75 ವರ್ಷದ ದಾಖಲೆ ಮಳೆಗೆ ದುಬೈ ತತ್ತರ

ಮರಳುಗಾಡು ಹಾಗೂ ಹೆಚ್ಚಾಗಿ ಮಳೆಯನ್ನೇ ಕಾಣದ ಗಲ್ಫ್‌ನ ಪ್ರಮುಖ ದೇಶವಾದ ಯುಎಇ ಈಗ ಮಳೆಯಿಂದ ತತ್ತರಿಸಿ ಹೋಗಿದೆ.

KannadaprabhaNewsNetwork | Published : Apr 17, 2024 8:45 PM IST / Updated: Apr 18 2024, 04:16 AM IST

ದುಬೈ: ಮರಳುಗಾಡು ಹಾಗೂ ಹೆಚ್ಚಾಗಿ ಮಳೆಯನ್ನೇ ಕಾಣದ ಗಲ್ಫ್‌ನ ಪ್ರಮುಖ ದೇಶವಾದ ಯುಎಇ ಈಗ ಮಳೆಯಿಂದ ತತ್ತರಿಸಿ ಹೋಗಿದೆ. ಯುಎಇನ ಪ್ರಮುಖ ನಗರವಾದ ದುಬೈನಲ್ಲಿ 1949ರ ನಂತರದ (75 ವರ್ಷದ) ಗರಿಷ್ಠ ಮಳೆ ಸೋಮವಾರ ಹಾಗೂ ಮಂಗಳವಾರ ಸುರಿದಿದ್ದು, ನಗರವನ್ನು ಮುಳುಗುವಂತೆ ಮಾಡಿದೆ. ಬುಧವಾರ ಮಳೆ ಕ್ಷೀಣವಾಗಿದ್ದು, ನೀರನ್ನು ಹೊರಹಾಕಿ ನಗರವನ್ನು ಸಹಜ ಸ್ಥಿತಿಗೆ ತರುವ ಯತ್ನಗಳು ನಡೆದಿವೆ.

ಇಷ್ಟೊಂದು ಮಳೆ ಏಕಾಏಕಿ ಬೀಳಲು ಕಾರಣ ಯುಎಇ ಸರ್ಕಾರ ನಡೆಸಿದ ಮೋಡಬಿತ್ತನೆ. ದುಬೈ ಹೆಚ್ಚಾಗಿ ಸಮುದ್ರದ ಉಪ್ಪು ನೀರನ್ನು ಶುದ್ಧೀಕರಿಸಿ ಕುಡಿಯಲು ಬಳಸಿಕೊಳ್ಳುತ್ತದೆ. ಅಂತರ್ಜಲವು ನಗರದಲ್ಲಿ ತುಂಬಾ ಕ್ಷೀಣ. ಹೀಗಾಗಿ ಅಂತರ್ಜಲ ಹೆಚ್ಚಬೇಕು ಎಂದು ಆಗಾಗ ಅದು ಮೋಡ ಬಿತ್ತನೆ ಕೈಗೊಳ್ಳುತ್ತದೆ. 3 ದಿನದ ಹಿಂದಷ್ಟೇ ಅದು 7 ವಿಮಾನಗಳನ್ನು ಹಾರಿಸಿ ಆ ಮೂಲಕ ಮೋಡಗಳಿಗೆ ರಾಸಾಯನಿಕಗಳನ್ನು ಹಾಕಿ ಮೋಡ ಬಿತ್ತನೆ ಮಾಡಿತ್ತು. ಇದರ ಫಲವಾಗಿ ಅಂದುಕೊಂಡಿದ್ದಕ್ಕಿಂತ ಹೆಚ್ಚು ಮಳೆ ಸುರಿದು ಜನ ಕಂಗಾಲಾಗುವಂತೆ ಮಾಡಿದೆ.

ಎಷ್ಟು ಮಳೆ?:

ಸೋಮವಾರ ಹಾಗೂ ಮಂಗಳವಾರದ 2 ದಿನಗಳ ಅವಧಿಯಲ್ಲಿ ದುಬೈನಲ್ಲಿ ಸುಮಾರು 25 ಸೆಂ.ಮೂ. ಮಳೆ ಸುರಿದಿದೆ. ಇದು 1949ರ ನಂತರದ ದಾಖಲೆ ಎಂದು ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ ಮಳೆಯನ್ನೇ ಕಾಣದ ದುಬೈ ಇಷ್ಟು ಮಳೆ ಆದರೆ ತಾಳಬಲ್ಲ ಮೂಲಸೌಕರ್ಯ ಹೊಂದಿಲ್ಲ. ಹೀಗಾಗಿ ವಿಮಾನ ನಿಲ್ದಾಣ, ನಗರದ ಪ್ರಮುಖ ಭಾಗಗಳು ಸೇರಿ ಅನೇಕ ಪ್ರದೇಶಗಳು ಮುಳುಗಡೆ ಆಗಿ ಜನಜೀವನ ತತ್ತರಿಸಿ ಹೋಗಿದೆ.

ರಸ್ತೆ, ನಿಲ್ದಾಣಗಳಲ್ಲೇ ಜನರ ಶಯನ:

ಏಕಾಏಕಿ ಪ್ರವಾಹದ ಕಾರಣ ಮಂಗಳವಾರ ದುಬೈ ಜನಜೀವನ ದುಸ್ತರವಾಯಿತು. ವಿಮಾನ, ರಸ್ತೆ, ಮೆಟ್ರೋ, ರೈಲು ಸಂಚಾರ ಸ್ಥಗಿತವಾದ ಕಾರಣ ಜನರು ಏರ್‌ಪೋರ್ಟ್‌, ಬಸ್ ನಿಲ್ದಾಣ, ಮೆಟ್ರೋ ಹಾಗೂ ರೈಲು ನಿಲ್ದಾಣಗಳಲ್ಲೇ ಮಲಗಿದ್ದು ಗೋಚರಿಸಿತು.

ಇದರ ನಡುವೆ ಬುಧವಾರ ಪ್ರವಾಹದ ನೀರನ್ನು ತೆಗೆದು ಜನಜೀವನ ಸಹಜ ಸ್ಥಿತಿಗೆ ತರುವ ಯತ್ನಗಳು ನಡೆದಿವೆ.

ಮಧ್ಯಪ್ರಾಚ್ಯದಲ್ಲೂ ಮಳೆ:

ಈ ನಡುವೆ, ಬಿರುಗಾಳಿ ಕಾಣ ಬಹ್ರೇನ್‌, ಓಮಾನ್‌, ಖತಾರ್‌, ಸೌದಿ ಅರೇಬಿಯಾದಲ್ಲೂ ಮಳೆ ಆಗಿದೆ. ಆದರೆ ಅಲ್ಲಿ ಹೆಚ್ಚು ಅನಾಹುತ ಆಗಿಲ್ಲ,

ಪಾಕ್‌ನಲ್ಲಿ ಮಳೆಗೆ 4 ದಿನದಲ್ಲಿ 63 ಬಲಿ

ಪೇಶಾವರ: ಮಿಂಚು ಮತ್ತು ಭಾರೀ ಮಳೆಯಿಂದಾಗಿ ಪಾಕಿಸ್ತಾನದಲ್ಲಿ ಬುಧವಾರ ಒಂದೇ ದಿನ 14 ಸಾವುಗಳು ಸಂಭವಿಸಿವೆ. ಇದರಿಂದಾಘಿ ನಾಲ್ಕು ದಿನಗಳ ಹವಾಮಾನ ವೈಪರೀತ್ಯದಿಂದ ಪಾಕ್‌ನಲ್ಲಿ ಮಳೆಗೆ 63 ಜನ ಬಲಿ ಆದಂತಾಗಿದೆ.

ದಶಕಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ದೇಶದ ನೈಋತ್ಯ ಕರಾವಳಿಯ ಹಳ್ಳಿಗಳು ಜಲಾವೃತಗೊಂಡಿವೆ. ನೆರೆಯ ಅಫ್ಘಾನಿಸ್ತಾನದಲ್ಲಿ ಪ್ರವಾಹವು ಹತ್ತಾರು ಜನರನ್ನು ಕೊಂದಿದೆ.

ಪಾಕಿಸ್ತಾನದಲ್ಲಿ, ದೇಶದ ವಾಯುವ್ಯದಲ್ಲಿರುವ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಿಂದ ಹೆಚ್ಚಿನ ಸಾವುಗಳು ವರದಿಯಾಗಿವೆ. ಕಟ್ಟಡಗಳು ಕುಸಿದು 15 ಮಕ್ಕಳು ಮತ್ತು ಐದು ಮಹಿಳೆಯರು ಸೇರಿದಂತೆ 32 ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಮನೆಗಳು ಬಿದ್ದವೆ. ಪಂಜಾಬ್‌ನಲ್ಲಿ 21 ಸಿಡಿಲು ಘಟನೆಗಳು ನಡೆದಿವೆ.

Share this article