ಅಹಮದಾಬಾದ್: ವಿಶ್ವಕಪ್ ಉದ್ಘಾಟನಾ ಪಂದ್ಯಕ್ಕೆ ದೊಡ್ಡ ಸಂಖ್ಯೆಯ ಪ್ರೇಕ್ಷಕರನ್ನು ನಿರೀಕ್ಷಿಸಿದ್ದ ಐಸಿಸಿ-ಬಿಸಿಸಿಐಗೆ ಗುರುವಾರ ಅಚ್ಚರಿ, ಆಘಾತ ಎರಡೂ ಒಟ್ಟೊಟ್ಟಿಗೆ ಎದುರಾಯಿತು. ಗಣನೀಯ ಪ್ರಮಾಣದಲ್ಲಿ ಟಿಕೆಟ್ ಮಾರಾಟಗೊಂಡಿದ್ದರೂ, ಪಂದ್ಯ ಆರಂಭವಾಗುವ ವೇಳೆಗೆ 1.32 ಲಕ್ಷ ಆಸನ ಸಾಮರ್ಥ್ಯ ಹೊಂದಿರುವ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಂದಾಜು 10000ಕ್ಕಿಂತ ಕಡಿಮೆ ಪ್ರೇಕ್ಷಕರಿದ್ದರು. ಇದನ್ನು ಕಂಡು ಸಾಮಾಜಿಕ ತಾಣಗಳಲ್ಲಿ ಭಾರತ ಹಾಗೂ ವಿದೇಶಿ ಕ್ರಿಕೆಟ್ ಅಭಿಮಾನಿಗಳು ಬಿಸಿಸಿಐ ಹಾಗೂ ಐಸಿಸಿಯನ್ನು ಟೀಕಿಸುವುದರ ಜೊತೆಗೆ ಟ್ರೋಲ್ ಸಹ ಮಾಡಿದರು. ಬಿಸಿಲು ಕಡಿಮೆಯಾಗುತ್ತಲೇ ಕ್ರೀಡಾಂಗಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದರು. ಕೊನೆಯಲ್ಲಿ 47000ಕ್ಕೂ ಹೆಚ್ಚು ಪ್ರೇಕ್ಷಕರು ನೆರೆದಿದ್ದರು ಎಂದು ಗುಜರಾತ್ ಕ್ರಿಕೆಟ್ ಸಂಸ್ಥೆ ಮಾಹಿತಿ ನೀಡಿದೆ.