- 10 ಅಣುಬಾಂಬ್‌ಗಳ ತಯಾರಿಸಬಹುದು
- ಅಮೆರಿಕ ಉಪಾಧ್ಯಕ್ಷ ಆತಂಕದ ಮಾಹಿತಿ--
- ಇರಾನ್ ಅಣುಸ್ಥಾವರಗಳ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಮಾಡಿದ್ದವು- ದಾಳಿಗೂ ಮುಂಚೆ ಅಣುಬಾಂಬ್ ತಯಾರಿಸುವ ಯುರೇನಿಯಂ ನಾಪತ್ತೆ
- ಅಣು ಕೇಂದ್ರದ ಬಳಿ ಇದ್ದ 16 ಟ್ರಕ್ ನಾಪತ್ತೆ । ಇವುಗಳಲ್ಲಿ ಸಾಗಣೆ ಶಂಕೆ- ಇರಾನ್ ಈ ಯುರೇನಿಯಂ ಬಳಸಿ ಅಣುಬಾಂಬ್ ತಯಾರಿಸುವ ಆತಂಕ
--ನವದೆಹಲಿ: ಇರಾನ್‌ನ ಅಣು ಕೇಂದ್ರಗಳ ಮೇಲಿನ ಅಮೆರಿಕ ದಾಳಿಯ ಬಳಿಕ ಆ ರಾಷ್ಟ್ರ ಅಣ್ವಸ್ತ್ರ ಹೊಂದಲು ಸಾಧ್ಯವಿಲ್ಲ ಎಂಬ ನಿರಾಳತೆಯನ್ನು ಛಿದ್ರ ಮಾಡುವಂತಹ ಬೆಳವಣಿಗೆಯಾಗಿದೆ. ಯುದ್ಧಕ್ಕೂ ಮೊದಲು ಇರಾನ್‌ನ ಬಳಿ ಇದ್ದ 400 ಕೆ.ಜಿ.ಯಷ್ಟು ಯುರೇನಿಯಂ ನಾಪತ್ತೆಯಾಗಿದೆ. ಈ ಪ್ರಮಾಣದ ಯುರೇನಿಯಂ 10 ಅಣ್ವಸ್ತ್ರಗಳನ್ನು ತಯಾರಿಸಲು ಸಾಕು.
ಈ ಬಗ್ಗೆ ಎಬಿಸಿ ಸುದ್ದಿಸಂಸ್ಥೆಗೆ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವಾನ್ಸ್ ಮಾಹಿತಿ ನೀಡಿದ್ದಾರೆ. ಅಮೆರಿಕ ಇರಾನ್‌ನ ಫೋರ್ಡೋ ಸೇರಿ 3 ಅಣು ಕೇಂದ್ರಗಳ ಮೇಲೆ ಬಂಕರ್ ಬಸ್ಟರ್ ಸುರಿದು ದಾಳಿ ಮಾಡುವ ಮುನ್ನವೇ ಯುರೇನಿಯಂ ಅನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು ಎನ್ನಲಾಗಿದೆ. ಇದನ್ನು ಪುಷ್ಟೀಕರಿಸುವಂತೆ, ಉಪಗ್ರಹ ಚಿತ್ರಗಳಲ್ಲಿ ದಾಳಿಗೂ ಮುನ್ನ ಕಂಡುಬರುತ್ತಿದ್ದ 16 ಟ್ರಕ್‌ಗಳು, ಬಳಿಕ ನಾಪತ್ತೆಯಾಗಿವೆ. ಅವುಗಳಲ್ಲಿ ಏನಿತ್ತು ಮತ್ತು ಎಲ್ಲಿಗೆ ಸಾಗಿಸಲಾಗಿದೆ ಎಂಬುದು ತಿಳಿದುಬಂದಿಲ್ಲ.ಕದನಕ್ಕೂ ಮೊದಲು ಇರಾನ್ ಶೇ.60ರಷ್ಟು ಸಂಸ್ಕರಿಸಿದ ಯುರೇನಿಯಂ ಹೊಂದಿತ್ತು. ಆದರೆ ಅಣ್ವಸ್ತ್ರ ತಯಾರಿಗೆ ಅದನ್ನು ಶೇ.90ರಷ್ಟು ಸಂಸ್ಕರಿಸುವುದು ಅಗತ್ಯ. ಒಂದೊಮ್ಮೆ ಇರಾನ್ ತನ್ನ ಬಳಿಯಿದ್ದ ಯುರೇನಿಯಂ ಅನ್ನು ಸ್ಥಳಾಂತರಿಸಿ ಸುರಕ್ಷಿತ ಸ್ಥಳದಲ್ಲಿ ಇರಿಸಿದ್ದು ನಿಜವೇ ಆದಲ್ಲಿ, ಇಸ್ರೇಲ್ ಮತ್ತು ಅಮೆರಿಕಕ್ಕೆ ಇದರಿಂದ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.