ಭರ್ತಿ 1000 ದಿನ ಪೂರೈಸಿದ ರಷ್ಯಾ-ಉಕ್ರೇನ್‌ ಮಹಾಸಮರ

KannadaprabhaNewsNetwork | Published : Nov 20, 2024 12:33 AM

ಸಾರಾಂಶ

2022ರ ಫೆ.24ರಂದು ಆರಂಭವಾದ ರಷ್ಯಾ-ಉಕ್ರೇನ್‌ ಸಮರ ಮಂಗಳವಾರ ಬರೋಬ್ಬರಿ 1,000 ದಿನ ಪೂರೈಸಿದೆ.

- ರಷ್ಯಾ ಗೆಲ್ಲುತ್ತಿಲ್ಲ, ಉಕ್ರೇನ್‌ ಸೋಲುತ್ತಿಲ್ಲ: ನಿಲ್ಲದ ಯುದ್ಧ- ಎರಡೂ ದೇಶಗಳಷ್ಟೇ ಅಲ್ಲದೆ ವಿಶ್ವದ ಆರ್ಥಿಕತೆಗೂ ನಷ್ಟ

--ಮಾಸ್ಕೋ: 2022ರ ಫೆ.24ರಂದು ಆರಂಭವಾದ ರಷ್ಯಾ-ಉಕ್ರೇನ್‌ ಸಮರ ಮಂಗಳವಾರ ಬರೋಬ್ಬರಿ 1,000 ದಿನ ಪೂರೈಸಿದೆ.

ನ್ಯಾಟೋ ಸೇರ್ಪಡೆಗೆ ಉಕ್ರೇನ್‌ ಒಲವು ತೋರಿದ್ದನ್ನು ವಿರೋಧಿಸಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ರ ಆದೇಶದ ಮೇರೆಗೆ ಆರಂಭವಾದ ಈ ಸಮರ ಇದುವರೆಗೆ ಉಭಯ ದೇಶಗಳ ಮೇಲಷ್ಟೇ ಅಲ್ಲದೆ ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರಿದೆ. ಅಪಾರ ಸಾವು-ನೋವು:

ಉಕ್ರೇನ್‌ ಗೌಪ್ಯ ಅಂದಾಜು ಪ್ರಕಾರ 31 ಸಾವಿರ ಸೈನಿಕರು, 80 ಸಾವಿರ ಉಕ್ರೇನಿ ನಾಗರಿಕರು ಸಾವನ್ನಪ್ಪಿದ್ದಾರೆ ಹಾಗೂ 4 ಲಕ್ಷ ಮಂದಿ ಗಾಯಗೊಂಡಿದ್ದಾರೆ. ಆದರೆ ವಿಶ್ವಸಂಸ್ಥೆ ವರದಿಯ ಪ್ರಕಾರ 2024ರ ಆಗಸ್ಟ್‌ವರೆಗೆ ಉಕ್ರೇನ್‌ನಲ್ಲಿ 11,743 ನಾಗರಿಕರು ಸಾವನ್ನಪ್ಪಿದ್ದು, 24,600ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. 589 ಮಕ್ಕಳು ಸಾವನ್ನಪ್ಪಿದ್ದಾರೆ. 60 ಲಕ್ಷ ಮಂದಿ ಉಕ್ರೇನ್‌ ತೊರೆದರೆ, 4 ಲಕ್ಷ ಜನ ಸ್ಥಳಾಂತರಗೊಂಡಿದ್ದಾರೆ. ಇನ್ನು ರಷ್ಯಾದಲ್ಲಿ ಯುದ್ಧದಿಂದ 2 ಲಕ್ಷ ಜನ ಸಾವನ್ನಪ್ಪಿದ್ದಾರೆ ಹಾಗೂ 4 ಲಕ್ಷ ಜನ ಗಾಯಗೊಂಡಿದ್ದಾರೆ ಎಂದು ಪಾಶ್ಚಿಮಾತ್ಯ ಅಂದಾಜುಗಳು ಹೇಳಿವೆ. ಆದರೆ ಅಧಿಕೃತ ಸಂಖ್ಯೆಗಳನ್ನು ರಷ್ಯಾ ಹೇಳುತ್ತಿಲ್ಲ.ವಶವಾದ ಪ್ರದೇಶಗಳು:

ರಷ್ಯಾ ಈಗಾಗಲೇ ಉಕ್ರೇನ್‌ನ ಐದನೇ ಒಂದರಷ್ಟು ಭಾಗವನ್ನು ಆಕ್ರಮಿಸಿಕೊಂಡಿದೆ. ಉಕ್ರೇನ್‌ ಕೂಡ ಪ್ರತಿದಾಳಿ ನಡೆಸುತ್ತಿದ್ದು, ರಷ್ಯಾದ ಗಡಿ ದಾಟಿ ಅಲ್ಲಿನ ಕರ್ಸ್ಕ್‌ ಪ್ರದೇಶದಲ್ಲಿ ದಾಳಿ ನಡೆಸಿದೆ. ಆರ್ಥಿಕತೆ ಮೇಲಿನ ಪರಿಣಾಮ:

ಯುದ್ಧದಿಂದಾಗಿ ಉಕ್ರೇನ್‌ನ ಆರ್ಥಿಕತೆಗೆ ಬಲವಾದ ಪೆಟ್ಟು ಬಿದ್ದಿದೆ. ಶಕ್ತಿ ಮೂಲಸೌಕರ್ಯಗಳ ಮೇಲಿನ ದಾಳಿಗಳಿಂದಾಗಿ ಗೃಹೋಪಯೋಗ ಹಾಗೂ ಕಾರ್ಖಾನೆಗಳಿಗೆ ಬೇಕಾದಷ್ಟು ವಿದ್ಯುತ್‌ ಪೂರೈಸಲು ಸಾಧ್ಯವಾಗುತ್ತಿಲ್ಲ. ಅಂತೆಯೇ ಆಹಾರ ರಫ್ತಿನಲ್ಲೂ ಅಡಚಣೆ ಉಂಟಾಗಿದೆ. 15200 ಕೋಟಿ ಡಾಲರ್‌ನಷ್ಟು (12 ಲಕ್ಷ ಕೋಟಿ ರು.) ಮೂಲಸೌಕರ್ಯಗಳಿಗೆ ಹಾನಿಯಾಗಿದ್ದು, ಅದನ್ನು ಪುನಃ ನಿರ್ಮಿಸಲು 48600 ಕೋಟಿ ಡಾಲರ್‌ (40 ಲಕ್ಷ ಕೋಟಿ ರು.) ಅವಶ್ಯಕತೆ ಇದೆ ಎಂದು ಅಂದಾಜಿಸಲಾಗಿದೆ. ಉಕ್ರೇನ್‌ ಜಿಡಿಪಿಯ ಶೇ.26 ಭಾಗ ಯುದ್ಧಕ್ಕೇ ಮೀಸಲಾಗಿದೆ.

ಅತ್ತ ರಷ್ಯಾ ಮೇಲೆ ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳು ಹಲವು ನಿರ್ಬಂಧಗಳನ್ನು ಹೇರಿದ್ದು, ರಫ್ತಿನಲ್ಲೂ ಇಳಿಕೆಯಾಗಿದೆ.

Share this article