ಕೆನಡಾ, ಅಮೆರಿಕಾ ಬಳಿಕ ಈಗ ಖಲಿಸ್ತಾನಿಗೆ ಬ್ರಿಟನ್‌ ಬೆಂಬಲ? ಖಲಿಸ್ತಾನಿ ನಂಟಿನ ಸಿಖ್ಖ ಸಂಘಟನೆಗೆ ಸಚಿವ ಪತ್ರ

KannadaprabhaNewsNetwork | Updated : Dec 24 2024, 03:17 AM IST

ಸಾರಾಂಶ

‘ಯಾವುದೇ ಬ್ರಿಟಿಷ್‌ ನಾಗರಿಕರಿಗೆ ಬಾಹ್ಯ ದೇಶಗಳು ಕಿರುಕುಳ ಹಾಗೂ ಬೆದರಿಕೆ ನೀಡುವುದನ್ನು ನಾವು ಸಹಿಸುವುದಿಲ್ಲ. ನಾವು ನಮ್ಮ ನಾಗರಿಕರಿಗೆ ರಕ್ಷಣೆ ನೀಡುತ್ತೇವೆ’ ಎಂದು ಬ್ರಿಟನ್‌ ಭದ್ರತಾ ಸಚಿವ ಡಾನ್ ಜಾರ್ವಿಸ್ ಹೇಳಿದ್ದಾರೆ.

ಲಂಡನ್: ‘ಯಾವುದೇ ಬ್ರಿಟಿಷ್‌ ನಾಗರಿಕರಿಗೆ ಬಾಹ್ಯ ದೇಶಗಳು ಕಿರುಕುಳ ಹಾಗೂ ಬೆದರಿಕೆ ನೀಡುವುದನ್ನು ನಾವು ಸಹಿಸುವುದಿಲ್ಲ. ನಾವು ನಮ್ಮ ನಾಗರಿಕರಿಗೆ ರಕ್ಷಣೆ ನೀಡುತ್ತೇವೆ’ ಎಂದು ಬ್ರಿಟನ್‌ ಭದ್ರತಾ ಸಚಿವ ಡಾನ್ ಜಾರ್ವಿಸ್ ಹೇಳಿದ್ದಾರೆ. ಬ್ರಿಟನ್‌ನಲ್ಲಿ ನೆಲೆಸಿರುವ ಹಲವು ಖಲಿಸ್ತಾನಿ ಬೆಂಬಲಿತ ಸಿಖ್ಖರು, ‘ನಮ್ಮನ್ನು ಭಾರತ ಸರ್ಕಾರ ಅಥವಾ ಪರವಾಗಿ ಟಾರ್ಗೆಟ್ ಮಾಡಲಾಗುತ್ತಿದೆ’ ಎಂದು ದೂರು ಸಲ್ಲಿಸಿದ್ದರು. ಅದರ ಬೆನ್ನಲ್ಲೇ ಈ ಹೇಳಿಕೆಗಳು ಬಂದಿವೆ.

ಖಲಿಸ್ತಾನಿ ಉಗ್ರರನ್ನು ಬೆಂಬಲಿಸುವ ಕೆನಡಾ ಮತ್ತು ಅಮೆರಿಕ ಸಿಖ್ ಸಂಘಟನೆಗಳು ಇದೇ ರೀತಿಯ ಆರೋಪ ಮಾಡಿದ್ದವು ಹಾಗೂ ಆ ದೇಶಗಳ ಸರ್ಕಾರಗಳು ಅವರ ಪರ ನಿಂತಿದ್ದವು. ಈಗ ಇಂಥ ಸಂಘಟನೆಗಳಿಗೆ ನೆರವು ನೀಡುತ್ತಿರುವ 3ನೇ ದೇಶ ಬ್ರಿಟನ್‌ ಎನ್ನಿಸಿಕೊಂಡಿದೆ ಎಂದು ಈಗಿನ ವಿದ್ಯಮಾನದ ಬಳಿಕ ಅನಿಸಿಕೆ ವ್ಯಕ್ತವಾಗಿದೆ.

ಆಗಿದ್ಧೇನು?:

ಭಾರತ ಸರ್ಕಾರದೊಂದಿಗೆ ಸಂಬಂಧ ಹೊಂದಿರುವ ಅಧಿಕಾರಿಗಳು ಬ್ರಿಟನ್‌ ವಿಮಾನ ನಿಲ್ದಾಣಗಳಲ್ಲಿ ನಮ್ಮನ್ನು ಪ್ರಶ್ನಿಸುತ್ತಿದ್ದಾರೆ ಎಂದು ಸಿಖ್ಖರು ದೂರಿದ್ದರು. ಈ ಸಂಬಂಧ ಖಲಿಸ್ತಾನಿ ಅಂಗಸಂಸ್ಥೆಗಳೊಂದಿಗೆ ನಂಟು ಹೊಂದಿರುವ

‘ಸಿಖ್ ಫೆಡರೇಶನ್‌’ಗೆ ಪತ್ರ ಬರೆದಿರುವ ಸಚಿವ ಜಾರ್ವಿಸ್‌, ಅವರಿಗೆ ರಕ್ಷಣೆಯ ಭರವಸೆ ನೀಡಿದ್ದಾರೆ.

‘ನಾವು ಯಾವುದೇ ಬೆದರಿಕೆ ಅಥವಾ ಜೀವ ಬೆದರಿಕೆಗಳನ್ನು ಸಹಿಸುವುದಿಲ್ಲ ಮತ್ತು ನಮ್ಮ ಗುಪ್ತಚರ ಸಂಸ್ಥೆಗಳು ಮತ್ತು ಪೊಲೀಸ್ ಪಡೆಗಳ ಮೂಲಕ ಜನರನ್ನು ಸುರಕ್ಷಿತವಾಗಿ ಇರಿಸಲು ಎಲ್ಲ ಕ್ರಮ ಜರುಗಿಸುತ್ತೇವೆ. ಯಾವುದೇ ವಿದೇಶಿ ಶಕ್ತಿಗಳ ಪ್ರಯತ್ನಗಳನ್ನು ನಾವು ಸಹಿಸಲ್ಲ’ ಎಂದು ಡಿ.10ರಂದು ಪತ್ರ ಬರೆದಿದ್ದಾರೆ.

ಅಲ್ಲದೆ, ಕೆನಡಾದಲ್ಲಿ ನಡೆದಿರುವ ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆ ತನಿಖೆಗೆ ಭಾರತ ಸಹಕರಿಸಬೇಕು ಎಂದೂ ಜಾರ್ವಿಸ್‌ ಆಗ್ರಹಿಸಿದ್ದಾರೆ.

ಬ್ರಿಟನ್‌ನಲ್ಲಿ 5,35,000 (ಬ್ರಿಟಿಷ್ ಜನಸಂಖ್ಯೆಯ ಶೇ0.8ರಷ್ಟು) ಸಿಖ್ಖರಿದ್ದಾರೆ.

ಸಿಬಲ್‌ ಕಿಡಿ:

ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಕನ್ವಲ್ ಸಿಬಲ್ ಮಾತನಾಡಿ, ‘ಭಾರತದ ಸಾರ್ವಭೌಮತೆಗೆ ಬೆದರಿಕೆ ಹಾಕಲು ಬ್ರಿಟನ್‌ ಅಧಿಕಾರಿಗಳು, ಖಲಿಸ್ತಾನಿ ಉಗ್ರಗಾಮಿಗಳು ಮತ್ತು ಬ್ರಿಟನ್‌ನಲ್ಲಿನ ಕಾರ್ಯಕರ್ತರನ್ನು ಬಹಳ ಹಿಂದಿನಿಂದಲೂ ಪ್ರೋತ್ಸಾಹಿಸಿದ್ದಾರೆ’ ಎಂದಿದ್ದಾರೆ.

Share this article