5 ಭಾರತೀಯ ಸಂಗೀತಗಾರರಿಗೆ ಗ್ರ್ಯಾಮಿ ಕಿರೀಟ

KannadaprabhaNewsNetwork | Published : Feb 6, 2024 1:30 AM

ಸಾರಾಂಶ

ಝಾಕೀರ್‌ ಹುಸೇನ್‌, ರಾಕೇಶ್‌ ಚೌರಾಸಿಯಾ, ಶಂಕರ್‌ ಮಹದೇವನ್‌ಗೂ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಸಂಗೀತ ಲೋಕದ ಅತ್ಯುಚ್ಚ ಗೌರವ ನೀಡಲಾಗಿದೆ. ಏಕಕಾಲಕ್ಕೆ 5 ಭಾರತೀಯರಿಗೆ ಪ್ರಶಸ್ತಿ ಇದೇ ಮೊದಲ ಬಾರಿಗೆ ನೀಡಲಾಗಿದೆ.

ಪಿಟಿಐ ನವದೆಹಲಿಪ್ರಸಿದ್ಧ ಸಂಗೀತಗಾರರಾಗಿರುವ ಝಾಕೀರ್‌ ಹುಸೇನ್‌, ರಾಕೇಶ್‌ ಚೌರಾಸಿಯಾ ಹಾಗೂ ಶಂಕರ್‌ ಮಹದೇವನ್‌ ಸೇರಿ ಐವರು ಭಾರತೀಯರಿಗೆ ಜಾಗತಿಕ ಸಂಗೀತ ಕ್ಷೇತ್ರದ ಅತ್ಯುತ್ಕೃಷ್ಟ ಪ್ರಶಸ್ತಿಯಾಗಿರುವ ‘ಗ್ರ್ಯಾಮಿ’ ಲಭಿಸಿದೆ. ಏಕಕಾಲಕ್ಕೆ ಐವರು ಭಾರತೀಯರಿಗೆ ಗ್ರ್ಯಾಮಿ ಲಭಿಸುತ್ತಿರುವುದು ಇದೇ ಮೊದಲು.ತಬಲಾ ಮಾಂತ್ರಿಕರಾಗಿರುವ ಝಾಕೀರ್‌ ಹುಸೇನ್‌ ಅವರಿಗೆ ಒಟ್ಟು 3 ಹಾಗೂ ಪ್ರಸಿದ್ಧ ಕೊಳಲುವಾದಕ ಹರಿಪ್ರಸಾದ್‌ ಚೌರಾಸಿಯಾ ಅವರ ಬಂಧುವೂ ಆಗಿರುವ ರಾಕೇಶ್‌ ಚೌರಾಸಿಯಾ ಅವರಿಗೆ 2 ಪುರಸ್ಕಾರಗಳು ದೊರೆತಿವೆ. ಉಳಿದಂತೆ ಶಂಕರ ಮಹದೇವನ್‌, ಗಣೇಶ್‌ ರಾಜಗೋಪಾಲನ್‌ ಹಾಗೂ ಸೆಲ್ವಗಣೇಶ್‌ ವಿನಾಯಕರಾಮ್‌ ಅವರಿಗೆ ತಲಾ ಒಂದು ಪ್ರಶಸ್ತಿ ಸಿಕ್ಕಿವೆ.ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಭಾನುವಾರ ರಾತ್ರಿ ನಡೆದ ಸಮಾರಂಭದಲ್ಲಿ ಈ ಗೌರವಗಳನ್ನು ಪ್ರದಾನ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟರ್‌ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ‘ಭಾರತಕ್ಕೆ ಹೆಮ್ಮೆಯಾಗುತ್ತಿದೆ. ಸಂಗೀತ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂದು ಬಯಸಿರುವ ನವಪೀಳಿಗೆಗೆ ಇದು ಪ್ರೇರಣೆಯಾಗುತ್ತದೆ’ ಎಂದು ಮೋದಿ ಅವರು ಮೆಚ್ಚುಗೆ ಸೂಚಿಸಿದ್ದಾರೆ.ಮೂರು ಬಾರಿ ಗ್ರ್ಯಾಮಿ ವಿಜೇತರಾಗಿರುವ ಬೆಂಗಳೂರಿನ ಸಂಗೀತ ನಿರ್ದೇಶಕ ರಿಕಿ ಕೇಜ್‌ ಕೂಡ ಲಾಸ್‌ ಏಂಜಲೀಸ್‌ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಗ್ರ್ಯಾಮಿ ಸಮಾರಂಭದಲ್ಲಿ ಇದು ಭಾರತದ ವರ್ಷ. ಭಾರತ ನಿಜಕ್ಕೂ ಪ್ರಕಾಶಿಸುತ್ತಿದೆ. ಒಂದೇ ವರ್ಷದಲ್ಲಿ ಐವರು ಭಾರತೀಯರಿಗೆ ಪ್ರಶಸ್ತಿ ಸಿಕ್ಕಿದ್ದಕ್ಕೆ ರೋಮಾಂಚನವಾಗುತ್ತಿದೆ ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.ಯಾವುದಕ್ಕೆ ಪುರಸ್ಕಾರ?:ಝಾಕೀರ್‌ ಹುಸೇನ್‌, ಶಂಕರ ಮಹದೇವನ್‌, ಪಿಟೀಲುವಾದಕ ಗಣೇಶ್‌ ರಾಜಗೋಪಾಲನ್‌ ಹಾಗೂ ತಾಳವಾದ್ಯಕ ಸೆಲ್ವಗಣೇಶ್‌ ವಿನಾಯಕರಾಮ್‌ ಅವರನ್ನು ಒಳಗೊಂಡ ಶಕ್ತಿ ಎಂಬ ಫ್ಯೂಷನ್‌ ಸಂಗೀತ ಗುಂಪು ಹೊರತಂದಿರುವ ‘ದಿಸ್‌ ಮೊಮೆಂಟ್‌’ಗೆ ಅತ್ಯುತ್ತಮ ಜಾಗತಿಕ ಆಲ್ಬಂ ಪುರಸ್ಕಾರ ಲಭ್ಯವಾಗಿದೆ.ಝಾಕೀರ್‌ ಹುಸೇನ್‌ ಅವರ ‘ಪಾಶ್ತೋ’ಗಾಗಿ ಅತ್ಯುತ್ತಮ ಜಾಗತಿಕ ಸಂಗೀತ ಕಾರ್ಯಕ್ರಮ ಮತ್ತು ‘ಆ್ಯಸ್‌ ವಿ ಸ್ಪೀಕ್‌’ಗೆ ಅತ್ಯುತ್ತಮ ಸಮಕಾಲೀನ ಆಲ್ಬಮ್‌ ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ. ‘ಆ್ಯಸ್‌ ವಿ ಸ್ಪೀಕ್‌’ ಆಲ್ಬಂನಲ್ಲಿ ರಾಕೇಶ್‌ ಚೌರಾಸಿಯಾ ಕೂಡ ಇರುವ ಕಾರಣ ಅವರಿಗೂ ಪುರಸ್ಕಾರ ಸಂದಿದೆ. ರಾಕೇಶ್‌ ಅವರಿಗೆ ಮತ್ತೊಂದು ಆಲ್ಬಂನಿಂದಲೂ ಪ್ರಶಸ್ತಿ ಸಿಕ್ಕಿದೆ.

Share this article