2ನೇ ಟೆಸ್ಟ್‌ನಲ್ಲಿ ವೆಸ್ಟ್ಇಂಡೀಸ್ 8 ವಿಕೆಟ್ ಐತಿಹಾಸಿಕ ಜಯ ಸಾಧಿಸಿದೆ. ಆಸ್ಟ್ರೇಲಿಯಾದಲ್ಲಿ 27 ವರ್ಷ ಬಳಿಕ ವಿಂಡೀಸ್‌ಗೆ ಗೆಲುವು ಸಿಕ್ಕಿದೆ.
ಬ್ರಿಸ್ಬೇನ್(ಆಸ್ಟ್ರೇಲಿಯಾ): ಆಸ್ಟ್ರೇಲಿಯಾದ ಭದ್ರಕೋಟೆ ಎನಿಸಿಕೊಂಡಿದ್ದ ಗಾಬಾ ಕ್ರೀಡಾಂಗಣ ಮತ್ತೆ ಛಿದ್ರಗೊಂಡಿದೆ. ಶಮಾರ್ ಜೋಸೆಫ್ ಸಾಹಸದಿಂದಾಗಿ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್(ಹಗಲು-ರಾತ್ರಿ) ಪಂದ್ಯದಲ್ಲಿ ವೆಸ್ಟ್ಇಂಡೀಸ್ 8 ರನ್‌ಗಳ ಅತಿ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಆಸ್ಟ್ರೇಲಿಯಾದಲ್ಲಿ 27 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಸಾಧನೆಯನ್ನು ವೆಸ್ಟ್‌ಇಂಡೀಸ್ ಮಾಡಿತು. ಗಾಬಾದಲ್ಲಿ 1988ರ ಬಳಿಕ ಆಸೀಸ್‌ಗೆ ಇದು ಕೇವಲ 2ನೇ ಸೋಲು.ಗೆಲುವಿಗೆ 216 ರನ್ ಗುರಿ ಪಡೆದಿದ್ದ ಆಸೀಸ್ 3ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 60 ರನ್ ಗಳಿಸಿತ್ತು. ಆದರೆ ಕ್ಯಾಮರೂನ್ ಗ್ರೀನ್(42) ತಂಡಕ್ಕೆ ನೆರವಾದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕ್ರೀಸ್‌ನಲ್ಲಿ ನೆಲೆಯೂರಿ ಏಕಾಂಗಿಯಾಗಿ ಹೋರಾಡಿದ ಸ್ಮಿತ್ ಔಟಾಗದೆ 91 ರನ್ ಸಿಡಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ತಂಡ 207ಕ್ಕೆ ಸರ್ವಪತನ ಕಂಡಿತು. ಆಸೀಸ್ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಿದ ಶಮಾರ್, ಸತತ 11.5 ಓವರ್ ಬೌಲ್ ಮಾಡಿ 7 ವಿಕೆಟ್ ಕಬಳಿಸಿ ಗೆಲುವಿನ ರೂವಾರಿಯಾದರು.ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ ವಿಂಡೀಸ್ 311 ರನ್ ಗಳಿಸಿದ್ದರೆ, ಆಸೀಸ್ 9 ವಿಕೆಟ್‌ಗೆ 289 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. 22 ರನ್ ಮುನ್ನಡೆ ಪಡೆದಿದ್ದ ವಿಂಡೀಸ್ 2ನೇ ಇನ್ನಿಂಗ್ಸ್‌ನಲ್ಲಿ 193ಕ್ಕೆ ಆಲೌಟಾಗಿತ್ತು.---01ನೇ ಸೋಲುಆಸೀಸ್‌ಗೆ ಇದು ಮೊದಲ ಹಗಲು-ರಾತ್ರಿ ಟೆಸ್ಟ್ ಸೋಲು. ಈ ಮೊದಲು ಆಡಿರುವ 11 ಪಂದ್ಯದಲ್ಲೂ ಆಸೀಸ್ ಗೆದ್ದಿತ್ತು.05ನೇ ಸೋಲುಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ ಬಳಿಕ ಆಸೀಸ್ ಪಂದ್ಯ ಸೋತಿದ್ದು ಇದು 5ನೇ ಬಾರಿ.---ಹಣ್ಣು, ಬಾಟಲನ್ನು ಬಾಲ್‌ಮಾಡಿ ಆಡುತ್ತಿದ್ದ ಶಮಾರ್!ವಿಂಡೀಸ್‌ನ ಆಪತ್ಬಾಂಧವ ಶಮಾರ್ ಜೋಸೆಫ್‌ರ ಕ್ರಿಕೆಟ್ ಪಯಣ ಯಾವ ಸಿನಿಮಾ ಕಥೆಗೂ ಕಡಿಮೆಯೇನಲ್ಲ. ಕಾಡಲ್ಲಿ ಮರ ಕಡಿಯುವೊಂದೇ ವೃತ್ತಿ ಮಾಡಿಕೊಂಡಿರುವ, ಕೇವಲ 400 ಜನಸಂಖ್ಯೆಯುಳ್ಳ ಕೆರಿಬಿಯನ್‌ನ ಹಳ್ಳಿಯೊಂದರ ಪ್ರತಿಭೆಯಾಗಿರುವ ಶಮಾರ್, 2021ರ ವರೆಗೂ ಬಾರ್ಬಿಸ್ ಎಂಬಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಶಮಾರ್‌ರ ಗ್ರಾಮಕ್ಕೆ ತೆರಳಬೇಕಿದ್ದರೆ 2 ಗಂಟೆ ಬೋಟ್‌ನಲ್ಲಿ ಸಂಚರಿಸಬೇಕಿದ್ದು, 2018ರ ವರೆಗೂ ಅವರ ಊರಿನಲ್ಲಿ ಮೊಬೈಲ್, ಇಂಟರ್ನೆಟ್ ಸೇವೆ ಇರಲಿಲ್ಲ. ಪ್ಲಾಸ್ಟಿಕ್ ಬಾಟಲ್, ಹಣ್ಣುಗಳನ್ನೇ ಎಸೆದು ಬೌಲಿಂಗ್ ಮಾಡುತ್ತಿದ್ದ ಶಮಾರ್, ಕಳೆದ ವರ್ಷದವರೆಗೂ ವೃತ್ತಿಪರ ಕ್ರಿಕೆಟರೇ ಆಗಿರಲಿಲ್ಲ ಎನ್ನುವುದು ಹಲವರಿಗೆ ಗೊತ್ತಿಲ್ಲ.ಯಾವುದೇ ವೃತ್ತಿಪರ ಕ್ರಿಕೆಟ್ ಆಟದೆ ಕೆರಿಬಿಯನ್ ಪ್ರೀಮಿಯರ್ ಲೀಗ್‌ಗೆ ಆಯ್ಕೆಯಾದ ಬಳಿಕ ಶಮಾರ್‌ರ ಬದುಕಿನ ದಿಕ್ಕೇ ಬದಲಾಗಿದೆ. ಊರಲ್ಲಿ ಕೆಲಸದ ವೇಳೆ ತಮ್ಮ ಮೇಲೆ ಮರ ಬೀಳುವುದರಿಂದ ಅಲ್ಪದರಲ್ಲೇ ಪಾರಾಗಿ, ಸಾವಿನಿಂದ ಬಚಾವಾಗಿದ್ದ ಶಮಾರ್ ಸದ್ಯ ವಿಂಡೀಸ್ ಕ್ರಿಕೆಟ್ ತಂಡದ ಹೀರೊ. ಶನಿವಾರ ಸ್ಟಾರ್ಕ್ ಎಸೆತದಲ್ಲಿ ಕಾಲ್ಬೆರಳ ಗಾಯಕ್ಕೆ ತುತ್ತಾಗಿ ಮೈದಾನದಿಂದ ನಿರ್ಗಮಿಸಿದ್ದ ಶಮಾರ್, ಭಾನುವಾರ ಆಸೀಸ್‌ಗೆ ದುಸ್ವಪ್ನವಾಗಿ ಕಾಡಿದರು.ಕೊಂಡಾಡಿದ ದಿಗ್ಗಜರುಶಮಾರ್ ಸಾಹಸವನ್ನು ಕ್ರಿಕೆಟೆ ದಿಗ್ಗಜರು ಕೊಂಡಾಡಿದ್ದು, ಸಚಿನ್ ತೆಂಡುಲ್ಕರ್, ಎಬಿಡಿ ವಿಲಿಯರ್ಸ್ ಸೇರಿದಂತೆ ಹಲವರು ಶಮಾರ್‌ಗೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಗೆಲುವಿನ ಸಂಭ್ರಮದಲ್ಲಿ ವಿಂಡೀಸ್ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ, ಕಾರ್ಲ್ ಹೂಪರ್ ಆನಂದಬಾಷ್ಪ ಸುರಿಸಿದ್ದು, ಫೋಟೋ, ವಿಡಿಯೋ ವೈರಲ್ ಆಗಿದೆ.