‘ಮೇಡ್‌ ಇನ್‌ ಚೀನಾ’ ಅಸ್ತ್ರಗಳು ಈಗ ವೆನಿಜುವೆಲಾದಲ್ಲೂ ಫೇಲ್‌!

KannadaprabhaNewsNetwork |  
Published : Jan 09, 2026, 03:15 AM ISTUpdated : Jan 09, 2026, 03:31 AM IST
China

ಸಾರಾಂಶ

‘ಆಪರೇಷನ್‌ ಸಿಂದೂರ’ ವೇಳೆ ಭಾರತದ ದಾಳಿ ತಡೆಯಲು ವಿಫಲವಾದ ಚೀನಾ ನಿರ್ಮಿತ ಸೇನಾ ಉಪಕರಣಗಳು ಇತ್ತೀಚೆಗೆ ವೆನಿಜುವೆಲಾದಲ್ಲೂ ಅಮೆರಿಕ ದಾಳಿ ವೇಳೆ ಇದೇ ರೀತಿ ವೈಫಲ್ಯ ಕಂಡು ಭಾರೀ ಮುಖಭಂಗಕ್ಕೆ ಈಡಾಗಿವೆ ಎಂಬ ವಿಷಯ ಬೆಳಕಿಗೆ ಬಂದಿದೆ.

 ನವದೆಹಲಿ : ‘ಆಪರೇಷನ್‌ ಸಿಂದೂರ’ ವೇಳೆ ಭಾರತದ ದಾಳಿ ತಡೆಯಲು ವಿಫಲವಾದ ಚೀನಾ ನಿರ್ಮಿತ ಸೇನಾ ಉಪಕರಣಗಳು ಇತ್ತೀಚೆಗೆ ವೆನಿಜುವೆಲಾದಲ್ಲೂ ಅಮೆರಿಕ ದಾಳಿ ವೇಳೆ ಇದೇ ರೀತಿ ವೈಫಲ್ಯ ಕಂಡು ಭಾರೀ ಮುಖಭಂಗಕ್ಕೆ ಈಡಾಗಿವೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಇದರಿಂದಾಗಿ ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ರಫ್ತು ದೇಶಗಳ ಪೈಕಿ ಒಂದಾಗಿರುವ ಚೀನಾದ ಸೇನಾ ಉಪಕರಣಗಳನ್ನು ಜಾಗತಿಕ ಸಮುದಾಯ ಅನುಮಾನದ ಕಣ್ಣಿನಿಂದ ನೋಡುವಂತೆ ಮಾಡಿದೆ. ಅಲ್ಲದೆ ವಿಶ್ವಾಸಾರ್ಹ ರಕ್ಷಣಾ ಪಾಲುದಾರ ಎಂಬ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ.

ವೆನಿಜುವೆಲಾದ ಮೇಲೆ ದಾಳಿ

ಜ.3ರಂದು ಅಮೆರಿಕ ಎಫ್-22 ಹಾಗೂ ಎಫ್-35 ಯುದ್ಧವಿಮಾನಗಳನ್ನು ಬಳಸಿ ವೆನಿಜುವೆಲಾದ ಮೇಲೆ ದಾಳಿ ನಡೆಸಿತ್ತು. ಜೊತೆಗೆ ಇಡೀ ಕಾರ್ಯಾಚರಣೆಯಲ್ಲಿ 250ಕ್ಕೂ ಯುದ್ಧ ವಿಮಾನಗಳನ್ನು ಬಳಸಿತ್ತು. ಇಷ್ಟೊಂದು ಪ್ರಮಾಣದಲ್ಲಿ ಯುದ್ಧ ವಿಮಾನಗಳ ಬಳಕೆ ಆದರೂ ಅವುಗಳ ಯಾವುದೇ ಚಲನವಲನ ಪತ್ತೆ ಮಾಡುವಲ್ಲಿ ವೆನಿಜುವೆಲಾದಲ್ಲಿ ನಿಯೋಜಿತವಾಗಿರುವ ಜೆವೈ- 27ಎ ರಾಡಾರ್‌ಗಳು ಸಂಪೂರ್ಣ ವಿಫಲವಾಗಿವೆ. ಈ ರಾಡಾರ್‌ಗಳು ಸ್ಟೆಲ್ತ್‌ ಸಾಮರ್ಥ್ಯ ಹೊಂದಿರುವ ಎಫ್‌ -35 ವಿಮಾನಗಳನ್ನು ಅತ್ಯಂತ ಸುಲಭವಾಗಿ ಪತ್ತೆ ಹಚ್ಚಬಲ್ಲವು ಎಂದೆಲ್ಲಾ ಬಣ್ಣಿಸಲಾಗಿತ್ತು. ಆದರೆ ಅದೆಲ್ಲಾ ಸುಳ್ಳು ಎಂದು ಸಾಬೀತಾಗಿದೆ.

ಇದರ ಜೊತೆಗೆ, ಚೀನಾ ನಿರ್ಮಿತ ವಿಎನ್-4 ಬೆಂಬಲ ವಾಹನಗಳು, ವಿಎನ್-1 ಮತ್ತು ವಿಎನ್-18 ಯುದ್ಧ ವಾಹನಗಳು, ಕೆ-8 ಯುದ್ಧ ವಿಮಾನಗಳನ್ನು ಕೂಡಾ ವೆನಿಜುವೆಲಾ ತನ್ನ ಬತ್ತಳಿಕೆಯಲ್ಲಿ ಇಟ್ಟುಕೊಂಡಿದೆಯಾದರೂ ಅದ್ಯಾವುದೂ ಅಮೆರಿಕ ದಾಳಿಯನ್ನು ಕಿಂಚಿತ್ತೂ ಪತ್ತೆಹಚ್ಚುವಲ್ಲಿ ಅಥವಾ ತಡೆಯುವಲ್ಲಿ ವಿಫಲವಾಗಿದೆ.

ಪಾಕ್‌ ಸೇನಾ ನೆಲೆಗಳನ್ನು ಧ್ವಂಸಗೊಳಿಸಿದ್ದವು

ಈ ಮೊದಲು ಆಪರೇಷನ್ ಸಿಂದೂರದ ವೇಳೆ ಭಾರತದ ಯುದ್ಧ ವಿಮಾನಗಳು, ಕ್ಷಿಪಣಿಗಳು ಪಾಕಿಸ್ತಾನದ ವಾಯುರಕ್ಷಣಾ ವ್ಯವಸ್ಥೆಯನ್ನು ಯಶಸ್ವಿಯಾಗಿ ಭೇದಿಸಿ ಉಗ್ರರ ನೆಲೆಗಳು, ಪಾಕ್‌ ಸೇನಾ ನೆಲೆಗಳನ್ನು ಧ್ವಂಸಗೊಳಿಸಿದ್ದವು.  

ಆಗ ಪಾಕಿಸ್ತಾನದಲ್ಲಿ ನಿಯೋಜಿತ ಚೀನಾ ನಿರ್ಮಿತ ಎಚ್‌ಕ್ಯೂ-9 ವಾಯುರಕ್ಷಣಾ ವ್ಯವಸ್ಥೆ ಸಂಪೂರ್ಣ ವಿಫಲವಾಗಿತ್ತು. ಜೆ-10ಸಿ ಮತ್ತು ಜೆಎಫ್-17 ಯುದ್ಧವಿಮಾನಗಳು, ಪಿಎಲ್-15 ಕ್ಷಿಪಣಿಗಳು ಸಹ ಪರಿಣಾಮಕಾರಿಯಾಗಿ ಕೆಲಸ ಮಾಡಲಿಲ್ಲ. ಭಾರತದ ಸ್ವದೇಶಿ ಆಯುಧಗಳು ಮತ್ತು ಸುಧಾರಿತ ತಂತ್ರಜ್ಞಾನಗಳ ಮುಂದೆ ಚೀನಾ ತಂತ್ರಜ್ಞಾನಗಳು ಮಂಡಿಯೂರಿದವು.

ಈ ಎರಡೂ ಬೆಳವಣಿಗೆಗಳು ಚೀನಾ ಶಸ್ತ್ರಾಸ್ತ್ರಗಳ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಬಗ್ಗೆ ಜಾಗತಿಕವಾಗಿ ಸಂದೇಹಗಳನ್ನು ಹುಟ್ಟುಹಾಕಿದೆ.

- ಚೀನಾದ ಮೇಲೆ ಭಾರಿ ನಂಬಿಕೆ ಇಟ್ಟು ಹಲವು ರಾಡಾರ್‌ಗಳನ್ನು ಖರೀದಿಸಿದ್ದ ವೆನಿಜುವೆಲಾ

- ಕಣ್ತಪ್ಪಿಸಿ ಬರುವ ವಿಮಾನಗಳನ್ನೂ ತನ್ನ ರಾಡಾರ್‌ಗಳು ಪತ್ತೆ ಹಚ್ಚುತ್ತವೆ ಎಂದು ಹೇಳಿದ್ದ ಚೀನಾ

- ಜ.3ರಂದು ವೆನಿಜುವೆಲಾ ಮೇಲೆ ದಾಳಿ ನಡೆಸಿದ್ದ ಅಮೆರಿಕದ 250ಕ್ಕೂ ಅಧಿಕ ವಿಮಾನಗಳು

- ಆದರೆ ಈ ವಿಮಾನಗಳ ಚಲನವಲನ ಪತ್ತೆ ಹಚ್ಚುವಲ್ಲಿ ವಿಫಲವಾದ ಚೀನಿ ನಿರ್ಮಿತ ರಾಡಾರ್‌

- ಚೀನಾ ನಿರ್ಮಿತ ಹಲವು ಉಪಕರಣಗಳನ್ನು ವೆನಿಜುವೆಲಾ ಬಳಸುತ್ತಿದ್ದರೂ ಉಪಯೋಗಕ್ಕೆ ಬಂದಿಲ್ಲ

- ‘ಸಿಂದೂರ’ ವೇಳೆಯೂ ಪಾಕ್‌ ಮೇಲೆ ಭಾರತದ ದಾಳಿಯನ್ನು ತಡೆಯಲು ವಿಫಲವಾಗಿದ್ದ ಚೀನಾ ಅಸ್ತ್ರ

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಗ್ರೀನ್‌ಲ್ಯಾಂಡ್‌ ಜನರನ್ನೇ ಖರೀದಿಸಲು ಹೊರಟ ಅಮೆರಿಕ! - ಪ್ರತಿ ವ್ಯಕ್ತಿಗೆ ₹9ರಿಂದ 90 ಲಕ್ಷ
ಇರಾನ್‌ನಲ್ಲಿ ಖಮೇನಿ ವಿರುದ್ಧ ಪ್ರತಿಭಟನೆ ಮತ್ತಷ್ಟು ತೀವ್ರ