ್ಲಿ ಆರ್‌ಸಿಬಿ ಶುಭಾರಂಭ. ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ ಆರ್‌ಸಿಬಿ ಶಿಸ್ತುಬದ್ಧ ದಾಳಿ, ಪಂಜಾಬ್‌ 6ಕ್ಕೆ 176. 2ನೇ ಎಸೆತದಲ್ಲೇ ಕ್ಯಾಚ್‌ ಕೈಚೆಲ್ಲಿ ಕೊಹ್ಲಿಗೆ ಜೀವದಾನ. 49 ಎಸೆತದಲ್ಲಿ 77 ರನ್‌ ಸಿಡಿಸಿದ ವಿರಾಟ್‌. ಆರ್‌ಸಿಬಿ 19.2 ಓವರಲ್ಲಿ 178/6

ಕನ್ನಡಪ್ರಭ ವಾರ್ತೆ ಬೆಂಗಳೂರು

ಕ್ಯಾಚ್‌ ಬಿಟ್ಟರೆ ಮ್ಯಾಚ್‌ ಸೋತಂತೆ ಎಂಬ ಮಾತು ಪಂಜಾಬ್‌ ಕಿಂಗ್ಸ್‌ಗೆ ಈಗ ಮತ್ತೊಮ್ಮೆ ಅರಿವಾಗಿರಬಹುದು. ಸೊನ್ನೆಗೆ ಔಟಾಗುವರಿಂದ ಪಾರಾದ ವಿರಾಟ್‌ ಕೊಹ್ಲಿ, ತಮಗೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡು ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿಗೆ ಈ ಬಾರಿ ಐಪಿಎಲ್‌ನ ಮೊದಲ ಗೆಲುವು ತಂದುಕೊಟ್ಟಿದ್ದಾರೆ. 

ಶಿಸ್ತುಬದ್ಧ ಬೌಲಿಂಗ್‌ ದಾಳಿ, ಕೊನೆಯಲ್ಲಿ ದಿನೇಶ್‌ ಕಾರ್ತಿಕ್‌ಗೆ ಸೂಪರ್ ಫಿನಿಶ್‌ ನೆರವಿನಿಂದ ಆರ್‌ಸಿಬಿ 4 ವಿಕೆಟ್‌ ರೋಚಕ ಜಯಗಳಿಸಿದೆ.

ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಗಳಿಸಿದ್ದು 6 ವಿಕೆಟ್‌ಗೆ 176. ಈ ಮೊತ್ತ ಚಿನ್ನಸ್ವಾಮಿಯ ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ ದೊಡ್ಡದೇನೂ ಅಲ್ಲ. ಆದರೆ ಕೊಹ್ಲಿ ಅಬ್ಬರದ ನಡುವೆಯೂ ಸತತ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ಆರ್‌ಸಿಬಿ 19.2 ಓವರ್‌ಗಳಲ್ಲಿ ಗೆಲುವನ್ನು ತನ್ನದಾಗಿಸಿಕೊಂಡಿತು.

ರಬಾಡ ಎಸೆದ ಪಂದ್ಯದ ಮೊದಲ ಓವರ್‌ನ 2ನೇ ಎಸೆತದಲ್ಲೇ ಕೊಹ್ಲಿ ನೀಡಿದ್ದ ಕ್ಯಾಚನ್ನು ಸ್ಲಿಪ್‌ನಲ್ಲಿದ್ದ ಜಾನಿ ಬೇರ್‌ಸ್ಟೋವ್‌ ಕೈಚೆಲ್ಲಿದರು. ಇದನ್ನು ಎರಡೂ ಕೈಗಳಿಂದ ಬಾಚಿಕೊಂಡ ಕೊಹ್ಲಿ ಮೊದಲ ಓವರಲ್ಲೇ 4 ಬೌಂಡರಿ ಸಿಡಿಸಿದರು. ಆದರೆ 3ನೇ ಓವರಲ್ಲಿ ಡು ಪ್ಲೆಸಿ(03) ವಿಕೆಟ್‌ ಕಳೆದುಕೊಂಡ ಬಳಿಕ ಕೊಹ್ಲಿಗೆ ಯಾರಿಂದಲೂ ಸೂಕ್ತ ಬೆಂಬಲ ಸಿಗಲಿಲ್ಲ. 

ಕ್ಯಾಮರೂನ್‌ ಗ್ರೀನ್‌(03), ರಜತ್‌ ಪಾಟೀದಾರ್‌(18), ಗ್ಲೆನ್‌ ಮ್ಯಾಕ್ಸ್‌ವೆಲ್‌(03) ಬಂದಷ್ಟೇ ವೇಗದಲ್ಲಿ ಪೆವಿಲಿಯನ್‌ಗೆ ಮರಳಿದರು. ಸತತ ವಿಕೆಟ್‌ ಉರುಳುತ್ತಿದ್ದರೂ ಒಂದೆಡೆ ಕ್ರೀಸ್‌ನಲ್ಲಿ ಭದ್ರವಾಗಿ ನಿಂತ ವಿರಾಟ್‌, ಐಪಿಎಲ್‌ನಲ್ಲಿ ತಮ್ಮ 51 ಅರ್ಧಶತಕ ಪೂರ್ಣಗೊಳಿಸಿದರು. 

49 ಎಸೆತದಲ್ಲಿ 77 ರನ್‌ ಗಳಿಸಿದ್ದ ಕೊಹ್ಲಿ 16ನೇ ಓವರ್‌ನ ಕೊನೆ ಎಸೆತದಲ್ಲಿ ಔಟಾದರು. ಅನುಜ್‌ ರಾವತ್‌(11) ಕೂಡಾ ಕೈಕೊಟ್ಟರು. 

ಈ ವೇಳೆ ತಂಡ ಸಂಕಷ್ಟಕ್ಕೆ ಒಳಗಾದರೂ ದಿನೇಶ್ ಕಾರ್ತಿಕ್‌(ಔಟಾಗದೆ 10 ಎಸೆತಗಳಲ್ಲಿ 28) ಹಾಗೂ ಇಂಪ್ಯಾಕ್ಟ್‌ ಆಟಗಾರ ಮಹಿಪಾಲ್‌ ಲೊಮ್ರೊರ್‌(ಔಟಾಗದೆ 17) ತಂಡವನ್ನು ಗೆಲುವಿನ ದಡ ಸೇರಿಸಿದರು.

ಸಂಘಟಿತ ದಾಳಿ: ಚಿನ್ನಸ್ವಾಮಿಯಲ್ಲಿ 200+ ರನ್‌ ಕೂಡಾ ಸುರಕ್ಷಿತವಲ್ಲ ಎಂದರಿತಿದ್ದ ಪಂಜಾಬ್‌ ಆರಂಭದಲ್ಲೇ ಅಬ್ಬರಿಸುವ ಮುನ್ಸೂಚನೆ ನೀಡಿದ್ದರೂ ಅದಕ್ಕೆ ಆರ್‌ಸಿಬಿ ಬೌಲರ್‌ಗಳು ಕಡಿವಾಣ ಹಾಕಿದರು. 

ಆರಂಭಿಕ ಧವನ್‌(45) ಹೊರತುಪಡಿಸಿ ಇತರರು ಮಿಂಚಲಿಲ್ಲ. ಜಿತೇಶ್‌ ಶರ್ಮಾ 27, ಪ್ರಭ್‌ಸಿಮ್ರನ್‌ 25, ಸ್ಯಾಮ್‌ ಕರ್ರನ್‌ 23, ಶಶಾಂಕ್‌ ಸಿಂಗ್‌ ಔಟಾಗದೆ 21 ರನ್‌ ಗಳಿಸಿ ತಂಡವನ್ನು 170ರ ಗಡಿ ದಾಟಿಸಿದರು. ಸಿರಾಜ್‌, ಮ್ಯಾಕ್ಸ್‌ವೆಲ್‌ ತಲಾ 2 ವಿಕೆಟ್‌ ಕಿತ್ತರು.

ಸ್ಕೋರ್‌: ಪಂಜಾಬ್‌ 20 ಓವರಲ್ಲಿ 176/6 (ಧವನ್‌ 45, ಸಿರಾಜ್‌ 2-26, ಮ್ಯಾಕ್ಸ್‌ವೆಲ್‌ 2-29), ಆರ್‌ಸಿಬಿ 19.2 ಓವರಲ್ಲಿ 178/6 (ಕೊಹ್ಲಿ 77, ಕಾರ್ತಿಕ್‌ 28*, ಹರ್‌ಪ್ರೀತ್‌ 2-13)

PREV

Recommended Stories

ಭಾರತ vs ಪಾಕಿಸ್ತಾನ ಏಷ್ಯಾಕಪ್‌ ಪಂದ್ಯಕ್ಕೆ ಸರ್ಕಾರ ಗ್ರೀನ್‌ ಸಿಗ್ನಲ್‌!
ಯುವ ಫುಟ್‌ಬಾಲ್ ಆಟಗಾರರಿಗಾಗಿ ರೆಸಿಡೆನ್ಷಿಯಲ್ ಅಕಾಡೆಮಿ ಆರಂಭಿಸಿದ ಎಸ್‌ಯುಎಫ್‌ಸಿ