ವಿಶ್ವಸಂಸ್ಥೆ ಭಾರತದ ಧ್ಯಾನಕ್ಕೂ ಮನ್ನಣೆ ನೀಡಿ ಶ್ರೀ ಶ್ರೀ ನೇತೃತ್ವದಲ್ಲಿ ವಿಶ್ವದ ಮೊದಲ ಧ್ಯಾನ ದಿನ

KannadaprabhaNewsNetwork |  
Published : Dec 22, 2024, 01:33 AM ISTUpdated : Dec 22, 2024, 04:02 AM IST
ಶ್ರೀ ಶ್ರೀ | Kannada Prabha

ಸಾರಾಂಶ

ಭಾರತದ ಯೋಗ ಪರಂಪರೆಗೆ ಈ ಹಿಂದೆ ಮನ್ನಣೆ ನೀಡಿದ್ದ ವಿಶ್ವಸಂಸ್ಥೆ ಇದೀಗ ಭಾರತದ ಧ್ಯಾನಕ್ಕೂ ಮನ್ನಣೆ ನೀಡಿದೆ. ಕನ್ನಡಿಗ ಶ್ರೀ ಶ್ರೀ ರವಿಶಂಕರ್‌ ಗುರೂಜಿ ನೇತೃತ್ವದಲ್ಲಿ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಮೊದಲ ವಿಶ್ವ ಧ್ಯಾನ ದಿನ ಘೋಷಣೆ ಮಾಡಲಾಗಿದ್ದು,  ಶನಿವಾರ ವಿಶ್ವಾದ್ಯಂತ ಆಚರಿಸಲಾಗಿದೆ.

ವಿಶ್ವಸಂಸ್ಥೆ :  ಭಾರತದ ಯೋಗ ಪರಂಪರೆಗೆ ಈ ಹಿಂದೆ ಮನ್ನಣೆ ನೀಡಿದ್ದ ವಿಶ್ವಸಂಸ್ಥೆ ಇದೀಗ ಭಾರತದ ಧ್ಯಾನಕ್ಕೂ ಮನ್ನಣೆ ನೀಡಿದೆ. ಕನ್ನಡಿಗ ಶ್ರೀ ಶ್ರೀ ರವಿಶಂಕರ್‌ ಗುರೂಜಿ ನೇತೃತ್ವದಲ್ಲಿ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮೊದಲ ವಿಶ್ವ ಧ್ಯಾನ ದಿನ ಘೋಷಣೆ ಮಾಡಲಾಗಿದ್ದು, ಮೊದಲ ದಿನವನ್ನು ಶನಿವಾರ ವಿಶ್ವಾದ್ಯಂತ ಆಚರಿಸಲಾಗಿದೆ.

ಮೊದಲ ದಿನದ ವಿಶ್ವ ಧ್ಯಾನದ ಆಚರಣೆಯಲ್ಲಿ ವಿಶ್ವದ ನೂರಾರು ದೇಶಗಳ 85 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗಿದ್ದು ಗಿನ್ನೆಸ್‌ ದಾಖಲೆ ಪುಟಕ್ಕೆ ಸೇರಿದೆ.

ಭಾರತ ಮತ್ತು ವಿಶ್ವಸಂಸ್ಥೆ ಸಹಭಾಗಿತ್ವದಲ್ಲಿ ‘ಜಾಗತಿಕ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಧ್ಯಾನ’ ಎಂಬ ಘೋಷ ವಾಕ್ಯದಡಿ ಮೊದಲ ಬಾರಿಗೆ ವಿಶ್ವ ಧ್ಯಾನ ದಿನವನ್ನು ಶನಿವಾರ ಆಚರಿಸಲಾಯಿತು. ಈ ಮೂಲಕ ಮುಂದಿನ ವರ್ಷಗಳಲ್ಲಿ ಡಿ.21ರಂದು ವಿಶ್ವ ಧ್ಯಾನ ದಿನ ಆಚರಣೆಗೆ ಮುನ್ನುಡಿ ಬರೆಯಲಾಗಿದೆ. ಬಳಿಕ ಶ್ರೀ ಶ್ರೀ ನೇತೃತ್ವದಲ್ಲಿ ಧ್ಯಾನ ಕಾರ್ಯಕ್ರಮ ನಡೆಸಲಾಗಿದೆ.

ವಿಶ್ವ ಧ್ಯಾನ ದಿನ ಘೋಷಣೆ ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗುರುದೇವ್ ಶ್ರೀ ಶ್ರೀ ರವಿಶಂಕರ್, ‘ಒಂದು ಪ್ರಶಾಂತವಾದ ಮನಸ್ಸು ಇತರ ನೂರು ಜನರಿಗೆ ಉತ್ತಮವಾದ ವಾತಾವರಣ ಸೃಷ್ಟಿಸಬಲ್ಲದು. ಸಾಮೂಹಿಕ ಒಳಿತಿಗಾಗಿ, ಸಾಮರಸ್ಯಕ್ಕಾಗಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಗಾಗಿ ವ್ಯಕ್ತಿಗಳು ಹಾಗೂ ರಾಷ್ಟ್ರಗಳು ಧ್ಯಾನವನ್ನು ಆಲಿಂಗಿಸಬೇಕು’ ಎಂದು ಕರೆ ನೀಡಿದರು.ದಿನನಿತ್ಯದ ಜೀವನದಲ್ಲಿ ಧ್ಯಾನವನ್ನು ಅಳವಡಿಸಿಕೊಳ್ಳಲೇಬೇಕಾದ ತುರ್ತು ಸ್ಥಿತಿ ಈಗ ಬಂದಾಗಿದೆ ಎಂದ ಅವರು ‘ಧ್ಯಾನವು ಪ್ರತಿಯೊಂದು ವ್ಯಕ್ತಿಗೂ, ಪ್ರತಿಯೊಂದು ಮನೆಗೂ ತಲುಪಬೇಕು. ಇದು ಆಧುನಿಕ ದಿನದ ಸವಾಲುಗಳಾದ ಆತಂಕ, ಕೌಟುಂಬಿಕ ಹಿಂಸಾಚಾರ, ಮಾದಕ ಚಟಗಳಿಂದ ಹೊರಬರುವ ದಾರಿಯಾಗಿದೆ. ಧ್ಯಾನವು ಧರ್ಮಗಳನ್ನು, ಭೂಮಿಯ ಗಡಿಗಳನ್ನು, ವಯೋಮಿತಿಗಳನ್ನು ಮೀರಿರುವಂತದ್ದು. ಇದರಿಂದಾಗಿ ಧ್ಯಾನವು ಜಾಗತಿಕವಾಗಿ ಪ್ರಸಕ್ತವಾಗಿದೆ. ಪ್ರತಿಯೊಂದು ರಾಷ್ಟ್ರವೂ ಸಹ ತನ್ನ ಪ್ರಜೆಗಳಿಗೆ ಹೇಗೆ ವಿಶ್ರಮಿಸುವುದು, ತಮ್ಮ ಭಾವನೆಗಳನ್ನು ಹೇಗೆ ನಿಭಾಯಿಸುವುದು ಎಂಬುದರ ಬಗ್ಗೆ ಪ್ರಶಿಕ್ಷಣವನ್ನು ನೀಡಿದರೆ, ಈ ಜಗತ್ತು ಬಹಳ ಉತ್ತಮವಾದ ಸ್ಥಳವಾಗುತ್ತದೆ’ ಎಂದು ಹೇಳಿದರು.

ಮೂರು ದಾಖಲೆ:

ಶ್ರೀ ಶ್ರೀ ನೇತೃತ್ವದ ಆರ್ಟ್‌ ಆಫ್‌ ಲಿವಿಂಗ್‌ ನೇತೃತ್ವದಲ್ಲಿ ಶನಿವಾರ ವಿಶ್ವಾದ್ಯಂತ ಧ್ಯಾನ ದಿನ ಆಚರಿಸಲಾಯಿತು. ಆನ್‌ಲೈನ್‌ ಮತ್ತು ಆಫ್‌ಲೈನ್‌ ಮೂಲಕ ನಡೆದ ಕಾರ್ಯಕ್ರಮದಲ್ಲಿ 85 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಂಡರು. ಶನಿವಾರದ ಕಾರ್ಯಕ್ರಮವು ಗಿನ್ನೆಸ್ ವಿಶ್ವ ದಾಖಲೆ, ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಮತ್ತು ವಿಶ್ವದಾಖಲೆ ದಾಖಲೆಗಳ ಪುಟ ಸೇರುವಲ್ಲಿ ಯಶಸ್ವಿಯಾಗಿದೆ.

ಧರ್ಮ, ಜಾತಿ, ಗಡಿ ಮೀರಿದೆ ಧ್ಯಾನ

ಧ್ಯಾನವು ಧರ್ಮ, ಭೂಮಿಯ ಗಡಿ, ವಯೋಮಿತಿಗಳನ್ನು ಮೀರಿರುವಂತದ್ದು. ಹೀಗಾಗಿ ಧ್ಯಾನವು ಜಾಗತಿಕವಾಗಿ ಪ್ರಸಕ್ತವಾಗಿದೆ. ಪ್ರತಿಯೊಂದು ರಾಷ್ಟ್ರವೂ ತನ್ನ ಪ್ರಜೆಗಳಿಗೆ ಹೇಗೆ ವಿಶ್ರಮಿಸುವುದು, ತಮ್ಮ ಭಾವನೆಗಳನ್ನು ಹೇಗೆ ನಿಭಾಯಿಸುವುದು ಎಂಬುದರ ಬಗ್ಗೆ ಪ್ರಶಿಕ್ಷಣವನ್ನು ನೀಡಿದರೆ, ಈ ಜಗತ್ತು ಬಹಳ ಉತ್ತಮವಾದ ಸ್ಥಳವಾಗುತ್ತದೆ.

- ಶ್ರೀ ಶ್ರೀ ರವಿಶಂಕರ ಗುರೂಜಿ

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಉಗ್ರರಿಗೆ ಹೆದರಿ ಹೊಸ ವರ್ಷಾಚರಣೆಯೇ ರದ್ದು
ಬಾಂಗ್ಲಾ ಹಿಂದು ವ್ಯಕ್ತಿ ಹತ್ಯೆ : 7 ಮಂದಿ ಸೆರೆ