ನವದೆಹಲಿ: ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ 2019ರಲ್ಲಿ ಪಾಕಿಸ್ತಾನದಲ್ಲಿ ಸೆರೆಯಾಗಿದ್ದ ಸಮಯದಲ್ಲಿ, ಪಾಕ್ ಮೇಲೆ ಹಾರಿಸಲು ಭಾರತ 9 ಕ್ಷಿಪಣಿಗಳನ್ನು ಸಿದ್ಧವಾಗಿಟ್ಟುಕೊಂಡಿತ್ತು. ಇದರಿಂದ ಭಯಗೊಂಡ ಪಾಕಿಸ್ತಾನ ಅಂದಿನ ಪ್ರಧಾನಿ ಇಮ್ರಾನ್ ಖಾನ್ ಮಧ್ಯರಾತ್ರಿ ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುವ ಇಂಗಿತ ವ್ಯಕ್ತಪಡಿಸಿದ್ದರು.
ಅದು ಸಾಧ್ಯವಾಗದೇ ಹೋದಾಗ ವಿಧಿಯಿಲ್ಲದೆ ಅಭಿನಂದನ್‌ರನ್ನು ಬಂಧಮುಕ್ತಗೊಳಿಸಿದರು ಎಂಬ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ.ಪಾಕಿಸ್ತಾನದ ಅಂದಿನ ಭಾರತೀಯ ರಾಯಭಾರಿ ಅಜಯ್ ಬಿಸಾರಿಯಾ, ‘ಆ್ಯಂಗರ್ ಮ್ಯಾನೇಜ್‌ಮೆಂಟ್: ದ ಟ್ರಬಲ್ಡ್ ಡಿಪ್ಲೋಮ್ಯಾಟಿಕ್ ರಿಲೇಶನ್‌ಶಿಪ್ ಬಿಟ್ವೀನ್ ಇಂಡಿಯಾ ಅಂಡ್ ಪಾಕಿಸ್ತಾನ್’ ಎಂಬ ಪುಸ್ತಕ ಬರೆದಿದ್ದು, ಅದರಲ್ಲಿ ಈ ಮಾಹಿತಿ ಇದೆ.
‘ಬಾಲಾಕೋಟ್ ವಾಯುದಾಳಿ ಬಳಿಕ ಪಾಕಿಸ್ತಾನದಲ್ಲಿ ಲ್ಯಾಂಡ್ ಆಗಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ಸೇನೆ ಬಂಧಿಸಿತ್ತು. ಈ ವೇಳೆ ಉಭಯ ದೇಶಗಳ ನಡುವೆ ಹಲವು ರಾಜತಾಂತ್ರಿಕ ಮಾತುಕತೆಗಳು ನಡೆದರೂ, 2019ರ ಫೆ.26ರಿಂದ 28ರವರೆಗಿನ ಮೂರು ದಿನದಲ್ಲಿ ಪಾಕಿಸ್ತಾನದ ಮೇಲೆ ಹಾರಿಸಲು ಭಾರತ 9 ಕ್ಷಿಪಣಿಗಳನ್ನು ಸಿದ್ಧವಾಗಿಟ್ಟುಕೊಂಡಿತ್ತು.
ಈ ವಿಷಯ ಪಾಕಿಸ್ತಾನದ ಸೇನೆಗೆ ಗೊತ್ತಾಗುತ್ತಿದ್ದಂತೆ, ಹೆದರಿದ ಪಾಕಿಸ್ತಾನದ ಅಂದಿನ ಪ್ರಧಾನಿ ಇಮ್ರಾನ್ ಖಾನ್ ಮಧ್ಯರಾತ್ರಿ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಲು ಉತ್ಸುಕತೆ ತೋರಿದ್ದರು. ತಕ್ಷಣವೇ ರಾಯಭಾರಿ ಕಚೇರಿ ಭಾರತವನ್ನು ಸಂಪರ್ಕಿಸಲು ಪ್ರಯತ್ನಿಸಿತ್ತು’ ಎಂಬ ಮಾಹಿತಿ ಪುಸ್ತಕದಲ್ಲಿದೆ.
‘ಫೆ.28ರ ಮಧ್ಯರಾತ್ರಿ ಇಸ್ಲಾಮಾಬಾದ್‌ನಲ್ಲಿದ್ದ ಮುಖ್ಯ ರಾಯಭಾರಿ ಅಧಿಕಾರಿ ಸೋಹೈಲ್ ಮೊಹಮ್ಮದ್ ನನಗೆ ಕರೆ ಮಾಡಿ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಈ ಕೂಡಲೇ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಲು ಬಯಸುತ್ತಿದ್ದಾರೆ ಎಂದು ನನಗೆ ತಿಳಿಸಿದರು. ನಾನು ‘ಮೋದಿ ಅವರು ಅಂದು ಬಿಡುವಾಗಿಲ್ಲ’ ಎಂದು ತಿಳಿಸಿದ್ದೆ. ಇದು ಪಾಕಿಸ್ತಾನ ಎಷ್ಟು ಹೆದರಿತ್ತು ಎಂಬುದನ್ನು ತೋರಿಸುತ್ತದೆ’ ಎಂದು ಅವರು ಹೇಳಿದ್ದಾರೆ.
ಖತಲ್ ಕೀ ರಾತ್ ಎಂದಿದ್ದ ಮೋದಿ: ಇದೇ ವೇಳೆ ಅಭಿನಂದನ್‌ರನ್ನು ಪಾಕ್ ಸೆರೆ ಹಿಡಿದ 2019ರ ಫೆ.27ರ ರಾತ್ರಿಯನ್ನು ಪ್ರಧಾನಿ ನರೇಂದ್ರ ಮೋದಿ ‘ಖತಲ್ ಕೀ ರಾತ್’ (ರಕ್ತದೋಕುಳಿಯ ರಾತ್ರಿ) ಎಂದು ಸಂಬೋಧಿಸಿದ್ದರು ಎಂದು ಪುಸ್ತಕ ಹೇಳಿದೆ.